ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅಧಿಕ ಶುಂಠಿ ಬಳೆಯುವ ಹೊಸಕೋಟೆ ತಾಲ್ಲೂಕಿನ ಬೆಳೆಗಾರರು ಬೆಲೆ ಕುಸಿತದಿಂದ ಸಂಕಷ್ಟಕ್ಕೆ ತುತ್ತಾಗಿದ್ದಾರೆ.
ಶುಂಠಿ ಕೊಯ್ಲು ಮಾಡಿ ಮಾರುಕಟ್ಟೆಗೆ ತೆಗೆದುಕೊಂಡು ಹೋದರೂ ಪ್ರಯೋಜನವಿಲ್ಲ ಎಂದು ಭಾವಿಸಿ ತಾಲ್ಲೂಕಿನ ಹೆಚ್ಚಿನ ರೈತರು ತಾವು ಬೆಳೆದ ಬೆಳೆಯನ್ನು ತೋಟದಲ್ಲಿಯೇ ಬಿಟ್ಟಿದ್ದಾರೆ. ಶುಂಠಿ ಕೊಯ್ಲು ಮುಗಿದಿದ್ದು
ಹಲವು ದಿನಗಳ ನಂತರ ಶುಂಠಿ ಬೆಲೆ ಪಾತಾಳಕೆ ಕುಸಿದಿದೆ. ಕ್ವಿಂಟಲ್ ಶುಂಠಿ ಕೇವಲ ₹1000 ದಿಂದ ₹1,200ಕ್ಕೆ ಮಾರಾಟವಾಗುತ್ತಿದೆ. ರೈತರು ತರುವ 60 ಕೆ.ಜಿ ಮೂಟೆಗೆ ₹700 ಸಿಗುತ್ತಿದೆ. ಇದರಿಂದ ರೈತರು ಶುಂಠಿಯನ್ನು ತೋಟಗಳಿಂದ ತಂದು ಮಾರಾಟ ಮಾಡುವ ಗೋಜಿಗೆ ಹೋಗುತ್ತಿಲ್ಲ. ಅದರ ಬದಲಾಗಿ ತೋಟದಲ್ಲಿಯೇ ಬಿಡುವುದೇ ವಾಸಿ ಎನ್ನುತ್ತಿದ್ದಾರೆ.
ಸದ್ಯ ಸಗಟು ಮಾರುಕಟ್ಟೆಯಲ್ಲಿ ಒಂದು ಕೆ.ಜಿ ಶುಂಠಿ ಬೆಲೆ ₹11 ರಿಂದ ₹12 ಅಷ್ಟೇ! ಗ್ರಾಹಕರಿಗೆ ಕೆ.ಜಿ ಶುಂಠಿ ₹40 ರಿಂದ ₹50ಕ್ಕೆ ದೊರೆಯುತ್ತಿದೆ.
ಹೊಸಕೋಟೆ ತಾಲ್ಲೂಕಿನಲ್ಲಿ ಇತ್ತೀಚೆಗೆ ಶುಂಠಿ ಬೆಳೆಯಲು ರೈತರು ಮುಂದಾಗುತ್ತಿದ್ದಾರೆ. ಆದರೆ ಅವರಿಗೆ ತಕ್ಕ ಮಾರುಕಟ್ಟೆ ವ್ಯವಸ್ಥೆ, ಸೂಕ್ತ ಮಾರ್ಗದರ್ಶನವಾಗಲಿ ಸಿಗುತ್ತಿಲ್ಲ. ಆದ್ದರಿಂದ ಬೆಲೆ ಹೆಚ್ಚಾಗುವ ಸಂದರ್ಭಕ್ಕೆ ತಕ್ಕಂತೆ ಶುಂಠಿ ಬೆಳೆ ಸಂರಕ್ಷಿಸಿ ಮಾರಾಟ ಮಾಡಲು ಬೇಕಾದ ಸೂಕ್ತ ವ್ಯವಸ್ಥೆ ಇಲ್ಲದಂತಾಗಿದೆ.
ಶುಂಠಿ ಸಂಗ್ರಹಕ್ಕೆ ಬೇಕಾದ ಶೀತಲ ಕೇಂದ್ರ ನಿರ್ಮಾಣ ಮಾಡಿದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಬೆಲೆ ಬಂದಾಗ ಮಾರಾಟ ಮಾಡಲು ಸಾಧ್ಯವಾಗುತ್ತದೆ ಎನ್ನುತ್ತಾರೆ ರೈತ ಹರೀಶ್.
ಶುಂಠಿ ಬೆಳೆ ಅವಧಿ 10 ತಿಂಗಳಿಂದ ಒಂದು ವರ್ಷ. ಹೆಚ್ಚಿನ ಲಾಂಭಾಂಶ ಪಡೆಬಹುದು ಎಂಬ ಆಸೆಯಿಂದ ರೈತ ಶುಂಠಿ ಬೆಳೆಯಲು ಮುಂದಾಗುತ್ತಾನೆ. ಇದೇ ಅವಧಿಯಲ್ಲಿ ಇತರ ಬೆಳೆ ಬೆಳೆದರೆ ಎರಡು ಬೆಳೆ ತೆಗೆಯಬಹುದು. ವರ್ಷಪೂರ್ತಿ ಶುಂಠಿ ಬೆಳೆಗೆ ಹಾಕಿದ ಶ್ರಮ, ಬಂಡವಾಳ ಸಿಗುತ್ತಿಲ್ಲ.
