ವಿಜಯಪುರ (ದೇವನಹಳ್ಳಿ): ಸಮೀಕ್ಷೆ ವೇಳೆ ಅಧಿಕ ರಕ್ತದೊತ್ತಡದಿಂದ ಆಸ್ಪತ್ರೆ ಸೇರಿ, ಮೃತಪಟ್ಟಿದ್ದ ಇಲ್ಲಿನ ಪುರಸಭೆ ದ್ವೀತಿಯ ದರ್ಜೆಯ ನೌಕರ ಪವನ್ ಜೋಷಿ(38) ಅವರ ಸಾವಿನ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪುರಸಭೆ ಸದಸ್ಯರ ಕಿರುಕುಳದಿಂದ ಜೋಷಿ ಪಟ್ಟಿದ್ದಾರೆ ಎಂದು ಆರೋಪಿಸಿ ಕುಟುಂಬಸ್ಥರು ಬುಧವಾರ ಪುರಸಭೆ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದರು.
ಅ.13ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಜೋಷಿ ಮೃತಪಟ್ಟಿದ್ದರು. ಕಣ್ಣು, ಹೃದಯ ಹಾಗೂ ಅಂಗಾಂಗ ದಾನ ಬಳಿಕ ಶವ ಬುಧವಾರ ವಿಜಯಪುರಕ್ಕೆ ಆಗಮಿಸಿತು. ಪುರಸಭೆ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.
ತನ್ನ ಪತಿ ಸಾವಿಗೆ ಪುರಸಭೆ ಸದಸ್ಯರ ಸೇರಿ ಮೂವರು ಕಾರಣ. ಅವರ ವಿರದ್ಧ ತನಿಖೆಯಾಗಬೇಕು. ತಪ್ಪಿಸ್ಥರಿಗೆ ತಕ್ಕೆ ಶಿಕ್ಷೆಯಾಗಬೇಕೆಂದು ಮೃತರ ಪತ್ನಿ, ಕುಟುಂಬಸ್ಥರು ಹಾಗೂ ವಿವಿಧ ಸಂಘಟನೆಗಳು ಆರೋಪಿಸಿ ಪುರಸಭೆ ಎದುರು ಶವ ಇಟ್ಟು ಪ್ರತಿಭಟನೆ ನಡೆಸಿದರು.
ಈ ವೇಳೆ ಮೃತ ಸಂಬಂಧಿಕರ ಜೊತೆಗೆ ನೂರಾರು ಸಂಖ್ಯೆಯಲ್ಲಿ ಜನರು ಪುರಸಭೆ ಆವರಣದಲ್ಲಿ ಜಮಾಯಿಸಿದರು. ಮೃತ ಪವನ್ ಜೋಷಿ ಸಾವಿಗೆ ಪುರಸಭೆ ಸದಸ್ಯ ಹನೀಫುಲ್ಲಾ, ಮಾಜಿ ಸದಸ್ಯ ಜೆ.ಎನ್. ಶ್ರೀನಿವಾಸ್ ಹಾಗೂ ಮುಖಂಡ ಮುನಿರಾಜು ಅವರ ಕಿರುಕುಳವೇ ಕಾರಣ ಎಂದು ಮೃತನ ಪತ್ನಿ ಅನನ್ಯ ಆರೋಪಿಸಿ, ಆರೋಪಿಗಳ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಬೇಕು, ಎಸ್‍ಐಟಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆ ವೇಳೆ ಮೃತ ಪವನ್ ಜೋಷಿ ಶವದ ಎದುರು ಪುರಸಭೆ ಸದಸ್ಯ ಹನೀಫುಲ್ಲಾ ಅವರ ಭಾವಚಿತ್ರ ಹಿಡಿದ ಪ್ರತಿಭಟನಾಕಾರರು ಚಪ್ಪಲಿಯಿಂದ ಭಾವಚಿತ್ರಕ್ಕೆ ಒಡೆದು ಆಕ್ರೋಶ ವ್ಯಕ್ತಪಡಿಸಿದರು.
‘ಇತ್ತೀಚೆಗೆ ಪುರಸಭೆ ಸದಸ್ಯ ಹನೀಪುಲ್ಲಾ ತನ್ನ ಗಂಡನ ಮೊಬೈಲ್‍ಗೆ ಪದೆಪದೇ ಕರೆ ಮಾಡಿ ಅಕ್ರಮ ಖಾತೆಗಳನ್ನು ಮಾಡಿಕೊಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದರು. ತನ್ನ ಗಂಡನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಯಾವುದಾದರೂ ಪ್ರಕರಣದಲ್ಲಿ ಸಿಲುಕಿಸಿ ಜೈಲಿಗೆ ಕಳಿಸುತ್ತೇನೆ ಎಂದೇಳಿ ಪ್ರಾಣ ಬೆದರಿಕೆ ಹಾಕುತ್ತಿದ್ದರು’ ಎಂದು ಮೃತ ಪವನ್ ಜೋಷಿ ಪತ್ನಿ ಅನನ್ಯ ಆರೋಪಿಸಿದರು.
