ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ
ಪ್ರಾತಿನಿಧಿಕ ಚಿತ್ರ
ಹೊಸಕೋಟೆ: ಹಿಂದುಳಿದ ವರ್ಗಗಳ ಸ್ಥಿತಿಗತಿ ತಿಳಿಯಲು ಸರ್ಕಾರ ನಡೆಸುತ್ತಿರುವ ಶೈಕ್ಷಣಿಕ–ಆರ್ಥಿಕ ಸಮೀಕ್ಷೆಗೆ ತಾಲ್ಲೂಕಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಸಮೀಕ್ಷೆಯಲ್ಲಿ ಪ್ರಬಲ ಸಮುದಾಯಗಳು ತಪ್ಪು ಮಾಹಿತಿ ನೀಡುತ್ತಿವೆ. ತಾವು ಆರ್ಥಿಕವಾಗಿ ಸಶಕ್ತರಲ್ಲ. ನಾವು ಬಡವರು ಎಂದು ತೋರಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಪ್ರತಿ ಕಾಲಂ ನಲ್ಲೂ ನಾವು ಹಿಂದುಳಿದವರು ಎಂದು ಬಿಂಬಿಸಿಕೊಳ್ಳಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಅವಕಾಶ ವಂಚಿತರಾಗುತ್ತೇವೆ ಎಂದು ಪ್ರಬಲ ಸಮುದಾಯಗಳು ರಾಜಾರೋಷವಾಗಿ ಸಭೆ ನಡೆಸಿ ಸೂಚಿಸಿವೆ. ರಾಜ್ಯದ ಎಲ್ಲೆಡೆ ಹಲವು ಪ್ರಬಲ ಸಮುದಾಯಗಳು ಸಮೀಕ್ಷೆಗೂ ಮುನ್ನವೇ ಸಭೆಗಳನ್ನು ನಡೆಸಿ, ಸಮೀಕ್ಷೆಯಲ್ಲಿ ಯಾವ ರೀತಿ ಉತ್ತರಿಸಬೇಕೆಂದು ಸಮುದಾಯ ಮುಖಂಡರು ತಿಳಿಸಿಕೊಟ್ಟಿದ್ದಾರೆ.
ಅದರಂತೆ ಉಳ್ಳವರು ತಾವು ಬಡವರು ಎಂಬಂತೆ ಮಾಹಿತಿ ನೀಡುತ್ತಿದ್ದಾರೆ. ಇದನ್ನು ಆಧಾರಿಸಿ ಸರ್ಕಾರ ಹೊಸ ಯೋಜನೆ, ನೀತಿ–ನಿಯಮ ರೂಪಿಸಿದರೆ ಸಾಮಾಜಿಕ–ಆರ್ಥಿಕ ಅಸಮಾತೋಲನ ಮುಂದುವರೆಯಲಿದೆ. ಸಾಮಾಜಿಕ ನ್ಯಾಯ ಎಂಬುದು ಕನ್ನಡಿಯೊಳಗಿನ ಗಂಟು ಆಗಲಿದೆ ಎಂಬ ಆತಂಕವನ್ನು ಪ್ರಜ್ಞಾವಂತರು ಮತ್ತು ಚಿಂತಕರು ಹೊರ ಹಾಕಿದ್ದಾರೆ.
12, 13 ಹಸುಗಳಿದ್ದರೂ ಕೇವಲ 2–3 ಹಸುಗಳು ಮಾತ್ರ ಇವೆ, ಅಡುಗೆ ಅನಿಲ, ಪ್ರಿಡ್ಜ್, ವಾಷಿಂಗ್ ಮೆಷಿನ್ ಇಲ್ಲ, ನಿವೇಶನ, ಸರ್ಕಾರಿ ಸೌಲಭ್ಯ ಪಡೆದಿದ್ದರೂ ಪಡೆದಿಲ್ಲ, ಕಟ್ಟಡ ಎಂಜಿನಿಯರ್, ಮೇಸ್ತ್ರೀ, ರಿಯಲ್ ಎಸ್ಟೇಟ್ ಮತ್ತಿತರ ಔದ್ಯೋಗಿಕ ಕ್ಷೇತ್ರದಲ್ಲಿದ್ದರೂ ತಮ್ಮ ಕುಲ ಕಸುಬು ವ್ಯವಸಾಯ, ಕೂಲಿ ಮಾಡುತ್ತಿದ್ದೇವೆ, ಬಂಗಾರ ಇದ್ದರೂ ಇಲ್ಲ, ವೈದ್ಯ, ಎಂಜಿನಿಯರ್ ಪದವಿ ಪಡೆದವರು ಇದ್ದರೂ ನಾವು ಶೈಕ್ಷಣಿಕವಾಗಿಯೂ ಹಿಂದುಳಿದಿದ್ದೇವೆ ಎಂದು ಪ್ರಬಲ ಜಾತಿಗಳು ತೋರಿಸಿಕೊಳ್ಳುತ್ತಿವೆ ಎಂದು ಸಮೀಕ್ಷೆದಾರರೊಬ್ಬರು ತಿಳಿಸಿದ್ದಾರೆ.
