
ಹೊಸಕೋಟೆ ನಗರದ ಸಾಯಿ ಬಡಾವಣೆ ಸಮೀಪ ತ್ಯಾಜ್ಯಕ್ಕೆ ಬೆಂಕಿ ಹಚ್ಚಿರುವುದು
ಹೊಸಕೋಟೆ: ತಾಲ್ಲೂಕಿನಲ್ಲಿ ಎಲ್ಲಿ ನೋಡಿದರೂ ಕಸದ ರಾಶಿ ಬೆಟ್ಟದಂತೆ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಇದನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡದೆ ತ್ಯಾಜ್ಯಕ್ಕೆ ಬೆಂಕಿ ಹಚ್ಚುವುದು ಸಾಮಾನ್ಯವಾಗಿ ಬಿಟ್ಟಿದೆ. ಬೇಸಿಗೆ ಆರಂಭವಾಗಿರುವುದರಿಂದ ಹೆದ್ದಾರಿ, ಕೆರೆ, ಕುಂಟೆ ಹಾಗೂ ಖಾಲಿ ಜಾಗಗಳಲ್ಲಿ ಸುರಿಯುವ ಕಸವನ್ನು ಸುಡುವ ಕೆಟ್ಟ ಚಾಳಿ ಹೆಚ್ಚಾಗಿದೆ.
ಬೇರೆ ಋತುವಿನಲ್ಲಿ ಕಸದ ರಾಶಿ ಹೆಚ್ಚಾದರೆ ಮಾತ್ರ ಬೆಂಕಿ ಹಚ್ಚಲಾಗುತ್ತದೆ. ಆದರೆ ಬೇಸಿಗೆಯಲ್ಲಿ ಪ್ರತಿ ಬಾರಿ ತ್ಯಾಜ್ಯ ಸುರಿದಾಗಲೆಲ್ಲ ಬೆಂಕಿ ಹಚ್ಚಲಾಗುತ್ತಿದೆ. ಇದರಿಂದ ಪರಿಸರ ಮಾಲಿನ್ಯ ಆಗುವುದಲ್ಲದೆ, ಅಸ್ತಮಾ, ಶ್ವಾಸಕೋಶ ಸಂಬಂಧಿತ ರೋಗಿಗಳಿಗೆ ತೊಂದರೆ ಆಗುತ್ತಿದೆ. ಆರೋಗ್ಯವಂತರಲ್ಲಿಯೂ ಉಸಿರಾಟದ ಸಮಸ್ಯೆ ಉಂಟು ಮಾಡುತ್ತಿದೆ. ಪ್ಲಾಸ್ಟಿಕ್‌ನಂತಹ ಮಾರಕ ವಸ್ತುಗಳು ಬೇಯುವಾಗ ಹೊರಹೊಮ್ಮುವ ಹೊಗೆ ಜನರ ಆರೋಗ್ಯವನ್ನು ನಿಧನವಾಗಿ ಸುಡುತ್ತಿದೆ.
ಜನ–ಜಾನುವಾರ ಆರೋಗ್ಯ ಮಾತ್ರವಲ್ಲದೆ ಪಕ್ಷಿ, ಇಲಿ–ಹೆಗ್ಗಣ, ಹಾವು ಮತ್ತಿತರ ಕೀಟ ಪ್ರಬೇಧಗಳಿಗೂ ಧಕ್ಕೆ ಉಂಟಾಗುತ್ತಿದೆ.
