ರಾಮನಗರ: ‘ತನ್ನ ಅಂತ್ಯಕ್ರಿಯೆಗೆ ಕುಮಾರಸ್ವಾಮಿ ಬರಬೇಕು’ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಅಭಿಮಾನಿಯ ಮನೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಭಾನುವಾರ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.
ರಾಮನಗರ ತಾಲ್ಲೂಕಿನ ಬೊಮ್ಮಚ್ಚನಹಳ್ಳಿ ನಿವಾಸಿ, ಆಟೊ ಚಾಲಕ ಜಯರಾಂ ಗ್ಯಾಂಗ್ರೀನ್ ಪೀಡಿತರಾಗಿದ್ದು, ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದರು. 'ಕುಮಾರಣ್ಣ ನನ್ನ ಕುಟುಂಬಕ್ಕೆ ನೆರವಾಗಬೇಕು' ಎಂದು ಅವರು ಡೆತ್ ನೋಟ್ ನಲ್ಲಿ ಕೋರಿದ್ದರು. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ತಮ್ಮ ಅಭಿಮಾನಿಯ ಅಂತ್ಯಸಂಸ್ಕಾರದಲ್ಲಿ ಭಾಗಿಯಾದರು. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಈ ಸಂದರ್ಭ ಪತ್ರಕರ್ತರ ಜೊತೆ ಮಾತನಾಡಿದ ಕುಮಾರಸ್ವಾಮಿ 'ಜಯರಾಂ ಗ್ಯಾಂಗ್ರೀನ್ ನಿಂದ ಬಳಲಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಬೇಸರ ಆಯಿತು. ಅವರ ಅಂತಿಮ ಇಚ್ಛೆಯಂತೆ ಇಲ್ಲಿಗೆ ಭೇಟಿ ನೀಡಿದ್ದೇನೆ. ಮೃತರಿಗೆ ಸಣ್ಣ ವಯಸ್ಸಿನ ಅಂಗವಿಕಲ ಮಗ ಇದ್ದಾನೆ. ಆತನ ಭವಿಷ್ಯ ರೂಪಿಸಲು ಅಗತ್ಯವಾದ ನೆರವು ನೀಡುತ್ತೇನೆ' ಎಂದು ಕುಮಾರಸ್ವಾಮಿ ತಿಳಿಸಿದರು. ಇದೇ ಸಂದರ್ಭ ಮೃತರ ಕುಟುಂಬದವರಿಗೆ ನಿಖಿಲ್ ಕುಮಾರಸ್ವಾಮಿ ಧನಸಹಾಯ ನೀಡಿದರು.
ಅಭಿಮಾನಿಯ ಭಾವುಕ ಪತ್ರ: ಸದ್ಯ ರಾಮನಗರದ ಗಾಂಧಿ ನಗರದಲ್ಲಿ ವಾಸವಿದ್ದ ಜಯರಾಂ, ಆಪೆ ಅಟೊ ಓಡಿಸಿ ಜೀವನ ಸಾಗಿಸುತ್ತಿದ್ದರು. ಅವರ ಎಡಗಾಲಿಗೆ ಗ್ಯಾಂಗ್ರೀನ್ ಆಗಿದ್ದು, ಕ್ರಮೇಣ ಆರೋಗ್ಯ ವಿಷಮಿಸಿತ್ತು. ಇದರಿಂದ ಬೇಸತ್ತ ಜಯರಾಂ ತಾವು ಸಾಯುವ ಮುನ್ನ ಪತ್ರ ಬರೆದು ಜೇಬಿನಲ್ಲಿ ಇಟ್ಟುಕೊಂಡಿದ್ದರು. ‘ನಾನು ಆಗಿನಿಂದಲೂ ಜೆಡಿಎಸ್ ಹಾಗೂ ಕುಮಾರಣ್ಣನ ಅಭಿಮಾನಿ. ಹೀಗಾಗಿ ನನ್ನ ಮರಣಾನಂತರ ಅಂತಿಮ ಸಂಸ್ಕಾರಕ್ಕೆ ಕುಮಾರಸ್ವಾಮಿ ಬರಬೇಕು. ಬುದ್ಧಿಮಾಂದ್ಯ ಮಗನಿಗೆ ನೆರವಾಗಬೇಕು. ಅವರ ಋಣವನ್ನು ಮುಂದಿನ ಜನ್ಮದಲ್ಲಿ ಖಂಡಿತ ತೀರಿಸುತ್ತೇನೆ’ ಎಂದು ಭಾವುಕರಾಗಿ ಬರೆದುಕೊಂಡಿದ್ದರು. ತಮ್ಮೊಡನೆ ಒಡನಾಡಿದ ಶಂಕರ್‌ನಾಗ್ ಆಟೊ ಚಾಲಕರ ಸಂಘದ ಸದಸ್ಯರು, ಕುಟುಂಬಸ್ಥರು, ರಂಗಭೂಮಿ ಕಲಾವಿದರಿಗೂ ಅವರು ಅಂತಿಮ ನಮಸ್ಕಾರ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.