ಬಲಾಢ್ಯ ಸಮುದಾಯಗಳೇ ತಾವು ಬಡವರು ಎಂದು ಬಿಂಬಿಸಿಕೊಂಡರೆ, ತಳ, ಶೋಷಿತ ಮತ್ತು ಅಲೆಮಾರಿ ಸಮುದಾಯಗಳಿಗೆ ಮಾಡುವ ದ್ರೋಹ ಅಲ್ವವೇ ಎಂಬ ಪ್ರಶ್ನೆ ಪ್ರಜ್ಞಾವಂತ ನಾಗರಿಕ ಸಮಾಜದಲ್ಲಿ ಮೂಡಿದೆ.
ವಿದ್ಯಾರ್ಥಿಗಳಿಂದ ಸಮೀಕ್ಷೆ: ಸಮೀಕ್ಷೆಗೆ ಶಿಕ್ಷರನ್ನು ನಿಯೋಜಿಸಲಾಗಿದೆ. ಆದರೆ ಶಿಕ್ಷಕರು ತಾವು ಸಮೀಕ್ಷೆಗೆ ತೆರಳದೆ ಪದವಿ ವಿಧ್ಯಾರ್ಥಿಗಳು ಹಾಗೂ ಬೇರೆ ವ್ಯಕ್ತಿಗಳಿಂದ ಮಾಡಿಸುತ್ತಿದ್ದಾರೆ. ಇದರಿಂದ ಗುಣಮಟ್ಟದ ನಿರೀಕ್ಷಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ.
ರಾಜ್ಯ ಸರ್ಕಾರ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿ ಆಧರಿಸಿ ಅವಕಾಶ ವಂಚಿತರಿಗೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನಮಾನ ಕಲ್ಪಿಸಲು ಸಮೀಕ್ಷೆ ಕೈಗೊಂಡಿರುವುದು ಒಳ್ಳೆಯ ಬೆಳವಣಿಗೆ. ಆದರೆ ಪ್ರಬಲ ಸಮುದಾಯಗಳು ಸಮೀಕ್ಷೆದಾರರಿಗೆ ತಪ್ಪು ಮಾಹಿತಿ ನೀಡಿ ನಾವು ಸಹ ಸಮಾಜದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದವರು ಎಂದು ಬಿಂಬಿಸುತ್ತಿರುವುದು ಸಾವಿರಾರು ವರ್ಷಗಳಿಂದ ಶೋಷಿಸಲ್ಪಟ್ಟ ಮತ್ತು ಅವಕಾಶ ವಂಚಿತ ಸಮುದಾಯಗಳಿಗೆ ದ್ರೋಹ ಬಗೆದಂತೆ. ಇಂತಹ ತಪ್ಪು ಮಾಹಿತಿಯಿಂದ ಕೂಡಿದ ಸಮೀಕ್ಷೆಯನ್ನು ಸರ್ಕಾರ ಹೇಗೆ ಪರಿಗಣಿಸುತ್ತದೆ. ಯಾವ ರೀತಿಯ ಹೆಜ್ಜೆ ಇಡುತ್ತೆ ಎಂಬುದನ್ನು ಮುಂದೆ ನೋಡಬೇಕಾಗುತ್ತದೆ.–ಹರಿಂದ್ರ, ಅಧ್ಯಕ್ಷ, ಅಖಿಲ ಭಾರತ ವಕೀಲರ ಒಕ್ಕೂಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.