ADVERTISEMENT

ಆನೇಕಲ್: ಕಲುಷಿತ ನೀರಿನಿಂದ ಮೀನುಗಳ ಸಾವು

​ಪ್ರಜಾವಾಣಿ ವಾರ್ತೆ
Published 1 ಜುಲೈ 2020, 5:23 IST
Last Updated 1 ಜುಲೈ 2020, 5:23 IST
ಆನೇಕಲ್ ತಾಲ್ಲೂಕಿನ ಕೋನಸಂದ್ರ ಕೆರೆಗೆ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ನೀರು ಹರಿದ ಪರಿಣಾಮವಾಗಿ ಸಾವಿರಾರು ಮೀನುಗಳು ಸತ್ತಿವೆ
ಆನೇಕಲ್ ತಾಲ್ಲೂಕಿನ ಕೋನಸಂದ್ರ ಕೆರೆಗೆ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ನೀರು ಹರಿದ ಪರಿಣಾಮವಾಗಿ ಸಾವಿರಾರು ಮೀನುಗಳು ಸತ್ತಿವೆ   

ಆನೇಕಲ್: ತಾಲ್ಲೂಕಿನ ಕೋನಸಂದ್ರ ಕೆರೆಗೆ ಕೈಗಾರಿಕೆಗಳ ರಾಸಾಯನಿಕ ತ್ಯಾಜ್ಯ ನೀರು ಹರಿದ ಪರಿಣಾಮವಾಗಿ ಕೆರೆಯಲ್ಲಿ ಸಾವಿರಾರು ಮೀನುಗಳು ಸತ್ತಿವೆ.

ತಾಲ್ಲೂಕಿನ ಜಿಗಣಿ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಕೋನಸಂದ್ರ ಕೆರೆಯಿದೆ. ಈ ಭಾಗದಲ್ಲಿ ಹಲವು ವರ್ಷಗಳಿಂದ ರೈತರ ಜೀವನಾಡಿಯಾಗಿದ್ದ ಕೆರೆ ಇತ್ತೀಚಿನ ದಿನಗಳಲ್ಲಿ ಮಲಿನಗೊಂಡಿದೆ. ರೈತರು ಕೆರೆ ನೀರನ್ನು ಬಳಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಗೆ ಹೊಂದಿಕೊಂಡಂತಿರುವ ರಾಸಾಯನಿಕ ಕಾರ್ಖಾನೆಗಳು ಮಳೆಯ ನೀರಿನ ಜೊತೆಗೆ ಕಾರ್ಖಾನೆಯ ತ್ಯಾಜ್ಯವನ್ನು ಬಿಡುತ್ತಿರುವುದರಿಂದ ಕೆರೆಯು ಕಲುಷಿತವಾಗುತ್ತಿದೆ.

ಸುತ್ತಮುತ್ತಲ ಗ್ರಾಮಗಳ ರೈತರು ಹಲವಾರು ಬಾರಿ ಪ್ರತಿಭಟನೆಯನ್ನು ನಡೆಸಿ ಪರಿಸರ ಇಲಾಖೆಗೆ ಮನವಿ ಸಲ್ಲಿಸಿ ಕೆರೆ ಉಳಿಸಲು ಒತ್ತಾಯಿಸಿದ್ದರು. ಪ್ರತಿಭಟನೆಯ ಸಂದರ್ಭದಲ್ಲಿ ತ್ಯಾಜ್ಯ ನೀರನ್ನು ಬಿಡುವುದಿಲ್ಲ ಎಂದು ಭರವಸೆ ನೀಡುವ ಕೈಗಾರಿಕೆಗಳು ಮಳೆ ಬರುತ್ತಿದ್ದಂತೆ ಮಳೆ ನೀರಿನ ಜೊತೆಗೆ ಕೈಗಾರಿಕೆಗಳ ತ್ಯಾಜ್ಯವನ್ನು ಕೆರೆಗೆ ಬಿಡುತ್ತಿರುವುದರಿಂದ ಕೆರೆ ಸಂಪೂರ್ಣ ಕಲುಷಿತವಾಗಿದೆ ಎಂದು ಕೋನಸಂದ್ರ ದೇವರಾಜ ಆರೋಪಿಸಿದ್ದಾರೆ.

ADVERTISEMENT

ಕುಮಾರ್‌ ಅರ್ಗಾನಿಕ್‌, ಸೈಲೆನ್ಸ್‌ ಫಾರ್ಮ, ಶಿವಶಕ್ತಿ ಕಂಪನಿ, ಹೈಕಲ್‌, ಏಸ್‌ ಫ್ಲೈಟ್‌ ಸೇರಿದಂತೆ ಹಲವಾರು ರಾಸಾಯನಿಕ ಕಾರ್ಖಾನೆಗಳು ಹೊಂದಿಕೊಂಡಿವೆ. ಇವುಗಳಿಂದಾಗಿ ಕೆರೆ ಕಲುಷಿತವಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಕೆರೆಗಳನ್ನು ಉಳಿಸುವುದು ಸರ್ಕಾರದ ಜವಬ್ದಾರಿಯಾಗಿದೆ. ಕೆರೆ ನೀರು ಮಾಲಿನ್ಯವಾಗದಂತೆ ಕ್ರಮ ಕೈಗೊಳ್ಳಬೇಕು. ಕೈಗಾರಿಕಾ ತ್ಯಾಜ್ಯಗಳು ಕೆರೆಗೆ ಬರದಂತೆ ತಡೆಯಬೇಕು. ಪ್ರತಿ ಕಂಪನಿಗಳು ತ್ಯಾಜ್ಯ ವಿಲೇವಾರಿಗೆ ವೈಜ್ಞಾನಿಕ ವಿಧಾನ ಅನುಸರಿಸಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸಬೇಕು. ಈ ಸಂಬಂಧ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸ್ಥಳೀಯರಾದ ಮುನಿರಾಜು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.