ಆನೇಕಲ್ : ಪಟ್ಟಣದ ಕಲಾವಿದ ನಂಜುಂಡೇಶ್ವರ ಅವರ ಮನೆಯಲ್ಲಿ ತಯಾರಿಸಿರುವ ಬಗೆ ಬಗೆ ಗಣಪನ ಮೂರ್ತಿ ಹಾಗೂ ಮುದ್ದು ಮುದ್ದಾದ ಗುಂಡು ಗೌರಮ್ಮನ ಮೂರ್ತಿಗಳು ಎಲ್ಲರ ಆಕರ್ಷಣೆ ಆಗಿದೆ.
ಈ ಬಾರಿ ರೂಪಿಸಿರುವ ಗಣಪತಿಗಳಲ್ಲಿ ಸುಬ್ರಮಣ್ಯ ಗಣಪತಿ, ತ್ರಿಶೂಲ ಗಣಪತಿ, ಪಾಂಡುರಂಗ ಗಣಪತಿ, ಯಕ್ಷಗಾನ ಗಣಪತಿ, ಶಿವ ಗಣಪತಿ ವಿಶೇಷವಾಗಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಒಂದೊಂದು ಗಣಪ ಸಹ ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಬಗೆ ಬಗೆಯ ಗಣಪನನ್ನು ನೋಡಲು ಸಾರ್ವಜನಿಕರು ಗುಂಪು ಗುಂಪಾಗಿ ನಂಜುಂಡೇಶ್ವರ ಅವರ ಮನೆಗೆ ತೆರಳಿ ತಮಗೆ ಇಷ್ಟವಾದ ಗಣಪನನ್ನು ಖರೀದಿಸುವ ದೃಶ್ಯ ಸಾಮಾನ್ಯವಾಗಿದೆ. ಪರಿಸರ ಸ್ನೇಹಿ ಗಣಪನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆಯಿದೆ. ಹಾಗಾಗಿ ಪರಿಸರ ಸ್ನೇಹಿ ಗಣಪನ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ.
ಪಸುವಲಪೇಟೆ ಭಜನೆಮನೆ ರಸ್ತೆ ಮುತ್ತಮ್ಮ ಅವರ ಕುಟುಂಬ ತಯಾರು ಮಾಡುವ ಗಣಪನ ಮೂರ್ತಿಗಳಿಗೆ ವಲ್ಲಿ ಹೆಚ್ಚಿನ ಬೇಡಿಕೆಯಿದೆ. ಮುತ್ತಮ್ಮ ಅವರು ಕಳೆದ ಆರು ದಶಕಗಳಿಗೂ ಹೆಚ್ಚು ಕಾಲದಿಂದ ಗಣಪತಿಯನ್ನು ತಯಾರು ಮಾಡುವ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ.
ಮುತ್ತಮ್ಮ ಅವರ ಮಕ್ಕಳಾದ ನಂಜುಂಡೇಶ್ವರ, ವೇಣುಗೋಪಾಲ, ನಾಗರಾಜ, ಸೊಸೆಯರಾದ ಕಾತ್ಯಾಯಿಣಿ, ಲೀಲಾವತಿ, ಮಹೇಶ್ವರಿ ಮತ್ತು ಮೊಮ್ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲ ಗೌರಿ ಗಣಪನ ಮೂರ್ತಿಗಳನ್ನು ಸಿದ್ಧಪಡಿಸುವ ಕಾಯಕದಲ್ಲಿ ಆರು ತಿಂಗಳಿಗೂ ಹೆಚ್ಚು ಕಾಲ ತೊಡಗಿಸಿಕೊಳ್ಳುತ್ತಾರೆ.
ಬೆಂಗಳೂರು, ಆನೇಕಲ್ ತಾಲ್ಲೂಕಿನ ಚಂದಾಪುರ, ಹೆಬ್ಬಗೋಡಿ, ವಿವಿಧ ಗ್ರಾಮಗಳ ಜನರು ಗಣಪತಿಯನ್ನು ಕೊಳ್ಳಲು ಆಗಮಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.