
ಹೊಸಕೋಟೆ: ಬಕುಂಗ್ ಚಂಡಮಾರುತ ಪರಿಣಾಮ ವಾತಾವರಣದಲ್ಲಿ ಏರಳಿತವಾಗಿ ತಾಲ್ಲೂಕಿನ ಕೆಲವಡೆ ತಾಪಮಾನ 22 ಡಿಗ್ರಿಯಿಂದ 13 ಡಿಗ್ರಿಯಷ್ಟು ಕುಸಿತ ಕಂಡಿದೆ.
ಬೆಳಗ್ಗೆ 9ಗಂಟೆಯಾದರೂ ವಾಹನ ಚಲಾಯಿಸಲು ರಸ್ತೆ ಕಾಣುವುದಿಲ್ಲ. ಶಾಲಾ–ಕಾಲೇಜು ಹೋಗುವ ವಿದ್ಯಾರ್ಥಿಗಳು, ರೈತರು, ಕಾರ್ಮಿಕರು, ನೌಕರರು, ಪಶುಪಾಲಕರು ಚಳಿಯಿಂದ ಮನೆಯಿಂದ ಹೊರಬಾರಲು ಸಾಧ್ಯ ಆಗುತ್ತಿಲ್ಲ.
ಚಳಿಯಿಂದ ಮಕ್ಕಳಿಗೆ ಶೀತ ಜ್ವರ ಭೀತಿ: ನಗರ ಪ್ರದೇಶಕ್ಕಿಂತ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಚಳಿ ಇದೆ. ಪೋಷಕರು ಮಕ್ಕಳನ್ನು ಬೆಚ್ಚನೆ ಉಡುಪಿನಲ್ಲಿ ಶಾಲೆಗೆ ಕಳುಹಿಸುತ್ತಿದ್ದಾರೆ. ಆದರೂ ಮಕ್ಕಳಿಗೆ ಚರ್ಮ, ಶೀತ, ಜ್ವರ, ಶ್ವಾಸಕೋಶ ಸಂಬಂಧಿ ಕಾಯಿಗಳಿಗೆ ಎಲ್ಲಿ ತುತ್ತಾಗುತ್ತರೋ ಎಂಬ ಅಂತಕ ಪೋಷಕರಲ್ಲಿ ಕಾಡುತ್ತಿದೆ.
ಕಂಪನಿಗಳಿಗೆ ತೆರಳಲು ಪರದಾಟ: ನಗರದ ನರಸಾಪುರ, ಚೊಕ್ಕಹಳ್ಳಿ ಪಿಲಗುಂಪ, ಮಾಲೂರು, ವೈಟ್‌ಫೀಲ್ಡ್ ಮೊದಲಾದ ಕೈಗಾರಿಕಾ ವಲಯಗಳಿಗೆ ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕಾರ್ಮಿಕರು ಇಲ್ಲಿಂದಲೇ ಸಂಚಾರ ನಡೆಸುತ್ತಾರೆ. ಆದರೆ, ಕಾರ್ಮಿಕರು ಮನೆಯಿಂದ ಹೊರಬರಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ.
ಆಸ್ಪತ್ರೆಗಳಿಗೆ ತೆರಳಲು ಹಿಂಜರಿಕೆ: ಹೃದಯ ಸಂಬಂಧಿ ಕಾಯಿಲೆ, ಪಾರ್ಶ್ವವಾಯು, ಮೂತ್ರಪಿಂಡ ಪೀಡಿತರು ಆರೋಗ್ಯ ಕೇಂದ್ರಗಳಿಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳಲು ಹಿಂಜರಿಯುವ ಪರಿಸ್ಥಿತಿ ಇದೆ.