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಕಾಯ್ದೆ 2010 ಮತ್ತು ಘನತ್ಯಾಜ್ಯ ನಿರ್ವಹಣಾ ನಿಯಮಗಳ ಅಡಿಯಲ್ಲಿ ಕಸ ಸುಡುವುದು ಕಾನೂನುಬಾಹಿರ ಮತ್ತು ದಂಡನೀಯ ಅಪರಾಧವಾಗಿದೆ. ಆದರೂ ಕೆಲ ಸಾರ್ವಜನಿಕರು, ಹೋಟೆಲ್, ಬೇಕರಿ ಹಾಗೂ ವಿವಿಧ ಮಳಿಗೆಯವರು ಎಲ್ಲೆಂದರಲ್ಲಿ ತ್ಯಾಜ್ಯ ಸುರಿಯುತ್ತಿದ್ದಾರೆ. ಇದಕ್ಕೆ ಕೆಲವರು ಬೆಂಕಿ ಹಚ್ಚುವ ಮೂಲಕ ಯಾವುದೇ ತಪ್ಪು ಮಾಡದ ಜನ ಸಾಮಾನ್ಯರ ಆರೋಗ್ಯಕ್ಕೂ ಅಗ್ನಿ ಸ್ಪರ್ಶ ಮಾಡಿದ್ದಾರೆ.
ಎಲ್ಲೆಲ್ಲಿ ಸಮಸ್ಯೆ?: ತಾಲ್ಲೂಕಿನ ಕೆರೆ ಕುಂಟೆ, ರಾಷ್ಟ್ರೀಯ ಹೆದ್ದಾರಿ-75ರ ಹೊಸಕೋಟೆಯಿಂದ ತಾವರೇಕೆರೆ ವರೆಗೂ, ಹೊಸಕೋಟೆ ಮತ್ತು ಚಿಂತಾಮಣಿ ಹೆದ್ದಾರಿಯಲ್ಲಿ ನಂದಗುಡಿವರೆಗೂ, ಹೊಸಕೋಟೆ ಡೇರಿ ಮುಂಭಾಗದ ಗುಡ್ಡ, ಖಾಲಿ ಜಾಗ, ಅಪಾರ್ಟ್ಮೆಂಟ್ ಮೊದಲಾದ ಕಡೆ ಅವ್ಯಾಹತವಾಗಿ ಕಸಕ್ಕೆ ಬೆಂಕಿ ಹಚ್ಚುತ್ತಿದ್ದರೂ ನಗರಸಭೆ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ, ಪರಿಸರ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಜಾಣ ಕುರುಡತನ ಪ್ರದರ್ಶಿಸುತ್ತಿದ್ದಾರೆ. ಈ ಸಂಸ್ಥೆಗಳು ಇದಿಯೇ ಇಲ್ಲವೋ ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿದೆ.
ರೋಗ ರುಜನೆ ಹರಡುವ ತಾಣ: ತಾಲ್ಲೂಕಿನಾದ್ಯಂತ ಹೆದ್ದಾರಿ ಬದಿ, ಕೆರೆ ಕುಂಟೆ, ಚರಂಡಿ, ಗುಡ್ಡಗಳಲ್ಲಿ ರಾತ್ರಿ ಇಲ್ಲವೇ ಮುಂಜಾನೆ ಕಸ ಸುರಿದ ಕಸಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ಅದರ ಸಮೀಪ ವಾಸ ಮಾಡುತ್ತಿರುವ ಜನರಲ್ಲಿ ಶ್ವಾಶಕೋಶ, ಹೃದಯ ಸಂಬಂದಿ, ಚರ್ಮ, ಕಣ್ಣು ಉರಿ, ದೃಷ್ಟಿ ಸಮಸ್ಯೆ ಆರಂಭವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಕರೆ,ಕುಂಟೆ ವಿಷಮಯ: ಒಂದು ಕಾಲಕ್ಕೆ ತಾಲ್ಲೂಕಿನ ಕೆರೆ ಕುಂಟೆಗಳು ಜನರ ಜೀವ ನಾಡಿಗಳಂತಿದ್ದವು. ಆದರೆ ರಾತ್ರೋರಾತ್ರಿ ಕೆರೆ ಕುಂಟೆ ಅಂಗಳದಲ್ಲಿ ತ್ಯಾಜ್ಯ ಸುರಿದು ಬೆಂಕಿ ಹಚ್ಚುತ್ತಿರುವುದರಿಂದ ಕೆರೆ ವಿಷಮಯವಾಗುತ್ತಿದೆ. ಜಲಚರಗಳಿಗೂ ಕುತ್ತು ಎದುರಾಗಿದೆ. ವಲಸೆ ಮತ್ತು ಸ್ಥಳೀಯ ಪಕ್ಷಿ ಪ್ರಭೇಧಗಳ ಆವಾಸ ಸ್ಥಾನಕ್ಕೆ ಧಕ್ಕೆಯಾಗುತ್ತಿದೆ.
