ADVERTISEMENT

ದೊಡ್ಡಬಳ್ಳಾಪುರ: ರಾಷ್ಟ್ರಿಯ ಹೆದ್ದಾರಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 6:17 IST
Last Updated 25 ಸೆಪ್ಟೆಂಬರ್ 2025, 6:17 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

– ಐಸ್ಟಾಕ್ ಚಿತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 648ರ ಆಲಹಳ್ಳಿ ಸಮೀಪ ವಾಹನಗಳನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಸರಕು ಸಾಗಣೆ ವಾಹನಗಳ ಚಾಲಕರು ಮತ್ತು ಪ್ರಯಾಣಿಕರ ಮೇಲೆ ಮಚ್ಚು, ಲಾಂಗುಗಳಿಂದ ಹಲ್ಲೆ ನಡೆಸಿ ಹಣ, ಮೊಬೈಲ್‌ಗಳನ್ನು ದೋಚಿ ಪರಾರಿಯಾಗಿರುವ ಪ್ರಕರಣ ಗುರುವಾರ ಬೆಳಗ್ಗಿನ ಜಾವ ನಡೆದಿದೆ.

ADVERTISEMENT

ಆಟೊದಲ್ಲಿ ಬಂದಿದ್ದ ಆರು ಜನ ದುಷ್ಕರ್ಮಿಗಳು ಎರಡು ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಕೋಲಾರ ಮೂಲದ ಮುನಿರಾಜು (33) ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಕೋಲಾರದಿಂದ ನೆಲಮಂಗಲ ಸಮೀಪದ ದಾಸಾನುಪುರ ಬಳಿ ಇರುವ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ತರಕಾರಿ ಲೋಡ್ ತೆಗೆದುಕೊಂಡು ಹೋಗುತ್ತಿದ್ದಾಗ ಕ್ಯಾಂಟರ್‌ನಲ್ಲಿ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲು ಆಲಹಳ್ಳಿ ಸಮೀಪ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿದ್ದ ಮುನಿರಾಜು ಅವರ ಮೇಲೆ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿ, ಮೋಬೈಲ್ ಕಸಿದುಕೊಂಡು ಹೋಗಿದ್ದಾರೆ.

ಈ ಹಲ್ಲೆ ಘಟನೆ ನಡೆದ ಒಂದು ಕಿ.ಮೀ ಅಂತರದಲ್ಲೇ ಮತ್ತೊಂದು ಗೂಡ್ಸ್ ವಾಹನವನ್ನು ಅಡ್ಡಗಟ್ಟಿರುವ ದುಷ್ಕರ್ಮಿಗಳು ಚಾಲಕ ಸೇರಿದಂತೆ ಮೂವರ ಮೇಲೆ ದಾಳಿ ಮಾಡಿ ಹಣ, ಮೊಬೈಲ್ ದೋಚಿದ್ದಾರೆ. ಹಾಗೆಯೇ, ಸುಮಾರು 15 ಕಿ.ಮೀ ದೂರದ ಮಧುರೆ ಸಮೀಪದಲ್ಲೂ ವಾಹನಗಳನ್ನು ಅಡ್ಡಗಟ್ಟಿ ಲೂಟಿ ಮಾಡಿ ಪರಾರಿಯಾಗಿದ್ದಾರೆ.

ಬುಲೆಟ್ ರಘು ಹತ್ಯೆ

ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಬಾಶೆಟ್ಟಿಹಳ್ಳಿಯಲ್ಲಿ ಬುಧವಾರ ತಡರಾತ್ರಿ ಬುಲೆಟ್ ರಘು (38) ಎಂಬಾತನನ್ನು ನಡು ರಸ್ತೆಯಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ. ಹತ್ಯೆಗೆ ಇನ್ನೂ ನಿಖರ ಕಾರಣ ತಿಳಿದುಬಂದಿಲ್ಲ. ಆರೋಪಿಗಳ ಪತ್ತೆಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುವಾರ ಬೆಳಿಗ್ಗೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಸ್.ನಾಗರಾಜ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.