
ದೊಡ್ಡಬಳ್ಳಾಪುರ: ಡ್ಡಬಳ್ಳಾಪುರ ತಾಲ್ಲೂಕಿನ ಘಾಟಿ ಕ್ಷೇತ್ರದಲ್ಲಿನ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯಸ್ವಾಮಿಸ್ವಾಮಿ ಮರಥೋತ್ಸವ ಗುರುವಾರ ಅದ್ದೂರಿಯಾಗಿ ನಡೆಯಿತು. ರಾಜ್ಯದ ನಾನಾಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು.
ಮಧ್ಯಾಹ್ನ 12ಕ್ಕೆ ರಥೋತ್ಸವಕ್ಕೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್. ಮುನಿಯಪ್ಪ, ಶಾಸಕ ಧೀರಜ್ ಮನಿರಾಜು ಸಾವಿರಾರರು ಭಕ್ತರ ಸಮ್ಮುಖದಲ್ಲಿ ಚಾಲನೆ ನೀಡಿದರು. ರಥಕ್ಕೆ ಭಕ್ತರು ಹಣ್ಣು, ದವನ ಎಸೆದು ತಮ್ಮ ಇಷ್ಟಾರ್ಥ ಸಿದ್ಧತೆ ಪ್ರಾರ್ಥಿಸಿದರು.
ರಥೋತ್ಸವಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅತ್ಯಂತ ಸುಸಜ್ಜಿತ ವ್ಯವಸ್ಥೆ ಮಾಡಲಾಗಿತ್ತು. ಇದೇ ಪ್ರಥಮ ಬಾರಿಗೆ ಜಿಲ್ಲಾಧಿಕಾರಿಗಳೆ ರಥೋತ್ಸವದ ಮೇಲುಸ್ತುವಾರಿಯನ್ನು ವಹಿಸಿಕೊಂಡಿದ್ದು, ದೇವಾಲಯ ಸಮೀಪ ರಥೋತ್ಸವ ನಡೆಯುವ ಸ್ಥಳದಲ್ಲಿ ಯಾವುದೇ ನೂಕುನುಗ್ಗಲು ಉಂಟಾಗದಂತೆ ಹಾಗೂ ದೇವರ ದರ್ಶನಕ್ಕೆ ತೆರಳುವ ಭಕ್ತರು ಹೆಚ್ಚು ಸಮಯ ಸಾಲಿನಲ್ಲಿ ನಿಂತು ಗೊಂದಲ ಉಂಟಾಗದಂತೆ ವ್ಯವಸ್ಥೆ ಮಾಡಲಾಗಿತ್ತು.
ರಥೋತ್ಸವ ನಡೆಯುವ ಸುತ್ತಮುತ್ತ ಜನ ಸಂದಣಿ, ವಾಹನ ದಟ್ಟಣೆ ತಪ್ಪಿಸಲು ಘಾಟಿ ಕ್ಷೇತ್ರದಿಂದ ಸುಮಾರು 10 ಕಿ.ಮೀ ದೂರದ ಕಂಟನಕುಂಟೆ ಹಾಗೂ ಗೌರಿಬಿದನೂರು ರಸ್ತೆಯ ಮಾಕಳಿ ಸಮೀಪವೆ ಸಾರ್ವಜನಿಕರ ಕಾರು, ಬೈಕ್, ಖಾಸಗಿ ಬಸ್‌ಗಳನ್ನು ನಿರ್ಬಂಧಿಸಿ, ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಲಾಗಿತ್ತು.
ಘಾಟಿ ದೇವಾಲಯದ ಬಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಮೂಲಕ ಸಾರ್ವಜನಿಕರನ್ನು ಉಚಿತವಾಗಿ ಕರೆದುಕೊಂಡು ಹೋಗಲು ಉಚಿತ ವ್ಯವಸ್ಥೆ ಮಾಡಲಾಗಿತ್ತು.
ರಥೋತ್ಸವಕ್ಕೆ ಆಗಮಿಸಿದ್ದ ಎಲ್ಲಾ ಭಕ್ತರಿಗು ದೇವಾಲಯದಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಹಿರಿಯ ನಾಗರೀಕರು ದೇವರ ದರ್ಶನಕ್ಕೆ ಹೋಗಲು ಪ್ರತ್ಯೇಕ ಸಾಲು ಇತ್ತು.
ಬಿಗಿ ಪೊಲೀಸ್ ಭದ್ರತೆ: ಕ್ರಿಸ್ ಮಸ್ ರಜೆ ಇದ್ದ ಕಾರಣದಿಂದಾಗಿ ರಥೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಯಾವುದೇ ಅಹಿತರಕ ಘಟನೆಗಳು ನಡೆಯದಂತೆ ನಿಯಂತ್ರಿಸುವ ಸಲುವಾಗಿ 300 ಜನ ಪೊಲೀಸರು, 200 ಜನ ಗೃಹರಕ್ಷ ಸಿಬ್ಬಂದಿ ನಿಯೋಜಿಸಲಾಗಿತ್ತು. ಅಲ್ಲದೆ ಕಂದಾಯ ಇಲಾಖೆ, ಗ್ರಾಮ ಪಂಚಾಯಿತಿ ಹಾಗೂ ನಗರಸಭೆಯ ಸಿಬ್ಬಂದಿಯನ್ನು ವಿವಿಧ ಸೌಲಭ್ಯಗಳನ್ನು ಕಲ್ಪಿಸುವ ಹಾಗೂ ಉಸ್ತುವಾರಿ ನೋಡಿಕೊಳ್ಳಲು ನಿಯೋಜಿಸಲಾಗಿತ್ತು. ದೇವಾಲಯ ಹಾಗೂ ರಥೋತ್ಸವ ನಡೆಯುವ ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ಪೊಲೀಸ್ ಕಣ್ಗಾವಲು ಇರಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.