ADVERTISEMENT

ತೂಬಗೆರೆ | ಬೆಂಕಿ ಆಕಸ್ಮಿಕ: ರಾಗಿ ಹುಲ್ಲಿನ ಬಣವೆ ಭಸ್ಮ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 4:56 IST
Last Updated 19 ಜನವರಿ 2026, 4:56 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಎಸ್‌.ನಾಗೇನಹಳ್ಳಿ ಗ್ರಾಮದ ರೈತ ವೆಂಕಟಪ್ಪ ಅವರ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿರುವುದು  
ದೊಡ್ಡಬಳ್ಳಾಪುರ ತಾಲ್ಲೂಕಿನ ಎಸ್‌.ನಾಗೇನಹಳ್ಳಿ ಗ್ರಾಮದ ರೈತ ವೆಂಕಟಪ್ಪ ಅವರ ಹುಲ್ಲಿನ ಬಣವೆ ಬೆಂಕಿಗೆ ಆಹುತಿಯಾಗಿರುವುದು     

ತೂಬಗೆರೆ(ದೊಡ್ಡಬಳ್ಳಾಪುರ): ತಾಲ್ಲೂಕಿನ ಎಸ್.ನಾಗೇನಹಳ್ಳಿ ಗ್ರಾಮದ ರೈತ ವೆಂಕಟಪ್ಪ ಅವರ ಹೊಲದಲ್ಲಿ ಭಾನುವಾರ ಆಕಸ್ಮಿಕ ಬೆಂಕಿ ಅವಘಡದಿಂದ ಹುಲ್ಲಿನ ಬಣವೆ ಸುಟ್ಟು ಹೋಗಿದೆ.

ಬೆಂಕಿ ಆಕಸ್ಮಿಕದಲ್ಲಿ ಸುಮಾರು ಐದು ಟ್ರಾಕ್ಟರ್ ಲೋಡ್ ರಾಗಿ ಹುಲ್ಲಿನ ಬಣವೆ, ಫಸಲಿನ ನಿರೀಕ್ಷೆಯಲ್ಲಿದ್ದ ಹಲಸಿನ ಮರ, ಟೊಮೆಟೊ ಬೆಳೆಗೆ ಅಳವಡಿಸಲಾಗಿದ್ದ ಅಪಾರ ಮೌಲ್ಯದ ಹನಿ ನೀರಾವರಿ ಪೈಪುಗಳು ಹಾಗೂ ಟೊಮೆಟೊ ಕಡ್ಡಿಗಳು ಬೆಂಕಿಗೆ ಆಹುತಿಯಾಗಿವೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ ಎಂದು ರೈತ ವೆಂಕಟಪ್ಪ ತಿಳಿಸಿದ್ದಾರೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಗ್ರಾಮಸ್ಥರು ನೀರು, ಮಣ್ಣು ಹಾಕಿ ಬೆಂಕಿ ನಂದಿಸಲು ಪ್ರಯತ್ನಿಸಿದರೂ ಬಿಸಿಲಿನ ತೀವ್ರತೆ ಹಾಗೂ ಗಾಳಿಯ ವೇಗದಿಂದ ಬೆಂಕಿ ಮತ್ತಷ್ಟು ವ್ಯಾಪಿಸಿಕೊಂಡಿತ್ತು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುವಷ್ಟರಲ್ಲಿ ಬಹುತೇಕ ಕೃಷಿ ಸಾಮಗ್ರಿಗಳು ಭಸ್ಮವಾಗಿದ್ದವು. ಆದರೆ ಬೆಂಕಿ ಮತ್ತಷ್ಟು ಪ್ರದೇಶಕ್ಕೆ ವ್ಯಾಪಿಸದಂತೆ ತಡೆದರು.

ADVERTISEMENT

ಈ ಬಗ್ಗೆ ಮಾಹಿತಿ ನೀಡಿರುವ ಗ್ರಾಮದ ಯುವ ಮುಖಂಡ ಉದಯ ಆರಾಧ್ಯ, ಆಕಸ್ಮಿಕ ಬೆಂಕಿಯಿಂದ ಸಂಪೂರ್ಣ ನಷ್ಟಕ್ಕೆ ಒಳಗಾದ ರೈತ ವೆಂಕಟಪ್ಪ ಅವರಿಗೆ ತಕ್ಷಣ ಸರ್ಕಾರದಿಂದ ಸೂಕ್ತ ಪರಿಹಾರ ನೀಡಬೇಕು, ಹಾನಿಯ ಸಮೀಕ್ಷೆ ನಡೆಸಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.