ದೊಡ್ಡಬಳ್ಳಾಪುರದಲ್ಲಿ ಶನಿವಾರ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಬೃಹತ್ ಜನ ಜಾಗೃತಿ ಜಾಥಾ ನಡೆಯಿತು
ದೊಡ್ಡಬಳ್ಳಾಪುರ: ಸತ್ಯ, ಅಹಿಂಸೆ ಗಾಂಧೀಜಿ ಅನುಸರಿಸಿದ ಪ್ರಬಲ ಅಸ್ತ್ರ. ಗಾಂಧೀಜಿ ತತ್ವಾದರ್ಶಗಳ ರೂಢಿಸಿಕೊಂಡರೆ ಸಮಾಜದಲ್ಲಿ ಪೊಲೀಸ್ ಠಾಣೆ ಅವಶ್ಯಕತೆಯೇ ಇರುವುದಿಲ್ಲ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಹೇಳಿದರು.
ನಗರದ ಎ.ಬಿ.ಎಂ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯಿಂದ ನಡೆದ ಗಾಂಧಿ ಸ್ಮೃತಿ, ದುಶ್ಚಟ ಮುಕ್ತ ಸಮಾಜದ ನಿರ್ಮಾಣಕ್ಕಾಗಿ ಬೃಹತ್ ಜನ ಜಾಗೃತಿ ಜಾಥಾ ಹಾಗೂ ಪಾನಮುಕ್ತರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಧೂಮಪಾನ, ಮದ್ಯಪಾನ ಮುಂತಾದ ದುಶ್ಚಟ ತ್ಯಜಿಸುವುದು ಮಾತಿಗೆ ಸೀಮಿತವಾಗುತ್ತಿದೆ. ಹೊರತು ಅನುಷ್ಠಾನಕ್ಕೆ ಬರುತ್ತಿಲ್ಲ. ಗಾಂಧೀಜಿ ತತ್ವಾದರ್ಶ ಅನುಸರಿಸಿದರೆ ಸಮಾಜದಲ್ಲಿ ಶಾಂತಿ ನೆಮ್ಮದಿ ನೆಲಸುತ್ತದೆ. ಬಸವಣ್ಣನವರ ವಚನಗಳ ಸಾರವನ್ನು ಅರಿತರೆ, ಯಾವುದೇ ಕಾನೂನಿನ ಸೆಕ್ಷನ್‌ಗಳು ಬೇಕಿರಲಿಲ್ಲ ಎಂದು ಹೇಳಿದರು.
ಇಂದಿನ ಒತ್ತಡದ ಬದುಕಿನಲ್ಲಿ ಜನ ಕುಡಿತಕ್ಕೆ ದಾಸರಾಗುತ್ತಿರುವುದು ಸಾಮಾನ್ಯವಾಗಿದೆ. ಆರೋಗ್ಯ ಹಾಗೂ ಸಮಾಜದ ಸ್ವಾಸ್ಥ್ಯ ಹಾಳು ಮಾಡುವ ದುಶ್ಚಟಗಳಿಂದ ಹೊರಬರಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮದ್ಯವರ್ಜನ ಶಿಬಿರಗಳು ಪ್ರಭಾವಶಾಲಿಯಾಗಿವೆ. ಮದ್ಯಮುಕ್ತ ಸಮಾಜದ ನಿರ್ಮಾಣದಿಂದ ಗಾಂಧಿ ಕನಸು ನನಸಾಗಿಸಬೇಕಿದೆ ಎಂದರು.
ಪುಷ್ಪಾಂಡಜ ಆಶ್ರಮದ ದಿವ್ಯಜ್ಞಾನಾನಂದಸ್ವಾಮೀಜಿ, ‘ನಮ್ಮಲ್ಲಿನ ಕೆಟ್ಟ ಭಾವನೆಗಳನ್ನು ಹೊರದೂಡಿ ಸದ್ಭಾವನೆ ಬೆಳೆಸಿಕೊಳ್ಳಬೇಕು. ಗಾಂಧೀಜಿ ಅವರ ಉಜ್ವಲ ಭಾರತದ ಕನಸನ್ನು ನನಸಾಗಿಸುವಲ್ಲಿ ದುಶ್ಚಟಗಳಿಂದ ದೂರ ಇರಬೇಕು’ ಎಂದರು.
ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಎಚ್.ಎಸ್.ನಾಗೇಶ್, ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಉಮರಬ್ಬ, ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ನಗರಸಭಾ ಸದಸ್ಯ ಟಿ.ಎನ್.ಪ್ರಭುದೇವ್, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ವಿ.ರಾಮಸ್ವಾಮಿ, ಜಿಲ್ಲಾ ಅಧ್ಯಕ್ಷ ಟಿ.ವೆಂಕಟೇಶ್, ಉಪಾಧ್ಯಕ್ಷ ವಿ.ನರಸಿಂಹರಾಜು, ಟಿ.ಜಿ.ಮಂಜುನಾಥ್, ರವಿ, ಕೆಂಪಣ್ಣ, ಟಿ.ಮುನಿರಾಜು, ಕೆ.ಮಹಾಲಿಂಗಯ್ಯ, ಶಿಕ್ಷಕ ಎಂ.ಎಸ್.ರಾಜಶೇಖರ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಸ್.ವಿ.ನಂಜುಂಡೇಶ್ವರಸ್ವಾಮಿ, ತಾಲ್ಲೂಕು ಯೋಜನಾಧಿಕಾರಿ ದಿನೇಶ್, ಮೇಲ್ವಿಚಾರಕ ಲೋಹಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.