ADVERTISEMENT

ಹೊಸಕೋಟೆ: ಕೊರಳೂರು ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಗ್ರಹಣ

ಭೂಮಿ ಪೂಜೆ ‌ನಡೆದು ಆರು ತಿಂಗಳಾದರೂ ಆರಂಭವಾಗದ ನಿರ್ಮಾಣ ಕೆಲಸ

ಪ್ರಜಾವಾಣಿ ವಿಶೇಷ
Published 23 ಜುಲೈ 2024, 3:56 IST
Last Updated 23 ಜುಲೈ 2024, 3:56 IST
ಹೊಸಕೋಟೆ ತಾಲ್ಲೂಕಿನ ಕೊರಳೂರು ರೈಲ್ವೆ ಕ್ರಾಸಿಂಗ್ ವೇಳೆ ಕಾಯುತ್ತಿರುವ ವಾಹನಗಳು
ಹೊಸಕೋಟೆ ತಾಲ್ಲೂಕಿನ ಕೊರಳೂರು ರೈಲ್ವೆ ಕ್ರಾಸಿಂಗ್ ವೇಳೆ ಕಾಯುತ್ತಿರುವ ವಾಹನಗಳು   

ಹೊಸಕೋಟೆ: ಕೊರಳೂರು ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಿ‌ ಆರು ತಿಂಗಳು‌ ಕಳೆದಿದೆ. ಆದರೆ ಇದುವರೆಗೆ ಕಾಮಗಾರಿ ಆರಂಭಗೊಂಡಿಲ್ಲ.

ಚೆನ್ನೈ–ಬೆಂಗಳೂರು ರೈಲು ಮಾರ್ಗ ಕೊರಳೂರು ಬಳಿ ಹಾದು ಹೋಗುತ್ತದೆ. ಇದೇ ಟ್ರ್ಯಾಕ್‌ಗೆ ಅಡ್ಡಲಾಗಿ 207 ರಾಷ್ಟ್ರೀಯ ಹೆದ್ದಾರಿ ಹಾದು ಹೋಗುತ್ತದೆ. ಈ ರಸ್ತೆ ತಾಲ್ಲೂಕಿನ ಹಲವು ಗ್ರಾಮಗಳ ಸಂಪರ್ಕ ಕೊಂಡಿ. ತಮಿಳುನಾಡಿನ ಹೊಸೂರು ಮತ್ತು ಡಾಬಸ್‌ಪೇಟೆಗೆ ಸಂಪರ್ಕ ಕಲ್ಪಿಸುತ್ತದೆ.

ಈ ರೈಲು ಮಾರ್ಗದಲ್ಲಿ ಈ ರೈಲು ಮಾರ್ಗದಲ್ಲಿ ದಿನಕ್ಕೆ 170 ರೈಲುಗಳ ಸಂಚರಿಸುತ್ತವೆ. ಕೊರಳೂರು ರೈಲ್ವೆ ಗೇಟ್‌ ಅನ್ನು ದಿನಕ್ಕೆ 170 ಬಾರಿ ಮುಚ್ಚಿ, ‌ ತೆಗೆಯಲಾಗುತ್ತದೆ. ಇದರಿಂದ ವಾಹನ ಸವಾರರು ಕಾದು ಕಾದು ಸುಸ್ತಾಗುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಲು ರೈಲ್ವೆ ಮೇಲ್ಸೇತುವೆ ನಿರ್ಮಿಸಬೇಕೆಂಬುದು ಸ್ಥಳೀಯರ ದಶಕಗಳ ಬೇಡಿಕೆಯಾಗಿತ್ತು.

ADVERTISEMENT

ಇದಕ್ಕೆ ಸ್ಪಂದಿಸಿ ಹಾಗೂ ಸಮಸ್ಯೆ ಅರಿತ ಕೇಂದ್ರ ಮತ್ತು ರಾಜ್ಯ ಸರ್ಕಾರ ಇಲ್ಲಿ ರೈಲ್ವೆ ಮೇಲ್ಸೇತುವೆ ನಿರ್ಮಿಸಲು ₹100 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿತು.

