
ದೊಡ್ಡಬಳ್ಳಾಪುರ: ಇಲ್ಲಿನ ಗೀತಂ ವಿಶ್ವವಿದ್ಯಾಲಯ, ‘ಪ್ರಜಾವಾಣಿ’ ಸಹಯೋಗದಲ್ಲಿ ಹಮ್ಮಿಕೊಂಡಿರುವ ‘ಸಾಮಾಜಿಕ ಅರಿವು ಆಂದೋಲನ’ ಸರಣಿ ಕಾರ್ಯಕ್ರಮಕ್ಕೆ ಸೋಮವಾರ ಅದ್ದೂರಿ ಚಾಲನೆ ದೊರೆಯಿತು.
ದೊಡ್ಡಬಳ್ಳಾಪುರ ಉಪವಿಭಾಗದ ಡಿಎಸ್‍ಪಿ ಪಾಡುರಂಗ ಆಂದೋಲನಕ್ಕೆ ಚಾಲನೆ ನೀಡಿದರು. ಮೊದಲ ದಿನ ‘ಡ್ರಗ್ಸ್ ಮುಕ್ತ ಕರ್ನಾಟಕ’, ಸೈಬರ್ ಅಪರಾಧ ತಡೆ ಜಾಗೃತಿ ಕಾರ್ಯಕ್ರಮ ಹಾಗೂ ನಾಟಕ ಪ್ರದರ್ಶನ ನಡೆಯಿತು. ವ್ಯಸನ ಮುಕ್ತ ಕರ್ನಾಟಕ, ಸೈಬರ್ ಅಪರಾಧ ತಡೆ, ರಸ್ತೆ ಸುರಕ್ಷತೆ ಮತ್ತು ಸಂಚಾರ ಜಾಗೃತಿಗೆ ಸಂಬಂಧಪಟ್ಟಂತೆ ವಿವಿಧ ಕಾರ್ಯಕ್ರಮಗಳು ಮಾರ್ಚ್ 10ರವರೆಗೆ ನಡೆಯಲಿವೆ.
ಗೀತಂ ವಿಶ್ವವಿದ್ಯಾಲಯದ ಶಿವಾಜಿಭವನ ಸಭಾಂಗಣದಲ್ಲಿ ಮಾತನಾಡಿದ ದೊಡ್ಡಬಳ್ಳಾಪುರ ಉಪವಿಭಾಗದ ಡಿಎಸ್‍ಪಿ ಪಾಡುರಂಗ, ಮಾದಕ ವಸ್ತುಗಳ ಸೇವನೆಯಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಮಾದಕ ವಸ್ತುಗಳು ಚಾಕೂಲೇಟ್, ಪೆಪರ್‌ಮೆಂಟ್‌ನಂತೆ ಸುಲಭವಾಗಿ ಯುವಕರ ಕೈ ಸೇರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾದಕ ವ್ಯಸನದ ಕ್ಷಣಿಕ ಖಷಿ ಕ್ರಮೇಣ ಚಟವಾಗಿ ಮಾರ್ಪಾಡುತ್ತಿದೆ. ಒಮ್ಮೆ ಇದರ ಚಟಕ್ಕೆ ಬಿದ್ದಲ್ಲಿ ಮತ್ತೆ ಹೊರಬರುವುದು ಬಹಳ ಕಷ್ಟ. ಮಾನಸಿಕ, ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿದ್ದು, ಒತ್ತಡ, ಒಂಟಿತನ ಶುರುವಾಗಿ ಮನೋಸ್ಥೈರ್ಯ ಕುಗ್ಗಿಸುತ್ತಿದೆ. ಯುವಕರು ಮಾದಕ ವಸ್ತುಗಳ ವ್ಯಸನದಿಂದ ದೂರವಿರಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳು ಸೈಬರ್ ಅಪರಾಧ ಹಾಗೂ ರಸ್ತೆ ಸುರಕ್ಷತೆಯ ಬಗ್ಗೆ ಎಚ್ಚರವಹಿಸಬೇಕು. ಓದಿನ ಕಡೆ ಗಮನ ಹರಿಸಿ, ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು ಎಂದರು.
ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ನಡವಳಿಕೆಯ ಮೇಲೆ ಶಿಕ್ಷಣ ಸಂಸ್ಥೆಗಳ ಹದ್ದಿನ ಕಣ್ಣಿಡಬೇಕು. ಆಗ್ಗಾಗೆ ಸಿಸಿಟಿವಿ ಕ್ಯಾಮೆರಾಗಳಲ್ಲಿ ವಿದ್ಯಾರ್ಥಿಗಳ ಚಲನವಲನವನ್ನು ನಿಗಾವಹಿಸಬೇಕು ಎಂದರು.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಇನ್‍ಸ್ಪೆಕ್ಟರ್ ಸಾಧಿಕ್ ಪಾಷಾ, ಯುವಜನತೆ ಮಾದಕ ವಸ್ತುಗಳ ಸೇವನೆಗೆ ಒಳಗಾಗಿ ತಮ್ಮ ಗುರಿ ಮುಟ್ಟಲು ಸಾಧ್ಯವಾಗದಿರುವುದು ಬೇಸರದ ಸಂಗತಿ. ಸಾಮಾಜಿಕ ಜಾಲತಾಣಗಳನ್ನು ಒಳ್ಳೆಯ ಕಾರ್ಯಕ್ಕೆ ಬಳಸುವುದಕ್ಕಿಂತ ಕೆಟ್ಟ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ. ಬೇರೆಯವರ ಖುಷಿಗೋಸ್ಕರ ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳದಿರಿ ಎಂದು ಸಲಹೆ ನೀಡಿದರು.
ಬೆಂಗಳೂರು ಗ್ರಾಮಾಂತರ ಸೈಬರ್ ಅಪರಾಧ ವಿಭಾಗ ಇನ್‌ಸ್ಪೆಕ್ಟರ್ ಪ್ರವೀಣ್ ಕುಮಾರ್, ಸೈಬರ್ ಅಪರಾಧ ಕಂಪ್ಯೂಟರ್, ನೆಟ್‍ವರ್ಕ್, ಮೊಬೈಲ್ ಇತರೆ ಡಿಜಿಟಲ್ ಸಾಧನಗಳ ಮೂಲಕ ನಡೆಸುವ ಅಪರಾಧ ಚಟುವಟಿಕೆಯಾಗಿದ್ದು, ಅಪರಾಧಿಗಳು ವೈಯಕ್ತಿಕ ಮಾಹಿತಿ ಕದಿಯಲು ನಿರಂತರ ಹೊಸ ವಿಧಾನಗಳನ್ನು ಬಳಸುತ್ತಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಡಿಜಿಟಲ್ ಸಾಧನಗಳನ್ನು ಬಳಸುವಾಗ ನಡೆಯುವ ಮೋಸದ ಬಗ್ಗೆ ಎಚ್ಚರ ವಹಿಸಬೇಕು. ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.
ಗೀತಂ ವಿಶ್ವ ವಿದ್ಯಾಲಯದ ಸ್ಥಾನಿಕ ನಿರ್ದೇಶಕ ವಿಜಯ್ ಗೆಜ್ಜಿ, ಕ್ಯಾಂಪಸ್ ಲೈಫ್ ನಿರ್ದೇಶಕಿ ವಿದ್ಯಾ ಸೇರಿಂತೆ ಉಪನ್ಯಾಸಕರು ಹಾಗೂ ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಅಥವಾ ಅಪರಿಚಿತರೊಂದಿಗೆ ಒಟಿಪಿ, ಪಾಸ್‍ವರ್ಡ್ ಹಂಚಿಕೊಳ್ಳಬೇಡಿ ಎಸ್ಎಂಎಸ್, ಇ–ಮೇಲ್, ವಾಟ್ಸ್‌ಆ್ಯಪ್‌ನಲ್ಲಿ ಬರುವ ಅನುಮಾನಾಸ್ಪದ ಲಿಂಕ್ ಕ್ಲಿಕ್ ಮಾಡಬೇಡಿ. ಅಪರಿಚಿತ ಫ್ರೆಂಡ್ ರಿಕ್ವೆಸ್ಟ್ ಸ್ವೀಕರಿಸಬೇಡಿ. ಖಾಸಗಿ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಬೇಡಿ. ಬ್ಯಾಂಕ್ ವಿವರವನ್ನು ಅಪರಿಚಿತರೊಂದಿಗೆ ಹಂಚಿಕೊಳ್ಳಬಾರದು. ನಕಲಿ ಬ್ಯಾಂಕ್ ಅಥವಾ ಯಾವುದೇ ಸಂಸ್ಥೆಯ ಇ–ಮೇಲ್ ಬಗ್ಗೆ ಎಚ್ಚರ ಇರಲಿ ಮೋಸದ ಜಾಲದ ಆ್ಯಪ್ ಬಳಕೆಯಿಂದ ದೂರವಿರಿ ಎಲ್ಲ ಖಾತೆಗಳಿಗೆ ವಿಶಿಷ್ಟ ಪಾಸ್‌ವಾರ್ಡ್ ಬಳಸಿ, ಆಗಾಗ್ಗೆ ಪಾಸ್‍ವರ್ಡ್ ಬದಲಾಯಿಸಿ ಏನು ಮಾಡಬೇಕು? ತಕ್ಷಣ ‘1930ಗೆ’ ಕರೆ ಮಾಡಿ ಮಾಹಿತಿ ನೀಡಬೇಕು https://cybercrime.gov.in cybercrime.gov.in ಪೋರ್ಟಲ್‌ನಲ್ಲಿ ದೂರು ನೀಡಬೇಕು ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಮೋಸವಾಗಿದ್ದರೆ ತಕ್ಷಣ ಬ್ಯಾಂಕ್‌ಗೆ ಮಾಹಿತಿ ನೀಡಿ, ಕಾರ್ಡ್‌ಗಳನ್ನು ಬ್ಲಾಕ್ ಮಾಡಬೇಕು ಪೊಲೀಸ್ ಠಾಣೆಯ ಸೈಬರ್ ವಿಭಾಗಕ್ಕೆ ದೂರ ನೀಡಿ
ವಿದ್ಯಾರ್ಥಿಗಳಲ್ಲಿ ಕಾನೂನು ಅರಿವಿನೊಂದಿಗೆ ಮಾದಕ ವ್ಯಸನದಿಂದ ಉಂಟಾಗುವ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಲು ಸಾಮಾಜಿಕ ಅರಿವು ಆಂದೋಲನ ಪರಿಣಾಮಕಾರಿಯಾಗಿದೆ.ವಿಜಯ್ ಗೆಜ್ಜಿ ಸ್ಥಾನಿಕ ನಿರ್ದೇಶಕ ಗೀತಂ ವಿಶ್ವವಿದ್ಯಾಲಯ
ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ಅಗತ್ಯ ಅರಿವು ಮೂಡಿಸುವ ಕಾರ್ಯಕ್ರಮಗಳ ಅವಶ್ಯಕವಿದೆ. ಈ ನಿಟ್ಟಿನಲ್ಲಿ ‘ಪ್ರಜಾವಾಣಿ’ಯ ಈ ಪ್ರಯತ್ನ ಶ್ಲಾಘನೀಯ.ವಿದ್ಯಾ ನಿರ್ದೇಶಕಿ ಕ್ಯಾಂಪಸ್ ಲೈಫ್ ಗೀತಂ ವಿಶ್ವ ವಿದ್ಯಾಲಯ
ಭಾಗವಾಗಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಲ್ಲಿ ರಸ್ತೆ ಸುರಕ್ಷತೆ ಜಾಗೃತಿ ಮೂಡಿಸಲು ಲಕ್ಕಿ ಡ್ರಾ ಚಟುವಟಿಕೆ ನಡೆಲಾಯಿತು. ಚಟುವಟಿಕೆಯಲ್ಲಿ ಆಯ್ಕೆಯಾದ 20 ವಿದ್ಯಾರ್ಥಿಗಳಿಗೆ ಹೆಲ್ಮೆಟ್ ವಿತರಿಸಲಾಯಿತು. ಅರಿವು ಮೂಡಿಸಿದ ನಾಟಕ ಗೀತಂ ವಿವಿಯ ಸಾಂಸ್ಕೃತಿ ಕಲಾತಂಡದಿಂದ `ಡ್ರಗ್ಸ್ ರ‍್ಯಾಗಿಂಗ್ ತಡೆ’ಗೆ ನಾಟಕ ಪ್ರದರ್ಶಿಸಲಾಯಿತು. ಮಾದಕ ವ್ಯಸನ ಮತ್ತು ರ‍್ಯಾಂಗಿಂಗ್‌ನಿಂದಾಗುವ ದುಷ್ಪರಿಣಾಮವನ್ನು ನಾಟಕದ ಮೂಲಕ ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಸಹಿ ಸಂಗ್ರಹ ಕಾರ್ಯಕ್ರಮದ ಭಾಗವಾಗಿ ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳ ವಿದ್ಯಾರ್ಥಿಗಳಿಂದ ಮಾದಕ ವಸ್ತು ತ್ಯಜಿಸುವ ಪ್ರತಿಜ್ಞಾ ಸಹಿ ಸಂಗ್ರಹ ಅಭಿಯಾನ ನಡೆಯಿತು. ರಸ್ತೆ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದಾಗಿ ಸಹಿ ಹಾಕುವ ಮೂಲಕ ವಿದ್ಯಾರ್ಥಿಗಳು ನಿಯಮ ಪಾಲಿಸುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.