ಪ್ರಾಣಿ–ಪಕ್ಷಿ ಮೂಕವೇದನೆ: ಕೆರೆ, ಕುಂಟೆ ಹೆದ್ದಾರಿ ಮತ್ತು ಖಾಲಿ ಜಾಗಗಳಲ್ಲಿ ತ್ಯಾಜ್ಯಕ್ಕೆ ಬೆಂಕಿ ಹಚ್ಚುತ್ತಿರುವುದರಿಂದ ದಟ್ಟ ಹೊಗೆಯು ಸುತ್ತಲಿನ ಪರಿಸರವನ್ನು ಮಾಲಿನ್ಯಗೊಳಿಸುತ್ತಿದ. ಇದರಿಂದ ತೋಟಗಳಲ್ಲಿ ಕೆಲಸ ಮಾಡುವ ರೈತರು, ವಾಹನ ಸವಾರರು, ಅಕ್ಕಪಕ್ಕದ ಗ್ರಾಮಸ್ಥರು, ಪ್ರಾಣಿ ಪಕ್ಷಿಗಳು ಮೂಕವೇದನೆ ಅನುಭವಿಸುವಂತಾಗಿದೆ ಎಂದು ಹವ್ಯಾಸಿ ಪಕ್ಷಿವೀಕ್ಷಕ ಸ್ವರೂಪ್ ಭಾರದ್ವಾಜ್ ಆಕ್ರೋಶ ಹೊರಹಾಕಿದರು.
ಕೆಲವೊಮ್ಮೆ ಹೊಗೆಯಿಂದ ಹೆದ್ದಾರಿಯಲ್ಲಿ ಎದುರು ಬದರು ಬರುವ ವಾಹನಗಳು ಕಾಣದಂತಾಗಿ ಅಪಘಾತಕ್ಕೆ ಆಹ್ವಾನ ನಿಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ವಾಹನ ಸವಾರರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇಲಿ ಹೆಗ್ಗಣ– ಹಾವುಗಳ ಪ್ರಾಣಕ್ಕೆ ಕುತ್ತು
ಸಾಮಾನ್ಯವಾಗಿ ಕಸ ಎಲ್ಲಿರುತ್ತೋ ಅಲ್ಲಿ ಇಲಿ ಹೆಗ್ಗಣಗಳು ವಾಸಮಾಡುತ್ತವೆ. ಇವುಗಳನ್ನು ಹರಸಿ ಸಹಜವಾಗಿಯೇ ಹಾವುಗಳು ಬರುತ್ತವೆ. ಕಸಕ್ಕೆ ಬೆಂಕಿ ಹಚ್ಚುವುದರಿಂದ ಇಲಿ ಹೆಗ್ಗಣ ಮತ್ತು ಹಾವುಗಳ ಪ್ರಾಣಕ್ಕೆ ಅಪಾಯ ಉಂಟಾಗುತ್ತಿದೆ. ಅಲ್ಲದೆ ಅಪರೂಪದ ಕೀಟ ಪ್ರಭೇಧಗಳು ಸಹ ಕಣ್ಮರೆಯಾಗುತ್ತಿವೆ. ಉರಗ ಸಂತತಿ ಕಣ್ಮರೆ ಮಿತಿ ಮೀರಿದ ನಗರೀಕರಣದಿಂದ ಇಂದು ಹೊರಹೋಮ್ಮುತ್ತಿರುವ ತ್ಯಾಜ್ಯದಿಂದ ಮನುಷ್ಯನಿಗೆ ಅಷ್ಟೇ ಅಲ್ಲ 30 ವರ್ಷಗಳ ಹಿಂದೆ ಇದ್ದ ನಾಗರಹಾವು ಕಟ್ಟಾವು ಕೊಳಕು ಮಂಡಲ ಉರಿಮಂಡಲದಂತಹ ಉರಗಗಳ ಸಂತತಿ ಕಣ್ಮರೆಯಾಗಿದೆ. ಅಪರೂಪದ ಕೀಟ ಮತ್ತು ವಲಸೆ ಪಕ್ಷಿಗಳನ್ನು ತಾಲ್ಲೂಕಿನಲ್ಲಿ ಇಂದು ಎಲ್ಲಿಯೂ ನೋಡಲು ಆಗುತ್ತಿಲ್ಲ. ಇದಕ್ಕೆ ಕಾರಣ ಯಾರು? ಎಂದು ಉರಗ ತಜ್ಞ ನಾಗಭೂಷಣ್ ಪ್ರಶ್ನಿಸಿದ್ದಾರೆ.
