ಆನೇಕಲ್: ಪಟ್ಟಣದ ವಿವಿಧಡೆ ಪುರಸಭೆ ವತಿಯಿಂದ ಸ್ವಚ್ಛತಾ ನಿರ್ವಹಣೆಗೆ ಹಲವು ಕ್ರಮಕೈಗೊಂಡಿದ್ದರೂ ಎಲ್ಲೆಂದರಲ್ಲಿ ಕಸ ಎಸೆಯುತ್ತಿರುವುದರಿಂದ ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗಿದೆ. ಪಟ್ಟಣಕ್ಕೆ ಸ್ವಾಗತ ಕೋರುವ ಸ್ವಾಗತ ಕಮಾನು ಮುಂಭಾಗದಲ್ಲಿಯೇ ಕಸದ ರಾಶಿ ಬಿದ್ದಿರುವುದು ದುರ್ನಾತ ಬಿರುತ್ತಿದೆ.
ಪುರಸಭೆ ವತಿಯಿಂದ ಸ್ವಚ್ಛತಾ ನಿರ್ವಹಣೆಗಾಗಿ ಕಸದ ಬ್ಲಾಕ್‌ಸ್ಪಾಟ್‌ಗಳಲ್ಲಿ ಬೃಹತ್ ಗಾತ್ರದ ಕಸದ ಬುಟ್ಟಿ ಇಡಲಾಗಿದೆ. ಹಸಿ ಮತ್ತು ಒಣ ಕಸ ವಿಂಗಡಿಸಿ ಕಸವನ್ನು ಹಾಕಲು ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಬೆಳಗಿನ ಜಾವದಲ್ಲಿ ಕಸವನ್ನು ಸಾರ್ವಜನಿಕರು ಕಸದ ಬುಟ್ಟಿಗೆ ಹಾಕದೇ ಕಸ ಮತ್ತು ತ್ಯಾಜ್ಯವನ್ನು ಕಸದ ಬುಟ್ಟಿ ಪಕ್ಕದಲ್ಲಿ ಹಾಕುತ್ತಿರುವುದರಿಂದ ಗಬ್ಬು ನಾರುತ್ತಿದೆ. ಕಸ ಮತ್ತು ತ್ಯಾಜ್ಯವನ್ನು ಸುರಿದಿರುವುದರಿಂದ ನಾಯಿಗಳ ಕಾಟ ಹೆಚ್ಚಾಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರರಿಗೆ ತೊಂದರೆಯಾಗಿದೆ.
ಪಟ್ಟಣದ ಡೇರಿ ಮುಂಭಾಗ, ಶಿವಾಜಿ ವೃತ್ತ, ಆನೇಕಲ್-ಚಂದಾಪುರ ಮುಖ್ಯ ರಸ್ತೆಯಲ್ಲಿ ಕಸವನ್ನು ಹಾಕುವ ನಿರ್ದಿಷ್ಟ ಜಾಗದ ವ್ಯವಸ್ಥೆ ಮಾಡಿ ಕಸ ಎಸೆಯಲು ಸುಸಜ್ಜಿತ ವ್ಯವಸ್ಥೆ ಮಾಡಲಾಗಿದೆ. ಆದರೆ, ಸಾರ್ವಜನಿಕರು ಕಸ ಹಾಕುವ ಸ್ಥಳದ ಪಕ್ಕದಲ್ಲಿಯೇ ಕಸ ಎಸೆದು ಹೋಗುತ್ತಿದ್ದಾರೆ. ಒಣ ಕಸ ಮತ್ತು ಹಸಿ ಕಸ ಹಾಕಲು ಪ್ರತ್ಯೇಕ ವ್ಯವಸ್ಥೆ ಮಾಡಿದ್ದರೂ ನಿಯಮ ಪಾಲಿಸದೆ ಕಸದ ಬುಟ್ಟಿ ಪಕ್ಕದಲ್ಲಿಯೇ ಕಸ ಸುರಿಯುತ್ತಿದ್ದಾರೆ. ‘ಕಸ ಮುಕ್ತ ನಗರ ನಾಗರಿಕರ ಕರ್ತವ್ಯ’ ಎಂಬ ಫಲಕವನ್ನು ಹಾಕಿದ್ದರೂ ಕಸದ ಬುಟ್ಟಿಗೆ ಹಾಕದೆ ಎಸೆಯುತ್ತಿದ್ದಾರೆ. ಇದರಿಂದಾಗಿ ಪಟ್ಟಣದ ಸೌಂದರ್ಯಕ್ಕೆ ಧಕ್ಕೆಯಾಗಿದೆ.
