ADVERTISEMENT

ಆನೇಕಲ್: ಗ್ರಾ.ಪಂ. ನೌಕರರ ಬೇಡಿಕೆ ಈಡೇರಿಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2025, 2:35 IST
Last Updated 23 ನವೆಂಬರ್ 2025, 2:35 IST
ಆನೇಕಲ್ ತಾಲ್ಲೂಕಿನ ಚಂದಾಪುರದ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕರ ಕಚೇರಿಯ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು
ಆನೇಕಲ್ ತಾಲ್ಲೂಕಿನ ಚಂದಾಪುರದ ಗ್ರಾಮ ಪಂಚಾಯಿತಿ ನೌಕರರ ಸಂಘದ ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕರ ಕಚೇರಿಯ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು   

ಆನೇಕಲ್: ಗ್ರಾಮ ಪಂಚಾಯಿತಿ ನೌಕರರ ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರವನ್ನು ಒತ್ತಾಯಿಸಬೇಕೆಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಆನೇಕಲ್‌ ಪದಾಧಿಕಾರಿಗಳು ತಾಲ್ಲೂಕಿನ ಚಂದಾಪುರದ ಶಾಸಕರ ಕಚೇರಿಗೆ ಮನವಿ ಪತ್ರ ಸಲ್ಲಿಸಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರಾಮಯ್ಯ ಮಾತನಾಡಿ, ಕರ್ನಾಟಕದಲ್ಲಿ ಸುಮಾರು 63 ಸಾವಿರ ಮಂದಿ ಗ್ರಾಮ ಪಂಚಾಯಿತಿ ನೌಕರರು, ಕರ ವಸೂಲಿಗಾರರು, ಕ್ಲರ್ಕ್‌ ಮತ್ತು ಡೇಟಾ ಆಪರೇಟರ್‌ಗಳು, ಸ್ವಚ್ಛತಾಗಾರರು, ವಾಟರ್‌ಮನ್‌ಗಳು ಕೆಲಸ ಮಾಡುತ್ತಿದ್ದಾರೆ. ಸೇವಾ ಜ್ಯೇಷ್ಠತೆ ಆಧಾರದಲ್ಲಿ ನೌಕರರಿಗೆ ₹36ಸಾವಿರ ವೇತನ ನೀಡಬೇಕು. ಚಾಮರಾಜನಗರ ಜಿಲ್ಲೆಯಲ್ಲಿ 27 ತಿಂಗಗಳಿನಿಂದ ವೇತನ ಸಿಗದೇ ನೌಕರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೌಕರರಿಗೆ ನಿಗದಿತ ಅವಧಿಯಲ್ಲಿ ಸಂಬಳ ನೀಡಬೇಕು. ಈ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಧ್ವನಿ ಎತ್ತಬೇಕು ಎಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಗ್ರಾಮ ಪಂಚಾಯಿತಿಯ ನೌಕರರನ್ನು ಸರ್ಕಾರಿ ನೌಕರರೆಂದು ಘೋಷಿಸಬೇಕು. ಸೇವಾ ಹಿರಿತನ ಆಧರಿಸಿ ವೇತನ ಹೆಚ್ಚಳ ಮಾಡಬೇಕು. ಗ್ರಾಮ ಪಂಚಾಯಿತಿ ನೌಕರರು ನಿವೃತ್ತಿ ಅಥವಾ ಮರಣ ಹೊಂದಿದರೆ ಪ್ರತಿ ತಿಂಗಳು ಕನಿಷ್ಠ ₹600 ನೀಡಬೇಕು, ₹10 ಲಕ್ಷ ಇಡಗಂಟು ನೀಡಬೇಕು. ತರಬೇತಿ ಪಡೆದಿರುವ ಸ್ವಚ್ಛ ವಾಹಿನಿ ನೌಕರರಿಗೆ ಉದ್ಯೋಗ ನೀಡಬೇಕು.

ADVERTISEMENT

ಹೆಚ್ಚುವರಿ ಕರವಸೂಲಿಗಾರರನ್ನು ನೇಮಕ ಮಾಡಬೇಕು. ಗ್ರಾಮ ಪಂಚಾಯಿತಿ ಸಿಬ್ಬಂದಿಗಳಿಗೆ ಇ-ಹಾಜರಾತಿ ಲೋಪದೋಷಗಳನ್ನು ಪಂಚತಂತ್ರದಲ್ಲಿ ಸರಿಪಡಿಸುವವರೆಗೂ ಸಿಬ್ಬಂದಿಗಳಿಗೆ ಪೂರ್ಣ ವೇತನ ನೀಡಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು. ಗ್ರೇಡ್‌–1ಗ್ರಾಮ ಪಂಚಾಯಿತಿಗಳನ್ನು ಜನಸಂಖ್ಯೆ ಆಧರಿಸಿ ಗ್ರಾಮ ಪಂಚಾಯಿತಿಗಳಾಗಿ ಮೇಲ್ದರ್ಜೇಗೇರಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮ ಪಂಚಾಯಿತಿ ನೌಕರರ ಸಂಘದ ತಾಲ್ಲೂಕು ಖಜಾಂಚಿ ಜಿ.ವೀರಪ್ಪ, ಪ್ರಧಾನ ಕಾರ್ಯದರ್ಶಿಗಳಾದ ಆಗ್ಗದೂರಪ್ಪ, ರೇಣುಕಾ ಪ್ರಸಾದ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.