ADVERTISEMENT

ದೊಡ್ಡಬಳ್ಳಾಪುರ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದ ಸಾವು

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2023, 6:49 IST
Last Updated 17 ಸೆಪ್ಟೆಂಬರ್ 2023, 6:49 IST
   

ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ): ತಾಲ್ಲೂಕಿನ ಹೊಲೆರಹಳ್ಳಿ ಗ್ರಾಮದ ಹೊರವಲಯದ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದ ಬಂಗಾಳಿ ಕುಟುಂಬದ ನಾಲ್ವರು ಶನಿವಾರ ರಾತ್ರಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ.

ರಾಜ್‌ಕುಮಾರ್‌ ಸಾರ್ಕಿ (60), ಲಚುಮಿ ಸಾರ್ಕಿ (48), ಫೂಲ್‌ ಕುಮಾರಿ ವುರಾವೊ (35) ಹಾಗೂ ಕುಶಾಲ್‌ ಸಾರ್ಕಿ(16) ಮೃತರು. ಎಲ್ಲರೂ ಪಶ್ಚಿಮ ಬಂಗಾಳದ ನ್ಯೂ ಅಲಿಪುರ್‌ ದುವಾರ್‌ ಜಿಲ್ಲೆಯ ಸುಂಕೋಸ್‌ ಗ್ರಾಮದ ನಿವಾಸಿಗಳು. ತಿಂಗಳ ಹಿಂದೆಯಷ್ಟೇ ಕೋಳಿ ಫಾರಂಗೆ ಕೆಲಸಕ್ಕೆ ಬಂದಿದ್ದರು. 

ಸೊಳ್ಳೆಗಳಿಂದ ರಕ್ಷಿಸಿಕೊಳ್ಳಲು ಡಬ್ಬಿಯೊಂದರಲ್ಲಿ ಇದ್ದಿಲು ತುಂಬಿ ಹೊಗೆ ಹಾಕಿ ಮಲಗಿದ್ದರು. ಕೊಠಡಿಯ ಕಿಟಕಿ ಬಾಗಿಲುಗಳನ್ನು ಮುಚ್ಚಿದ್ದರಿಂದ ಉಸಿರುಗಟ್ಟಿ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ವಿಭಾಗದ ತಜ್ಞರು ಭೇಟಿ ನೀಡಿ ಪರಿಶೀಲಿಸಿದ್ದಾರೆ.  

ADVERTISEMENT

‘ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ರಾತ್ರಿ ಊಟವಾದ ನಂತರ ಎಲ್ಲರೂ ಒಂದೇ ಕೋಣೆಯಲ್ಲಿ ಮಲಗಿದ್ದರು. ಅಲ್ಲಿಯೇ ಮೃತಪಟ್ಟಿದ್ದಾರೆ. ತನಿಖೆ ನಡೆಯುತ್ತಿದೆ’ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ತಿಳಿಸಿದರು.

ಶವಗಳನ್ನು ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಸೋಮವಾರ ಮರಣೋತ್ತರ ಪರೀಕ್ಷೆಯ ನಂತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.