
ಹೊಸಕೋಟೆ: ಪರಿಶಿಷ್ಟ ಸಮುದಾಯಗಳ ವಿವಿಧ ಬೇಡಿಕೆ ಈಡೇರಿಸಲು ಹಾಗೂ ಮೂಲ ಸೌಕರ್ಯ ಕಲ್ಪಿಸಲು ಆಗ್ರಹಿಸಿ ಜಾಂಬವ ಯುವಸೇನೆಯಿಂದ ತಮಟೆ ಚಳವಳಿ ನಡೆಯಿತು.
ತಾಲ್ಲೂಕಿನ ಜಡಿಗೆನಹಳ್ಳಿ ಹೋಬಳಿಯ ಮೈಲಾಪುರ ಗ್ರಾಮದ ದಲಿತರಿಗೆ ಸ್ಮಶಾನ ಭೂಮಿ, ನಿವೇಶನ, ಸಮುದಾಯ ಭವನ, ಗ್ರಂಥಾಲಯ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಬಳಿ ಶೌಚಾಲಯ, ಹಾಗೂ ಮಾಲೂರು ರಸ್ತೆಯ ಗುಂಡಿ ಮುಚ್ಚುವಂತೆ ಆಗ್ರಹಿಸಿ ಹಾಗೂ ಹೋರಾಟಗಾರ ಹೂಡಿ ಚಿನ್ನಿ(ಡಾ. ರಾಮಚಂದ್ರ) ಮೇಲೆ ನಡೆದ ಹಲ್ಲೆ ಖಂಡಿಸಿ ನಗರದ ಕೆಇಬಿ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ತಮಟೆ ಚಳುವಳಿ ನಡೆಸಲಾಯಿತು.
ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ದಲಿತರ ಬದುಕು ಏನು ಬದಲಾಗಿಲ್ಲ. ರಾಜಕಾರಣಿಗಳ ಹುಸಿ ಭರವಸೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಅವಕಾಶ ವಂಚಿತರನ್ನಾಗಿಸಿದೆ. ದಲಿತರು ಇಂದಿಗೂ ಮೂಲ ಸೌಕರ್ಯಗಳಿಗಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಇದೆ ಎಂದು ಪ್ರತಿಭಟನನಿರತರು ಆಕ್ರೋಶ ವ್ಯಕ್ತಪಡಿಸಿದರು.
ಮೈಲಾಪುರ ಗ್ರಾಮದಲ್ಲಿ ಗೂಡುಗಳಂತಿರುವ ಒಂದೇ ಮನೆಯಲ್ಲಿ ಎರಡು ಮೂರು ಕುಟುಂಬಗಳು ವಾಸಿಸುತ್ತಿವೆ. ಇಲ್ಲಿವರೆಗೂ ಅದರತ್ತ ಯಾರು ಮುಖ ಮಾಡಿಲ್ಲ. ಅವರಿಗಾಗಿ ನಿವೇಶನ ಮಂಜೂರು ಮಾಡಬೇಕು. ಸಮುದಾಯಭವನ, ಜ್ಞಾನ ವೃದ್ಧಿಗಾಗಿ ಗ್ರಂಥಾಲಯ, ಅಂತ್ಯಕ್ರಿಯೆ ಮಾಡಲು ಸ್ಮಶಾನಭೂಮಿ ಮಂಜೂರು ಮಾಡಬೇಕು, ಮಾಕೂರು ರಸ್ತೆ ಭಾರಿ ಗುಂಡಿಗಳಿಂದ ಹದಗೆಟ್ಟಿದ್ದು, ಸರಿಪಡಿಸಬೇಕು. ಮೈಲಾಪುರ ಗ್ರಾಮದ ಸರ್ವೆ ನಂಬರ್ 15/1 ರಲ್ಲಿ ಇರುವ 7 ಗುಂಟೆ, ಗೋಮಾಳ ಜಮೀನನ್ನು ನಮ್ಮ ಸಮುದಾಯದ ಅಭಿವೃದ್ಧಿ ಕೆಲಸಗಳಿಗಾಗಿ ಮಂಜೂರು ಮಾಡಿಕೊಡಬೇಕೆಂದು ಜಾಂಬವ ಯುವಸೇನೆ ರಾಜ್ಯಾಧ್ಯಕ್ಷ ರಮೇಶ್ ಚಕ್ರವರ್ತಿ ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.