ಬೆಳೆಗೂ ತಟ್ಟಿದ ಚಳಿ ಕಾವು: ತಾಲ್ಲೂಕಿನ 10,250 ಎಕರೆಯಲ್ಲಿ ಬೆಳೆದ ರಾಗಿ ಬೆಳೆಯು ಬಹುತೇಕ ಕಟಾವುಗೊಂಡಿದೆ. ಕೆಲವೆಡೆ ಮಾತ್ರ ಕಟಾವು ಯಂತ್ರ ಸಿಗದೆ ರೈತರು ಪರಿತಪಿಸುತ್ತಿದ್ದಾರೆ. ಚಳಿಯ ತೇವಾಂಶದಿಂದ ರಾಗಿ ಮೊಳಕೆಯೊಡೆಯುವ ಭೀತಿಯಲ್ಲಿ ರೈತರು ಇದ್ದಾರೆ.
ವಾಹನ ಸವಾರರ ಪರದಾಟ: ರಸ್ತೆಯಲ್ಲಿ ದಟ್ಟ ಮಂಜಿನಿಂದಾಗಿ ವಾಹನ ಸವಾರರು ದೀಪ ಬೆಳಗಿಸಿಕೊಂಡು ವಾಹನಗಳನ್ನು ಚಲಾಯಿಸಬೇಕಾಗಿದೆ. ಇದರಿಂದ ಅಪಘಾತಗಳ ಸಂಖ್ಯೆಗಳ ಹೆಚ್ಚಾಗುತ್ತಿದೆ. ಪೌರ ಕಾರ್ಮಿಕರು ಕೂಡ ಚಳಿಯಿಂದ ತತ್ತರಿಸುವಂತಾಗಿದೆ. ಬೀದಿ ಬದಿ ವ್ಯಾಪಾರಿಗಳು ಕೂಡ ಚಳಿ ಹೊಡತದಿಂದ ವ್ಯಾಪಾರ ನಷ್ಟ ಅನುಭವಿಸುವಂತಾಗಿದೆ.
ಚಳಿ ಹೆಚ್ಚಿರುವ ಕಾರಣ ಭಿಕ್ಷುಕರು ಅಲೆಮಾರಿಗಳು ಬೀದಿಬದಿ ವ್ಯಾಪಾರಿಗಳು ಕಟ್ಟಡ ಕಾರ್ಮಿಕರು ಆಟೊ ಚಾಲಕರಿಗೆ ಕಾರ್ಮಿಕ ಇಲಾಖೆ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಬೆಚ್ಚಗಿನ ಉಡುಪನ್ನು ಉಚಿತವಾಗಿ ವಿತರಿಸಬೇಕು.– ವೆಂಕಟರಾಜು, ಸಿಐಟಿಯು ಮುಖಂಡ
ಬೆಳಿಗ್ಗೆ ಹೂವು ಅನ್ನು ಮಂಡಿಗೆ ಕೊಂಡೊಯ್ಯಲು ವಿಪರೀತ ತೊಂದರೆ ಇದೆ. ಬೈಕ್‌ನಲ್ಲಿ ಹೋಗಲು ಸಾಧ್ಯವಿಲ್ಲ. ಮಂಡಿಗೆ ಬೇಗ ಹೋದರೆ ಮಾತ್ರ ಹರಾಜಿನಲ್ಲಿ ಉತ್ತಮ ಬೆಲೆ ಸಿಗುತ್ತದೆ.– ಶ್ರೀನಿವಾಸ್, ಗುಲಾಬಿ ಹೂವು ಬೆಳೆಗಾರ ಗಿದ್ದಪ್ಪನಹಳ್ಳಿ
ಕಳೆದ ತಿಂಗಳಿಂದ ಚಳಿ ಮತ್ತು ಮಂಜಿನಿಂದ ಜನ ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಜನ ಮನೆಯಲ್ಲೇ ಟಿ ಕಾಫಿ ಮಾಡಿಕೊಂಡು ಕೂಡಿಯುತ್ತಿರುವ ಕಾರಣ ವ್ಯಾಪಾರನೇ ಆಗುತ್ತಿಲ್ಲ.– ನಾಗರಾಜ್, ಕಾಫಿ. ಟೀ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.