ಕೇಂದ್ರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯಿಂದ ₹43 ಕೋಟಿ, ರಾಜ್ಯ ಲೋಕೋಪಯೋಗಿ ಇಲಾಖೆಯಿಂದ ₹36 ಕೋಟಿ ಹಾಗೂ ಸಣ್ಣ ನೀರಾವರಿ ಇಲಾಖೆಯಿಂದ ₹18 ಕೋಟಿಯನ್ನು ಕಾಮಗಾರಿ ಹೊಂದಿಸಲಾಗಿತ್ತು. ಆರು ತಿಂಗಳ ಹಿಂದೆ ಮೇಲ್ಸೇತುವೆ ನಿರ್ಮಾಣಕ್ಕೆ ಸಂಸದ ಬಿ.ಎನ್.ಬಚ್ಚೇಗೌಡ ಮತ್ತು ಶಾಸಕ ಶರತ್ ಬಚ್ಚೇಗೌಡ ಭೂಮಿ‌ ಪೂಜೆ ಸಲ್ಲಿಸಿದ್ದರು. ಇದಾದ ಬಳಿಕ ಅಲ್ಲಿ ಒಂದು ಕೆಲಸವೂ ಆಗಿಲ್ಲ. ಇದರಿಂದ ಸವಾರರು ಹೈರಾಣಾಗುತ್ತಿದ್ದಾರೆ.

ಹೊಸೂರು, ಚಿಕ್ಕತಿರುಪತಿ, ಆನೇಕಲ್ ಸೇರಿದಂತೆ ಹಲವು ಕಡೆಗಳಿಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಹೀಗಾಗಿ ಹೆಚ್ಚು ವಾಹನ ದಟ್ಟಣೆ ಇರುತ್ತದೆ. ಇಲ್ಲಿ ಕ್ಷಣ ಕ್ಷಣಕ್ಕೂ ರೈಲು ಸಂಚಾರ ಇರುವುದದರಿಂದ ಆಗ್ಗಾಗೆ ರೈಲು ಗೇಟ್‌ ಮುಚ್ಚುತ್ತದೆ. ಇದರಿಂದ ವಾಹನಗಳು ಸಾಲುಗಟ್ಟಿ ನಿಲ್ಲುತ್ತವೆ.  ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದಾರೆ.

ತಾಲ್ಲೂಕಿನಲ್ಲಿಯೇ ಅತಿ ಹೆಚ್ಚು ವೇರ್‌ಹೌಸ್, ಕಾರ್ಖಾನೆ, ಆಸ್ಪತ್ರೆ ಸೇರಿದಂತೆ ದೊಡ್ಡದೊಡ್ಡ ಸಂಸ್ಥೆಗಳಿವೆ. ಕಾರ್ಖಾನೆ ಮತ್ತು ಕಚೇರಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಇದೇ ರಸ್ತೆಯಲ್ಲಿ ಓಡಾಡುತ್ತಾರೆ.  ಕ್ರಾಂಸಿಂಗ್‌ನಿಂದ ಉದ್ಯೋಗಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ತೆರಳಲು ಅಡ್ಡಿಯಾಗಿದೆ ಎನ್ನುತ್ತಾರೆ ಸ್ಥಳೀಯರು.

ದಿನಕ್ಕೆ 170 ರೈಲು ಸಂಚಾರ: ದಿನಕ್ಕೆ 170ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತವೆ. ಅಷ್ಟುಬಾರಿ ಗೇಟ್ ಹಾಕುವುದರಿಂದ ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟವಾಗುತ್ತಿದೆ. ಒಮ್ಮೆ ಬಾರಿ ಗೇಟ್ ಹಾಕಿದರೆ ಏಕ ಕಾಲಕ್ಕೆ ಮೂರ್ನಾಲ್ಕು ರೈಲುಗಳು ಸಂಚರಿಸುವುದರಿಂದ ಅರ್ಧ ಗಂಟೆಗೂ ಹೆಚ್ಚು ಸಮಯ ವಾಹನ ಸವಾರರು ಕಾಯಬೇಕಾಗುತ್ತದೆ.  ಆಗ ಕಿಲೋಮೀಟರ್‌ಗಟ್ಟಲೆ ವಾಹನಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಲ್ಲುತ್ತವೆ. ಇದರಿಂದ ನಮಗೂ ಕಿರಿಕಿರಿ ಉಂಟಾಗುತ್ತದೆ ಎಂದು ಹೇಳಿತ್ತಾರೆ ಗ್ರಾಮಸ್ಥರು.

