ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿಯಲ್ಲಿ ಗಾರ್ಮೆಂಟ್ಸ್ ಗೋದಾಮಿಗೆ ಗುರುವಾರ ಆಕಸ್ಮಿಕ ಬೆಂಕಿ ತಗುಲಿ ಕೋಟ್ಯಾಂತರ ಮೌಲ್ಯದ ಬಟ್ಟೆ, ಲೆದರ್ ಸಾಮಗ್ರಿಗಳು ಬೆಂಕಿ ಆಹುತಿಯಾಗಿದೆ. ಬೆಂಕಿ ನೋಡುತ್ತಿದ್ದಂತೆ ಗೋದಾಮಿನಲ್ಲಿದ್ದ ಕಾರ್ಮಿಕರು, ಸಿಬ್ಬಂದಿ ಹೊರ ಬಂದಿದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತಾಲ್ಲೂಕಿನ ಹೆಬ್ಬಗೋಡಿ ಕೈಗಾರಿಕ ಪ್ರದೇಶ ವ್ಯಾಪ್ತಿಯ ಸೀವಿಂಗ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್, ಐಐಜಿಎಂ ಒರಿಯನ್ ಆಪರೇಲ್ ಟ್ರಿಮ್ಸ್ ಮತ್ತು ಇಂಡಿಯಾ ಏಜೆನ್ಸಿಸ್ ಸೇರಿದಂತೆ ನಾಲ್ಕು ಕಂಪನಿಗಳಿಗೆ ಸೇರಿದ ಗೋದಾಮುಗಳು ಒಂದೆಡೆ ಇದೆ. ಎಲ್ಲಾ ಗೋದಾಮುಗಳು ಬೆಂಕಿಗೆ ಆಹುತಿಯಾಗಿವೆ. ಕೋಟ್ಯಾಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಸುಟ್ಟು ಕರಕಲಾಗಿವೆ.
ಗುರುವಾರ ಸಂಜೆ 5ರ ಸುಮಾರಿನಲ್ಲಿ ಗೋದಾಮಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ರಾಸಾಯನಿಕ, ಬಟ್ಟೆಗಳು ಸೇರಿದಂತೆ ಸುಲಭವಾಗಿ ಬೆಂಕಿ ಹೊತ್ತುಕೊಳ್ಳುವ ವಸ್ತುಗಳು ಇದ್ದುದ್ದರಿಂದ ನೋಡ ನೋಡುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಎಲ್ಲೆಡೆ ವ್ಯಾಪಿಸಿತು. ಪಕ್ಕದಲ್ಲಿಯೇ ಹಲವಾರು ಕೈಗಾರಿಕೆಗಳಿವೆ. ಬೆಂಕಿಯ ಹೊಗೆಯು ಸುತ್ತಮುತ್ತಲಿನ ಪ್ರದೇಶವನ್ನು ಆವರಿಸಿಕೊಂಡು ಪ್ರದೇಶವೇ ಕಾಣದಂತಹ ಪರಿಸ್ಥಿತಿ ನಿರ್ಮಾಣವಾಯಿತು.
ಒಂದು ಗಂಟೆಗೂ ಹೆಚ್ಚು ಕಾಲ ಆರು ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವಲ್ಲಿ ನಿರತವಾದವು. ಏರಿಯಲ್ ಲ್ಯಾಡರ್ ಪ್ಲಾಟ್ ಫಾರ್ಮ್ ಬಳಸಿ 50 ಅಡಿ ಎತ್ತರದಲ್ಲಿ ಪಾಮ್ ಮಿಶ್ರಿತ ನೀರನ್ನು ಹಾಕುವ ಮೂಲಕ ಬೆಂಕಿಯನ್ನು ನಂದಿಸಲು ಹರಸಾಹಸಪಟ್ಟರು.
ಸಂಜೆ 7ರ ಸುಮಾರಿಗೆ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಆದರೆ ಕಂಪನಿಗಳ ಸುತ್ತಲೂ ದಟ್ಟ ಹೊಗೆ ತುಂಬಿಕೊಂಡಿತ್ತು. ಕೈಗಾರಿಕ ಪ್ರದೇಶವಾಗಿರುವುದರಿಂದ ವಿವಿಧ ಕೈಗಾರಿಕೆಗಳ ಕಾರ್ಮಿಕರು ಘಟನಾ ಸ್ಥಳದಲ್ಲಿ ಜಮಾಯಿಸಿದ್ದರು.
ಎಎಸ್ಪಿ ನಾಗರಾಜು, ಡಿವೈಎಸ್ಪಿ ಮೋಹನ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
2024ರ ಸೆಪ್ಟೆಂಬರ್ 26ರಂದು ಬೊಮ್ಮಸಂದ್ರ ಕೈಗಾರಿಕ ಪ್ರದೇಶದ ಏರಿಯಾನ್ ಟೆಕ್ನಾಲಜಿ ಕಂಪನಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ನವೆಂಬರ್ 9ರಂದು ಅತ್ತಿಬೆಲೆ ಕೈಗಾರಿಕ ಪ್ರದೇಶ ವ್ಯಾಪ್ತಿಯ ಶ್ರೀರಾಮ್ ವುಡ್ ಅಂಡ್ ಫರ್ನಿಚರ್ ಕಂಪನಿಯಲ್ಲಿ ಅಗ್ನಿ ಆಕಸ್ಮಿಕ ಘಟನೆ ನಡೆದಿತ್ತು. ಆನೇಕಲ್ ತಾಲ್ಲೂಕಿನಲ್ಲಿ ಐದು ಕೈಗಾರಿಕ ಪ್ರದೇಶಗಳಿದ್ದು ಅಗ್ನಿ ಸುರಕ್ಷತೆಗೆ ಹೆಚ್ಚಿನ ಅದ್ಯತೆ ನೀಡಬೇಕು ಎಂಬುದು ಕಾರ್ಮಿಕರ ಒತ್ತಾಯ.
ಐವತ್ತು ಅಡಿ ಎತ್ತರದಿಂದ ಬೆಂಕಿಗೆ ನೀರು
ಏರಿಯಲ್ ಲ್ಯಾಡರ್ ಪ್ಲಾಟ್ ಫಾರ್ಮ್ ಬಳಸಿ 50 ಅಡಿ ಎತ್ತರದಿಂದ ಪಾಮ್ ಮಿಶ್ರಿತ ನೀರನ್ನು ಹಾಕುವ ಮೂಲಕ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರು. ಈ ಕಾರ್ಯಕ್ಕೆ ಒಂದು ತಾಸಿಗೂ ಅಧಿಕ ಸಮಯ ಹಿಡಿಯಿತು.
ಸಂಜೆ 7ರ ಸುಮಾರಿಗೆ ಬೆಂಕಿ ನಿಯಂತ್ರಣಕ್ಕೆ ಬಂದರೂ ಕೈಗಾರಿಕಾ ಪ್ರದೇಶದ ಸುತ್ತಲೂ ದಟ್ಟ ಹೊಗೆ ತುಂಬಿಕೊಂಡಿತ್ತು. ಕಾರ್ಮಿಕರು ಸ್ಥಳದಲ್ಲಿ ಜಮಾಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.