ಆನೇಕಲ್: 2023ರಲ್ಲಿ ಸಂಭವಿಸಿದ ಪಟಾಕಿ ದುರಂತದಿಂದ ಪಟಾಕಿ ಅಂಗಡಿಗಳು ಕಡಿಮೆಯಾಗಿದ್ದು, ನೆರೆ ರಾಜ್ಯ ತಮಿಳುನಾಡಿನಲ್ಲಿ ಪಟಾಕಿಗಳ ವ್ಯಾಪಾರ ಭರ್ಜರಿಯಾಗಿ ಸಾಗುತ್ತಿದೆ. ತಾಲ್ಲೂಕಿನ ಗಡಿ ಭಾಗದಲ್ಲಿ ಅಲ್ಲೊಂದು ಇಲ್ಲೊಂದು ಪಟಾಕಿ ಅಂಗಡಿಗಳು ತಲೆ ಎತ್ತಿದ್ದು, ಗ್ರಾಹಕರು ಪಟಾಕಿ ಕೊಳ್ಳಲು ಮುಗಿಬಿದ್ದಿದ್ದರು.
2023ರಲ್ಲಿ ಪಟಾಕಿ ದಾಸ್ತಾನು ಮಳಿಗೆಗೆ ಅಗ್ನಿ ಅಕಸ್ಮಿಕದಿಂದ 16 ಮಂದಿ ಬೆಂಕಿಗಾಹುತಿಯಾದ ಘಟನೆಯ ಹಿನ್ನೆಲೆಯಲ್ಲಿ ಪಟಾಕಿಗಳ ಅಂಗಡಿ ಮಳಿಗೆ ತೆರೆಯಲು ಸರ್ಕಾರದ ವಿವಿಧ ಇಲಾಖೆಗಳು ಕಟ್ಟುನಿಟ್ಟಿನ ನಿಬಂಧನೆ ವಿಧಿಸಿವೆ. ಪೊಲೀಸ್, ಕಂದಾಯ ಇಲಾಖೆ, ಅಗ್ನಿಶಾಮಕ ದಳ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಸ್ಥಳೀ ಪುರಸಭೆ ಜಂಟಿ ಸಮೀಕ್ಷೆ ನಡೆಸಿ ವರದಿ ನೀಡಿದೆ. ಹಾಗಾಗಿ ಜಿಲ್ಲಾಧಿಕಾರಿಗಳು ಮತ್ತು ನ್ಯಾಯಾಲಯದ ಆದೇಶದಂತೆ ಕಾಯಂ ಪರವಾನಗಿ ಹೊಂದಿರುವವರು ಮಾತ್ರ ಪಟಾಕಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ.
ನಿಯಮಗಳು ಹೆಚ್ಚಾಗಿರುವುದರಿಂದ ಪಟಾಕಿ ಅಂಗಡಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಕಡಿಮೆಯಾಗಿದೆ. ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 12, ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂಬತ್ತು ಮಳಿಗೆ ತೆರಯಲಾಗಿದೆ. ನೆರಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರತಿ ವರ್ಷ 30ಕ್ಕೂ ಹೆಚ್ಚು ಪಟಾಕಿ ಅಂಗಡಿಗಳು ಇರುತ್ತಿದ್ದವು. ಆದರೆ ಈ ವರ್ಷ ಪಟಾಕಿ ಅಂಗಡಿಗಳ ಸಂಖ್ಯೆ 9ಕ್ಕಿಳಿದಿದೆ. ಬೊಮ್ಮಸಂದ್ರ ಪುರಸಭೆ ಮತ್ತು ಹೆಬ್ಬಗೋಡಿ ನಗರಸಭೆ ವ್ಯಾಪ್ತಿಯಲ್ಲಿ ಒಂದೂ ಪಟಾಕಿ ಅಂಗಡಿಯೂ ಇಲ್ಲ.
ತಾಲ್ಲೂಕಿನ ಹೆಬ್ಬಗೋಡಿ, ಬೊಮ್ಮಸಂದ್ರ, ಚಂದಾಪುರ, ತಿರುಮಗೊಂಡನಹಳ್ಳಿ ಗೇಟ್, ನೆರಳೂರು, ಯಾರಂಡಹಳ್ಳಿ, ಅತ್ತಿಬೆಲೆಯವರೆಗೂ ಕರ್ನಾಟಕದಲ್ಲಿ ಪಟಾಕಿ ಅಂಗಡಿಗಳೇ ಅಬ್ಬರವಿರುತ್ತಿತ್ತು. ಆದರೆ ನಿಬಂಧನೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪಟಾಕಿ ಅಂಗಡಿಗಳು ವಿರಳವಾಗಿವೆ.
ಪಟಾಕಿ ಅಂಗಡಿ ತೆರೆಯಲು ಏಳಕ್ಕೂ ಹೆಚ್ಚು ಇಲಾಖೆಗಳಿಂದ ಅನುಮತಿ ಪಡೆಯಬೇಕು. ನಿಬಂಧನೆಗಳು ಹೆಚ್ಚಾಗಿರುವುದರಿಂದ ಅಂಗಡಿಗಳ ಸಂಖ್ಯೆಯೂ ಕಡಿಮೆಯಾಗಿದೆ. ಹಾಗಾಗಿ ಜನರು ತಮಿಳುನಾಡಿನ ಅಂಗಡಿಗಳತ್ತ ಮುಗಿಬಿದ್ದಿದ್ದಾರೆ. ತಾಲ್ಲೂಕಿನ ಗಡಿಭಾಗ ಅತ್ತಿಬೆಲೆಯಿಂದ ಕೂಗಳತೆಯ ದೂರದಲ್ಲಿರುವ ಹೊಸೂರು, ಜೂಜುವಾಡಿಯಲ್ಲಿ ನೂರಾರು ಅಂಗಡಿಗಳಿದ್ದು ಪಟಾಕಿಗಳನ್ನು ಖರೀದಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ರಿಯಾಯಿತಿ ಜೋರು: ಅತ್ತಿಬೆಲೆ ಗಡಿ ದಾಟುತ್ತಿದ್ದಂತೆ ತಮಿಳುನಾಡಿನಲ್ಲಿ ಪಟಾಕಿ ಅಂಗಡಿಗಳ ಸದ್ದು ಜೋರಾಗಿವೆ. ಎಲ್ಲೆಡೆ ಶೇ 90, ಶೇ 95 ರಿಯಾಯಿತಿ ನೀಡುವುದಾಗಿ ಕೂಗುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ತಾಲ್ಲೂಕಿನ ಅಂಗಡಿಗಳ ಮುಂದೆ ಯುವಕರು ಸಿಳ್ಳೆ ಹಾಕಿ ರಿಯಾಯಿತಿ... ರಿಯಾಯಿತಿ..ಎಂದು ಕೂಗುತ್ತಿದ್ದ ದೃಶ್ಯಗಳು ಕಂಡು ಬಂದವು.
ತಮಿಳುನಾಡಿನ ಶಿವಕಾಶಿಯಲ್ಲಿ ಪಟಾಕಿಗಳು ತಯಾರಾಗುತ್ತವೆ. ಹಾಗಾಗಿ ಈ ಭಾಗದಲ್ಲಿ ಕಡಿಮೆ ಬೆಲೆಗೆ ಪಟಾಕಿಗಳು ದೊರೆಯುತ್ತವೆ ಎಂದು ರಾಜ್ಯದ ವಿವಿಧೆಡೆಯಿಂದ ಗ್ರಾಹಕರು ಪಟಾಕಿಗಳನ್ನುಕೊಳ್ಳಲು ಅತ್ತಿಬೆಲೆ ಮತ್ತು ತಮಿಳುನಾಡಿನ ಹೊಸೂರಿಗೆ ಸಾವಿರಾರು ಮಂದಿ ಬರುತ್ತಾರೆ.
ಸುರಕ್ಷತೆ ಮರುಶೀಲನೆ: ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಗಡಿಯಿಂದ ಹೆಬ್ಬಗೋಡಿಯವರೆಗೂ 25ಕ್ಕೂ ಹೆಚ್ಚು ಪಟಾಕಿ ಅಂಗಡಿಗಳಿವೆ. ಅಂಗಡಿಗಳಲ್ಲಿ ಅಗ್ನಿ ಸುರಕ್ಷತೆ, ಬೆಸ್ಕಾಂ ವಿದ್ಯುತ್ ಲೈನ್‌ಗಳ ಬಗ್ಗೆ ಮರುಪರಿಶೀಲನೆ ಮತ್ತು ಜಾಗೃತಿ ವಹಿಸುವ ಅವಶ್ಯಕತೆಯಿದೆ. ಅಂಗಡಿಗಳ ಮುಂದೆ ಒಂದೆರೆಡು ಬಕೆಟ್‌ಗಳಲ್ಲಿ ನೀರಿಟ್ಟಿರುತ್ತಾರೆ. ಮತ್ತಷ್ಟು ಸುರಕ್ಷತೆಗಳನ್ನು ವಹಿಸುವ ಅವಶ್ಯಕತೆಯಿದೆ. ಜಿಎಸ್‌ಟಿ ರಶೀದಿ, ಮತ್ತು ಅಂಗಡಿಗಳಲ್ಲಿ ಸುರಕ್ಷತೆಯ ಮುನ್ನೆಚ್ಚರಿಕೆ ಕ್ರಮಗಳನ್ನು ಬಗ್ಗೆ ಹೆಚ್ಚು ಗಮನ ವಹಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.
