ಆನೇಕಲ್ ತಾಲ್ಲೂಕಿನ ಗಡಿಭಾಗದ ಅತ್ತಿಬೆಲೆಯಲ್ಲಿ ಪಟಾಕಿ ಮಳಿಗೆಯೊಂದರಲ್ಲಿ ಪಟಾಕಿ ಹೊತ್ತುಕೊಂಡು ಉರಿಯುತ್ತಿರುವುದು
ಆನೇಕಲ್: ದೀಪಾವಳಿಗೂ ಮುನ್ನವೇ ತಾಲ್ಲೂಕಿನ ಗಡಿಭಾಗ ಅತ್ತಿಬೆಲೆ ಸುತ್ತಮುತ್ತ ಪಟಾಕಿ ಮಾರಾಟದ ಅಬ್ಬರ ಪಟಾಕಿ ಸದ್ದಿಗಿಂತ ಜೋರಾಗಿರುತ್ತದೆ.
ತಮಿಳುನಾಡಿನ ಶಿವಕಾಶಿ ಹಾಗೂ ಸುತ್ತಮುತ್ತಲ ಕಾರ್ಖಾನೆಗಳಿಂದ ಬಗೆ, ಬಗೆಯ ಪಟಾಕಿ ನೇರವಾಗಿ ಇಲ್ಲಿಗೆ ಬರುತ್ತವೆ. ದೀಪಾವಳಿಯಲ್ಲಿ ಲಕ್ಷಾಂತರ ರೂಪಾಯಿ ಪಟಾಕಿ ವಹಿವಾಟು ನಡೆಯುತ್ತದೆ. ಆದರೆ, 2023ರ ಪಟಾಕಿ ದುರಂತದ ನಂತರ ಅತ್ತಿಬೆಲೆಯಲ್ಲಿ ಪಟಾಕಿಗಳ ಮಾರಾಟ, ಅಬ್ಬರ ಕಳೆಗುಂದಿದೆ.
ಪಟಾಕಿ ಅಂಗಡಿ ಮತ್ತು ಸಗಟು ವಹಿವಾಟು ಅತ್ತಿಬೆಲೆ ಗಡಿಯಿಂದ ಹೊಸೂರಿನ ಜೂಜುವಾಡಿ, ಸರ್ಜಾಪುರ ಪಕ್ಕದ ಕಗ್ಗನೂರಿಗೆ ಸ್ಥಳಾಂತರವಾಗಿದೆ.
2023ರ ಅಕ್ಟೋಬರ್ 7ರಂದು ನಡೆದ ಪಟಾಕಿ ದುರಂತದಲ್ಲಿ 10ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಆ ದುರಂತದ ಕರಿಛಾಯೆ ಅತ್ತಿಬೆಲೆಯಲ್ಲಿ ಪಟಾಕಿ ವಹಿವಾಟು ಮೇಲೆ ಬಿದ್ದಿದೆ. ಪಟಾಕಿ ಮಳಿಗೆ, ಗೋದಾಮು ತೆರೆಯಲು ಹಲವು ಇಲಾಖೆಗಳಿಂದ ಅನುಮತಿ ಪಡೆಯಬೇಕಾಗಿದೆ.
2024ರಲ್ಲಿಯೂ ಪಟಾಕಿ ಅಂಗಡಿಗಳ ಸಂಖ್ಯೆ ಕಡಿಮೆ ಇತ್ತು. ಸ್ಥಳೀಯ ಸಂಸ್ಥೆ, ಕಂದಾಯ, ಪೊಲೀಸ್, ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿ ಶಾಮಕ ದಳ ಸೇರಿದಂತೆ ವಿವಿಧ ಇಲಾಖೆಗಳಿಂದ ಅನುಮತಿ ಪಡೆಯಬೇಕಾಗಿದೆ.
ಪರಿಸರ ಸ್ನೇಹಿ ದೀಪಾವಳಿ ಆಚರಣೆಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿ ಹಸಿರು ಪಟಾಕಿ ಮಾರಾಟಕ್ಕೆ ಅನುಮತಿ ನೀಡಿದೆ. ಅತ್ತಿಬೆಲೆಯಲ್ಲಿ ಪಟಾಕಿ ಸಿಗದಿದ್ದಾಗ ಪಕ್ಕದ ತಮಿಳುನಾಡಿನ ಗಡಿಯಿಂದ ಪಟಾಕಿ ತರಲಾಗುತ್ತಿದೆ. ಈ ಭಾಗದಲ್ಲಿ ವರ್ಷ ಪೂರ್ತಿ ಪಟಾಕಿ ಅಂಗಡಿಗಳು ತೆರೆದಿರುತ್ತವೆ.
ಗಡಿಭಾಗ ಅತ್ತಿಬೆಲೆಯಲ್ಲಿ 2023ರಲ್ಲಿ ನಡೆದ ಪಟಾಕಿ ದುರಂತ ಘಟನೆಯು ಈ ಭಾಗದ ಜನರಲ್ಲಿ ಇನ್ನೂ ಮಾಸಿಲ್ಲ. ಯುವಕರ ಬೆಂದ ದೇಹಗಳು ಕಣ್ಣಿನ ಮುಂದೆಯೇ ಇದೆ. ಈ ನಡುವೆ ಪಟಾಕಿಗಳನ್ನು ಬಳಕೆ ಮಾಡಬಾರದು ಎಂಬುದು ನಮ್ಮ ಸಂಕಲ್ಪಸುನೀಲ್, ದಾಸನಪುರ
ಹೆಸರಿಗಷ್ಟೇ ಸೀಮಿತ
ಹಸಿರು ಪಟಾಕಿ ಬಳಕೆ ಕೇವಲ ಹೆಸರಿಗಷ್ಟೇ. ಆನೇಕಲ್ ತಾಲ್ಲೂಕು ಗಡಿ ಭಾಗದಲ್ಲಿರುವುದರಿಂದ ತಮಿಳುನಾಡಿ ಹೊಸೂರು, ಜೂಜುವಾಡಿ, ಕಗ್ಗನೂರುಗಳಲ್ಲಿ ಪಟಾಕಿ ಅಂಗಡಿಗಳು ತೆರೆದಿರುವುದರಿಂದ ಈ ಭಾಗದ ಜನರು ಅಲ್ಲಿ ಪಟಾಕಿ ಕೊಳ್ಳುತ್ತಾರೆ. ಹಸಿರು ಪಟಾಕಿಗಳ ಬಳಕಯೇ ಕಡಿಮೆ ಇದೆಕೃಷ್ಣ, ಆನೇಕಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.