ಹೊಸಕೋಟೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಶುಂಠಿ ಬೆಳೆಯುವ ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಹಸಿ ಶುಂಠಿ ಖರೀದಿ ಕೇಂದ್ರ ಸ್ಥಾಪನೆಗೆ ಸರ್ಕಾರದ ಅನುಮತಿ ದೊರೆತಿದೆ. ಶೀಘ್ರ ಶುಂಠಿ ನೋಂದಣಿ ಕಾರ್ಯ ಆರಂಭವಾಗಲಿದೆ.
ಸೂಲಿಬೆಲೆ ಹೋಬಳಿ ಕೇಂದ್ರದ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ನಿಯಮಿತ ಕೇಂದ್ರದಲ್ಲಿ (ಬ್ಯಾಂಕ್) ಖರೀದಿ ಕೇಂದ್ರ ಕಾರ್ಯನಿರ್ವಹಿಸಲಿದೆ.
ಶುಂಠಿ ಬೆಳೆ ಕುಸಿತದಿಂದ ತಾಲ್ಲೂಕಿನ ರೈತರಿಗೆ ಉಂಟಾಗುವ ನಷ್ಟ ಮತ್ತು ತಾಲ್ಲೂಕಿನಲ್ಲಿ ಖರೀದಿ ಕೇಂದ್ರದ ಸ್ಥಾಪನೆ ಅಗತ್ಯ ಕುರಿತು ಏಪ್ರಿಲ್‌ನಲ್ಲಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.
ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆ ಅಡಿ ಹಸಿ ಶುಂಠಿ ಖರೀದಿ ಕೇಂದ್ರ ಆರಂಭಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಿದೆ. ಸೂಲಿಬೆಲೆಯಲ್ಲಿ ಖರೀದಿ ಕೇಂದ್ರ ಸ್ಥಾಪಿಸಿರುವುದು ತಾಲ್ಲೂಕಿನ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.
ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ಸೂಕ್ತ ಬೆಲೆಗೆ ಶುಂಠಿ ಖರೀದಿಸುವ ಜಿಲ್ಲೆಗಳಲ್ಲಿ ಗ್ರಾಮಾಂತರ ಜಿಲ್ಲೆ ಸೇರಿರಲಿಲ್ಲ. ಕೇಂದ್ರ ಸರ್ಕಾರದ ಮಾರುಕಟ್ಟೆ ಮಧ್ಯ ಪ್ರವೇಶ ಯೋಜನೆಯಡಿ ಚಾಮರಾಜನಗರ ಜಿಲ್ಲೆಯಲ್ಲಿ ಹಸಿಶುಂಠಿ ಖರೀದಿ ಕೇಂದ್ರ ಸ್ಥಾಪನೆಗೆ ಆದೇಶ ಹೊರಡಿಸಿತು. ಜಿಲ್ಲೆಯ ಶುಂಠಿ ಬೆಳೆಗಾರರಿಗೆ ಆಗುತ್ತಿದ್ದ ನಷ್ಟ ಗಮನಿಸಿ ಕೆಲವು ದಿನಗಳ ಹಿಂದೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಪಟ್ಟಿಯಲ್ಲಿ ಸೇರಿಸಿ ಆದೇಶ ಹೊರಡಿಸಲಾಗಿದೆ.
ಶುಂಠಿ ಬೆಲೆ ಕುಸಿದಾಗ ಈ ಭಾಗದ ಶುಂಠಿ ಬೆಳೆಗಾಗರು ನಷ್ಟ ಅನುಭವಿಸುತ್ತಿದ್ದರು. ತೋಟಗಾರಿಕಾ ಬೆಳೆಗಾರರು ವರ್ಷಕ್ಕೆ ಎರಡು ಬೆಳೆ ಬೆಳೆಯುವುದು ವಾಡಿಕೆ. ಆದರೆ, ಶುಂಠಿ ಬೆಳೆಯಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ. ಶುಂಠಿ ಬೆಳೆಗಾರರು ಬೆಲೆ ಕುಸಿದಾಗ ನಷ್ಟವನ್ನೂ ಅನುಭವಿಸಿ, ವರ್ಷದಲ್ಲಿ ಎರಡು ಬೆಳೆಯನ್ನೂ ಬೆಳೆಯಲಾಗದೆ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಆದರೆ ಈಗ ಖರೀದಿ ಕೇಂದ್ರ ಆರಂಭ ಆಗಿರುವುದರಿಂದ ಶುಂಠಿ ಬೆಳೆಗಾರರು ನಿರಾಳರಾಗಿದ್ದಾರೆ.
ಹೊಸಕೋಟೆ;224.47
ದೇವನಹಳ್ಳಿ; 111.81
ದೊಡ್ಡಬಳ್ಳಾಪುರ; 54.95
ನೆಲಮಂಗಲ; 0.04
ಒಟ್ಟು:398.63
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.