ಪಟ್ಟಣದ ಸೌಂದರ್ಯ ಮತ್ತು ಸ್ವಚ್ಛತೆ ಕಾಪಾಡಬೇಕಾದುದ್ದು ಸಾರ್ವಜನಿಕರ ಜವಾಬ್ದಾರಿ. ಸಾರ್ವಜನಿಕರ ಅಸಹಕಾರದಿಂದಾಗಿ ಕಸದ ಸಮಸ್ಯೆ ಉಂಟಾಗಿದೆ. ಸ್ವಚ್ಛತೆ ಕಾಪಾಡಲು ಪ್ರತಿ ವಾರ್ಡ್‌ಗೂ ಪುರಸಭೆ ಸ್ವಚ್ಛತಾಗಾರರು ತೆರಳುತ್ತಾರೆ. ಕಸವನ್ನು ಹಸಿ ಮತ್ತು ಒಣ ಕಸವಾಗಿ ವಿಂಗಡಿಸುತ್ತಾರೆ. ಕಸ ಹಾಕಲು ಅನುಕೂಲವಾಗುವಂತೆ ದೊಡ್ಡ ದೊಡ್ಡ ಕಸದ ಬುಟ್ಟಿ ಅಲ್ಲಲ್ಲಿ ಹಾಕಲಾಗಿದೆ. ಆದರೂ, ಸಾರ್ವಜನಿಕರು ಮನಸೋಇಚ್ಛೆ ಕಸ ಎಲ್ಲೆಂದರಲ್ಲಿ ಹಾಕುತ್ತಿರುವುದರಿಂದ ತೊಂದರೆಯಾಗಿದೆ. ಕಸದ ಬುಟ್ಟಿ ಸಮೀಪ ಕಸ ಹಾಕುವವರ ಆ ಬುಟ್ಟಿಗೆ ಹಾಕಿದರೆ ಕಸದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ಸ್ಥಳೀಯರ ಅಭಿಪ್ರಾಯ.
ಪುರಸಭೆ ಅಧ್ಯಕ್ಷ ಸುಧಾ ನಿರಂಜನ್ ಮಾತನಾಡಿ, ಸ್ವಚ್ಛತೆ ಕಾಪಾಡಲು ಸಾರ್ವಜನಿಕರ ಸಹಕಾರ ಮುಖ್ಯ. ಸಾರ್ವಜನಿಕರು ಕಸವನ್ನು ನಿಗದಿತ ಸ್ಥಳದಲ್ಲಿ ಹಾಕುವುದರಿಂದ ಕಸದ ಸಮಸ್ಯೆ ಪರಿಹಾರವಾಗುತ್ತದೆ. ಪುರಸಭೆ ಪೌರಕಾರ್ಮಿಕರು ಸ್ವಚ್ಛತೆಗಾಗಿ ಹೆಚ್ಚು ಶ್ರಮವಹಿಸುತ್ತಾರೆ. ಅವರ ಶ್ರಮಕ್ಕೆ ಬೆಲೆ ನೀಡುವ ಸಲುವಾಗಿ ಸಾರ್ವಜನಿಕರು ಕಸವನ್ನು ನಿಗದಿತ ಸ್ಥಳದಲ್ಲಿ ಹಾಕುವ ಮೂಲಕ ಪುರಸಭೆಗೆ ಸಹಕಾರ ನೀಡಬೇಕು ಎಂದರು.
ಪಟ್ಟಣದಲ್ಲಿ ನಾಗರಿಕರು ಸ್ವಚ್ಛತೆ ಕಾಪಾಡಲು ಪುರಸಭೆಗೆ ಬಲ ನೀಡಬೇಕು. ಪುರಸಭೆ ಕಸದ ಬುಟ್ಟಿಯಲ್ಲಿ ಹೋಟೆಲ್ ಹಾಗೂ ದ್ರವ್ಯ ತ್ಯಾಜ್ಯ ಹಾಕುವುದರಿಂದ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ-ಶ್ರೀನಿವಾಸ್, ಆನೇಕಲ್ ನಿವಾಸಿ
ಸಾರ್ವಜನಿಕರು ನಿಗದಿತ ಸ್ಥಳದ ಪಕ್ಕದಲ್ಲಿಯೇ ಕಸ ಹಾಕುತ್ತಿರುವುದು ಕಂಡು ಬರುತ್ತಿದೆ. ಕಸ ಸುರಿಯುವವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು- ಸುಧಾ ನಿರಂಜನ್, ಪುರಸಭೆ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.