ಹೆಚ್ಚು ಸಮಯ ಕಾಯಬೇಕು ಎನ್ನುವ ಕಾರಣಕ್ಕೆ ಗೇಟ್‌ ಹಾಕುವ ವೇಳೆ ಕೆಲವು ಸವಾರರು ಧಾವಂತದಿಂದ ನುಗ್ಗುತ್ತಾರೆ. ಇದರಿಂದ ಹಲವು ಬಾರಿ ಅನಾಹುತಗಳು ಸಂಭವಿಸಿವೆ. ಗೇಟ್‌ ಮುಚ್ಚುವ ವಿಚಾರದಲ್ಲಿ ಸವಾರರು ಮತ್ತು ಗೇಟ್‌ಮ್ಯಾನ್‌ ನಡುವೆ ಆಗ್ಗಾಗೆ ಜಗಳ ನಡೆಯುತ್ತಲೇ ಇರುತ್ತದೆ.

ಅದಷ್ಟು ಬೇಗೆ ಮೇಲ್ಸೇತುವೆ ನಿರ್ಮಿಸಿ, ಈ ಎಲ್ಲ ಸಮಸ್ಯೆಗಳಿಗೂ ಮುಕ್ತಿ ನೀಡಬೇಕೆಂದು ವಾಹನ ಸವಾರರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.

ಕೊರುಳೂರು ರೈಲ್ವೆ ಕ್ರಾಸಿಂಗ್‌ನಿಂದ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅರ್ಧ ತಾಸಿಗೂ ಹೆಚ್ಚಿನ ಸಮಯ ಇಲ್ಲಿಯೇ ಕಳೆಯಬೇಕಿದೆ. ಸಮಯಕ್ಕೆ ಸರಿಯಾಗಿ ಹೋಗದೆ ಕೆಲವೊಮ್ಮ ವಾಪಸ್ ಬಂದಿದ್ದೇನೆ. ಶೀಘ್ರವೇ ಮೇಲ್ಸೇತುವೆ ನಿರ್ಮಿಸಿ

-ದೇವರಾಜ್, ಚಾಲಕ

ಅನುಕೊಂಡನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ರೈಲ್ವೆ ಮೇಲ್ಸೇತು ಇಲ್ಲದೆ ತಾಲ್ಲೂಕು ಅಭಿವೃದ್ಧಿಗೂ ತೊಡಕಾಗಿದೆ. ಕೆಲಸಕ್ಕೆ ಹೋಗುವ ಕಾರ್ಮಿರಕು ವಾಹನ ಸವಾರರಿಗೆ ರೈಲ್ವೆ ಕ್ರಾಂಸಿಂಗ್‌ ನರಕಯಾತನೆಯಾಗಿದೆ.

-ಲಕ್ಷ್ಮಣ್‌ಸಿಂಗ್‌ ಸಮೇತನಹಳ್ಳಿ

ರೈಲ್ವೆ ಗೇಟ್ ಹಾಕುವ ವೇಳೆ ವಾಹನಗಳು ಅಡ್ಡಾದಿಡ್ಡಿ ಸಂಚರಿಸುವುದರಿಂದ ಆಗ್ಗಾಗ್ಗೆ ಅಪಘಾತಗಳು ನಡೆಯುತ್ತಲೆ ಇರುತ್ತವೆ. ಇದಕ್ಕೆ ಮುಕ್ತಿ ಸಿಗಬೇಕಾದರೆ ಕೊರಳೂರು ರೈಲ್ವೆ ಮೇಲ್ಸೇತುವೆ ನಿರ್ಮಾಣ ಆಗಬೇಕು.

-ಶ್ರೀನಿವಾಸ್ ಕೊರಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.