ಸುಳಿಯದ ವರ್ತಕರು: ‘ನಾವು ಬೆಳೆದಿರುವ ಶುಂಠಿ ಕೊಂಡುಕೊಳ್ಳಲು ಕೆಲವು ವ್ಯಾಪಾರಸ್ಥರು ಬರುವುದಾಗಿ ಹೇಳಿದ್ದರು. ಆದರೆ ಕೆಲವು ದಿನಗಳಿಂದ ಅವರು ಕರೆ ಸ್ವೀಕರಿಸುತ್ತಿಲ್ಲ. ಶುಂಠಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಕುದುರಿದ ಮೇಲೆ ಬಂದು ಖರೀದಿಸುತ್ತೇವೆ ಎಂದು ಹೇಳುತ್ತಿದ್ದಾರೆ. ನಾವೇ ಕಿತ್ತುಕೊಂಡು ಹೋಗಿ ಮಾರುಕಟ್ಟೆಗೆ ಹಾಕಿದರೆ ಕನಿಷ್ಠ ಕೂಲಿಯೂ ಧಕ್ಕಲ್ಲ ಎಂಬ ಭಯ ಇದೆ. ಶುಂಠಿ ಬೆಳೆಯನ್ನು ತೋಟದಲ್ಲಿಯೇ ಬಿಟ್ಟ ನಾಲ್ಕಾರು ತೋಟಗಳು ನಮ್ಮೂರಲ್ಲಿವೆ’ ಎನ್ನುತ್ತಾರೆ ರೈತ ನಾರಾಯಣಸ್ವಾಮಿ.
ಉತ್ತಮ ಬೆಲೆ ಸಿಗಬಹುದು ಎಂದು ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ರೈತರು ಶುಂಠಿ ಬೆಳೆಯುತ್ತಿದ್ದಾರೆ. ಬೆಳೆ ಕೊಯ್ಲು ಮಾಡಿ ಮಾರುಕಟ್ಟೆಗೆ ಸಾಗಿಸಲು ಹಿಂದುಮುಂದು ನೋಡುವಂತಾಗಿದೆ. ಪ್ರಸ್ತುತ ಶುಂಠಿಗೆ ಇರುವ ಮಾರುಕಟ್ಟೆ ಬೆಲೆಯನ್ನು ನೋಡಿದರೆ ತೋಟದಲ್ಲಿರುವ ಶುಂಠಿ ಮುಟ್ಟವುದೇ ಬೇಡ ಎಂದು ಹಲವು ರೈತರು ತೋಟದಲ್ಲಿಯೇ ಬಿಟ್ಟಿದ್ದಾರೆ. ಒಣ ಶುಂಠಿಗೆ ಕನಿಷ್ಠ ₹9,000 ರಿಂದ ಗರಿಷ್ಠ ₹12,100 ಬೆಲೆ ಇದೆ. ಆದರೆ ಅದನ್ನು ಒಣಗಿಸಲು ಬೇಕಾದ ವ್ಯವಸ್ಥೆ ಇಲ್ಲ. ಆದ್ದರಿಂದ ತಾಲ್ಲೂಕಿನ ಶುಂಠಿಯನ್ನು ವೈಜ್ಞಾನಿಕವಾಗಿ ಸಂಸ್ಕರಿಸುವ ಶೀತಲ ಕೇಂದ್ರಗಳನ್ನು ನಿರ್ಮಿಸಿ ಕೊಡಲಿ ಎನ್ನುವುದು ಹಿಂಡಿಗನಾಳ ರೈತ ಮೋಹನ್ ಬಾಬು ಒತ್ತಾಯ.
ತಾಲ್ಲೂಕಿನಲ್ಲಿ ಶುಂಠಿ ಕೊಯ್ಲು ಮುಕ್ತಾಯವಾಗಿದೆ. ಈಗ ಮುಂದಿನ ಕೊಯ್ಲಿಗೆ ಹೊಸದಾಗಿ ಬೆಳೆ ನಾಟಿ ಮಾಡುತ್ತಿದ್ದಾರೆ. ಪ್ರಸ್ತುತ ಶುಂಠಿ ಕ್ವಿಂಟಾಲ್‌ಗೆ ₹1000 ದಿಂದ ₹1200 ಇದ್ದು. ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಇದು 8 ರಿಂದ 10 ತಿಂಗಳ ಬೆಳೆಯಾಗಿರುವುದರಿಂದ ಜನವರಿಯಿಂದ ಮಾರ್ಚ್‌ವರೆಗೆ ನಾಟಿ ಮಾಡಿ ನವೆಂಬರ್ ನಂತರದಲ್ಲಿ ಕೊಯ್ಲು ಮಾಡಲಾಗುತ್ತದೆ.ಸೋಮಶೇಖರಗೌಡ ಸಹಾಯಕ ನಿರ್ದೇಶಕ ತೋಟಗಾರಿಕಾ ಇಲಾಖೆ ಹೊಸಕೋಟೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.