ಆರೋಗ್ಯದ ಮೇಲಿನ ದುಷ್ಪರಿಣಾಮ
ಘನತ್ಯಾಜ್ಯ ಸುಡುವುದರಿಂದ ಹೊರಬರುವ ಡಯಾಕ್ಸಿನ್ ಸೀಸ ಮತ್ತು ಕಾರ್ಬನ್ ಮೊನಾಕ್ಸೈಡ್ ಅನಿಲ ಗಾಳಿಯನ್ನು ಕಲುಷಿತಗೊಳಿಸುತ್ತವೆ. ಇದನ್ನು ಸೇವಿಸುವವಲ್ಲಿ ಆಸ್ತಮಾ ಬ್ರಾಂಕೈಟಿಸ್ ಅಂತಹ ಉಸಿರಾಟದ ತೊಂದರೆ ಹೃದಯಾಘಾತ ಮತ್ತು ಕ್ಯಾನ್ಸರ್ ಅಪಾಯ ಹೆಚ್ಚಿಸುತ್ತದೆ. ಅಲ್ಲದೆ ಮಕ್ಕಳ ಮೆದುಳಿನ ಬೆಳವಣಿಗೆ ಮತ್ತು ಹಾರ್ಮೋನ್ ಅಸಮತೋಲನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞ ವೈದ್ಯರು.
ರೇಷ್ಮೆ ಹುಳು ಸಾಕಾಣಿಕೆಗೆ ಬಳಸುವ ಹಿಪ್ಪು ನೇರಳೆ ಸೊಪ್ಪು ಮೇಲೆ ಹೊಗೆಯ ಕಿಟ್ಟ ಕುಳಿತುಕೊಳ್ಳತ್ತದೆ. ಇದೇ ಸೊಪ್ಪು ತಿಂದು ಹುಳುಗಳು ತೊಂಡೆ ಕಟ್ಟುತ್ತವೆ. ಇದರಿಂದ ಅವು ಗೂಡುಕಟ್ಟುವುದಿಲ್ಲ.ಮುನಿರಾಜು, ರೇಷ್ಮೆ ಬೆಳೆಗಾರ, ಅರೇಹಳ್ಳಿ ಗ್ರಾಮ
ಹೊಸಕೋಟೆ ತಾಲ್ಲೂಕಿನ ಯಾವುದೇ ಊರಿನಲ್ಲಿಯೂ ಕಸದ ಸಮಸ್ಯೆ ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಪಂಚಾಯಿತಿ ಮತ್ತು ಸ್ಥಳೀಯ ಆಡಳಿತದ ನಿರ್ಲಕ್ಷ್ಯವೇ ಕಾರಣ.- ನಟರಾಜ್, ಹಲಸಹಳ್ಳಿ ನಿವಾಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.