‘ಇವರ ಜೊತೆಗೆ ಮಾಜಿ ಸದಸ್ಯರಾದ ಜೆ.ಎಂ.ಶ್ರೀನಿವಾಸ್ ಹಾಗೂ ಹಾಲಿ ಸದಸ್ಯ ಮಂಜುಳಾ ಪತಿ ಮುನಿರಾಜು ಅವರು ಸಹ ತನ್ನ ಗಂಡನಿಗೆ ಅಕ್ರಮ ಖಾತೆಗಳ ವಿಚಾರವಾಗಿ ಸದಾ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ತನ್ನ ಗಂಡ ಹಲವು ಬಾರಿ ನನ್ನ ಬಳಿ ಹೇಳಿಕೊಂಡಿದ್ದರು. ನನಗೆ ಪ್ರಾಣ ಬೆದರಿಕೆ ಬಂದಿದೆ. ಹೀಗಾಗಿ ನನ್ನ ಮೊಬೈಲ್ ಸಂಖ್ಯೆ ಬದಲಾಯಿಸಿದ್ದೇನೆ ಎಂದು ನನಗೆ ತಿಳಿಸಿದ್ದರು’ ಎಂದು ತಿಳಿಸಿದರು.
‘ತನ್ನ ಗಂಡನ ಸಾವಿಗೆ ಕಾರಣರಾದ ಈ ಮೂವರ ವಿರುದ್ಧ ಪೊಲೀಸರು ಐಫ್‍ಐಆರ್ ದಾಖಲಿಸಿ ತನಿಖೆ ನಡೆಸಬೇಕು. ಅಲ್ಲದೇ ಎಸ್‍ಐಟಿ ತನಿಖೆ ನಡೆಸಿ ನಮ್ಮ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು’ ಎಂದು ಒತ್ತಾಯಿಸಿದರು.
ಪುರಸಭೆ ನೌಕರ ಪವನ್ ಜೋಷಿ ಪ್ರಾಮಾಣಿಕ ಅಧಿಕಾರಿಯಾಗಿದ್ದರು. ಪುರಸಭೆ ಸದಸ್ಯ ಹನೀಪುಲ್ಲಾ ಅವರು ಮೋಸಗಾರ. ವಿಜಯಪುರದಲ್ಲಿ ನಕಲಿ ದಾಖಲೆಗಳ ಸೃಷ್ಟಿಕರ್ತ. ಅಕ್ರಮ ಖಾತೆಗಳನ್ನು ಮಾಡಿಕೊಡುವಂತೆ ಪವನ್ ಜೋಷಿಗೆ ಒತ್ತಡ ಹೇರಿ, ಪ್ರಾಣ ಬೆದರಿಕೆ ಹಾಕಿರುವ ಹನೀಫುಲ್ಲಾ, ಜೆ.ಎಂ.ಶ್ರೀನಿವಾಸ್ ಮತ್ತು ಮುನಿರಾಜು ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಬೇಕು. ಎಸ್‍ಐಟಿ ತನಿಖೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್ ಆಗ್ರಹಿಸಿದರು.
ಪವನ್ ಜೋಷಿ ಒಬ್ಬ ಹಾರ್ಡ್ ವರ್ಕರ್. ಪುರಸಭೆ ಸದಸ್ಯ ಹನೀಫುಲ್ಲಾ ಜಮೀನುಗಳಿಗೆ ಸಂಬಂಧಿಸಿದಂತೆ ನಕಲಿ ದಾಖಲೆ ನೀಡಿ ಮಾಡಿಕೊಡುವಂತೆ ಪವನ್‍ಗೆ ಒತ್ತಡ ಹೇರಿ ಧಮ್ಕಿ ಹಾಕುತ್ತಿದ್ದನು. ಹನೀಫುಲ್ಲಾ ವಿರುದ್ಧ ಪೊಲೀಸರು, ಅಧಿಕಾರಿಗಳು ಕಾನೂನು ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಬೇಕು ಎಂದು ಸಾಮಾಜಿಕ ಹೋರಾಟಗಾರ ರಫೀಕ್ ಹೇಳಿದರು.
ಅಕ್ರಮ ಖಾತೆಗಳನ್ನು ಮಾಡಕೊಡದಿದ್ದರೆ ನಿಮ್ಮನ್ನು ಬೇರೆ ಕಡೆ ವರ್ಗಾಯಿಸಲಾಗುವುದು ಎಂದು ನನ್ನ ಗಂಡನಿಗೆ ಧಮ್ಕಿ ಹಾಕಿದ್ದರು. ಈ ಕಾರಣಕ್ಕೆ ತನ್ನ ಗಂಡ ಒತ್ತಡಕ್ಕೆ ಮಣಿದು ಸಾವನ್ನಪ್ಪಿದ್ದಾನೆಅನನ್ಯ ಮೃತನ ಪತ್ನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.