ಪಟಾಕಿ ಕೊಳ್ಳಲು ಅತ್ತಿಬೆಲೆ ಚಂದಾಪುರ ಹೊಸೂರು ಸೂಕ್ತ ಸ್ಥಳವಾಗಿದೆ. ಪ್ರತಿವರ್ಷ ಪಟಾಕಿ ಕೊಳ್ಳಲು ನೆರಳೂರಿಗೆ ಬರುತ್ತೇವೆಶಂಕರ್ ಆಂಧ್ರಪ್ರದೇಶದ ಕದ್ರಿ ನಿವಾಸಿ
ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯು ಪ್ರಗತಿಯಲ್ಲಿರುವುದರಿಂದ ವ್ಯಾಪಾರಕ್ಕೆ ಅಲ್ಪ ನಷ್ಟವಾಗಿದೆ. ಗ್ರಾಹಕರು ಕಾಮಗಾರಿಯಿಂದಾಗಿ ಹೊಸೂರಿಗೆ ತೆರಳುತ್ತಿದ್ದಾರೆ. ಆನ್‌ಲೈನ್ ಪಟಾಕಿ ಮಾರಾಟದ ನಡುವೆ ಅಂಗಡಿಗಳನ್ನು ತೆರೆಯುವುದೇ ಸವಾಲಾಗಿದೆರಾಮಸ್ವಾಮಿ ಪಟಾಕಿ ಮಳಿಗೆ ಮಾಲೀಕ
ಆನ್‌ಲೈನ್ ಮಾರಾಟದಿಂದ ಕುಸಿದ ವ್ಯಾಪಾರ 30 ವರ್ಷಗಳಿಂದ ನೆರಳೂರಿನಲ್ಲಿ ಪಟಾಕಿ ಮಳಿಗೆ ನಡೆಸುತ್ತಿದ್ದೇವೆ. ನಿಬಂಧನೆಗಳು ಹೆಚ್ಚಾಗಿರುವುದರಿಂದ ಪಟಾಕಿ ಅಂಗಡಿ ತೆರೆಯುವುದೇ ಕಷ್ಟವಾಗಿದೆ. ಆನ್‌ಲೈನ್‌ನಲ್ಲಿ ಪಟಾಕಿ ಖರೀದಿ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದರಿಂದ ನಮ್ಮ ವ್ಯಾಪಾರವು ಕಡಿಮೆಯಾಗಿದೆ. ಪಟಾಕಿಗಳನ್ನು ಹೋಂ ಡಿಲೇವರಿ ಸಹ ಮಾಡುತ್ತಿದ್ದಾರೆ. ಈಗಾದರೆ ಮುಂದಿನ ದಿನಗಳಲ್ಲಿ ಪಟಾಕಿ ಅಂಗಡಿ ನಡೆಸುವುದೇ ಕಷ್ಟವಾಗುತ್ತದೆ ಎಂದು ಅಂಗಡಿಯೊಂದರ ಮಾಲೀಕ ರಾಮಸ್ವಾಮಿ ತಿಳಿಸಿದರು.
ವಾಹನ ದಟ್ಟಣೆ ಅತ್ತಿಬೆಲೆ ಗಡಿಭಾಗದಲ್ಲಿ ಪಟಾಕಿ ಅಂಗಡಿಗಳ ಸ್ಥಾಪನೆಯಿಂದ ಶನಿವಾರದಿಂದಲೂ ಅತ್ತಿಬೆಲೆಯಲ್ಲಿ ವಾಹನ ದಟ್ಟಣೆ ಉಂಟಾಗಿತ್ತು. ರಾಷ್ಟ್ರೀಯ ಹೆದ್ದಾರಿಯ 44ರಲ್ಲಿ ಕಿ.ಮೀಗಟ್ಟಲೇ ದೂರ ವಾಹನಗಳ ಸಾಲು ಕಂಡು ಬಂದಿತು. ದೀಪಾವಳಿಗೆ ಹಬ್ಬಕ್ಕಾಗಿ ತೆರಳುವ ಜನರು ಅತ್ತಿಬೆಲೆಯಲ್ಲಿ ಗಂಟೆಗಟ್ಟಲೇ ಕಾದಿದ್ದರು. ದೀಪಾವಳಿ ಹಬ್ಬ ಸಮೀಪಿಸುತ್ತಿರುವುದರಿಂದ ವಾರಂತ್ಯಗಳಲ್ಲಿ ಪಟಾಕಿ ಕೊಳ್ಳಲು ಹೆಚ್ಚಿನ ಜನರು ಆಗಮಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.