ADVERTISEMENT

ಹೊಸಕೋಟೆ: ಟಿಎಪಿಸಿಎಂಎಸ್‌ಗೆ ರಾಜ್ಯದಲ್ಲಿ ಮೊದಲ ಸ್ಥಾನ

​ಪ್ರಜಾವಾಣಿ ವಾರ್ತೆ
Published 20 ಜುಲೈ 2025, 2:42 IST
Last Updated 20 ಜುಲೈ 2025, 2:42 IST
ಹೊಸಕೋಟೆಯ ಟಿಎಪಿಸಿಎಂಎಸ್ ಸಹಕಾರ ಸಂಘದ 2024-25ನೇ ಸಾಮಾನ್ಯ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು
ಹೊಸಕೋಟೆಯ ಟಿಎಪಿಸಿಎಂಎಸ್ ಸಹಕಾರ ಸಂಘದ 2024-25ನೇ ಸಾಮಾನ್ಯ ಸಭೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು   

ಹೊಸಕೋಟೆ: ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಮತ್ತು ಸಹಕಾರ ಸಂಘ ಷೇರುದಾರರು ಮತ್ತು ಹಿರಿಯ ಮಾರ್ಗದರ್ಶನದಿಂದ ಇಡೀ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿ ಇರುವ ಸಂಘ ಎನಿಸಿಕೊಂಡಿದೆ ಎಂದು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಎಂ.ಬಾಬು ರೆಡ್ಡಿ ತಿಳಿಸಿದರು.

ಅವರು ನಗರದ ಎಚ್‌ಜೆಆರ್‌ಎಸ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಘದ 2024-25ನೇ ಸಾಲಿನ 76ನೇ ಸದಸ್ಯರ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡಿದರು.

ತಾಲ್ಲೂಕಿನ ಭಕ್ತಗೊಂಡನಹಳ್ಳಿಯಲ್ಲಿ ನಾಲ್ಕು ಎಕರೆ ಜಾಗವನ್ನು ಶಾಸಕ ಶರತ್ ಬಚ್ಚೇಗೌಡ ಮಂಜೂರು ಮಾಡಿಸಿಕೊಟ್ಟಿದ್ದು, ಅದರ ಪಕ್ಕದಲ್ಲೇ ಎಪಿಎಂಸಿ ನಿರ್ಮಾಣವಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚು ಅಭಿವೃದ್ಧಿ ಹೊಂದಲಿದೆ ಎಂದರು.  

ADVERTISEMENT

ಮಾಜಿ ಸಂಸದ ಬಿ.ಎನ್.ಬಚ್ಚೇಗೌಡ ಮಾತನಾಡಿ, ಟಿಎಪಿಸಿಎಂಎಸ್ ಕಡಿಮೆ ಲಾಭಾಂಶ ಹೊಂದಿ ರೈತರಿಗೆ ಉತ್ತಮ ಸಹಕಾರ ನೀಡುತ್ತಿದೆ. ಸಹಕಾರ ಸಂಘ ಸುಭದ್ರವಾಗಿದ್ದು 4 ಸಾವಿರ ಮೆಟ್ರಿಕ್ ಟನ್ ಸಾಮರ್ಥ್ಯದ ಬೃಹತ್ ಗೋದಾಮು ಹೊಂದಿದೆ. ತಾಲ್ಲೂಕಿನಲ್ಲಿ ಒಟ್ಟು 9 ಸಹಕಾರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ ಎಂದರು.

ಟಿಎಪಿಸಿಎಎಸ್ ಪ್ರಭಾರ ಕಾರ್ಯದರ್ಶಿ ಎಂ.ಸೋಮಣ್ಣ, ಸಹಕಾರ ಸಂಘದ 2024-25ನೇ ಸಾಲಿನ ವರದಿ ಮಂಡಿಸಿ ಮಾತನಾಡಿ, ಸಹಕಾರ ಸಂಘದಲ್ಲಿ ಒಟ್ಟು 6698 ಸದಸ್ಯರನ್ನೊಳಗೊಂಡು ಒಟ್ಟು ₹52.23 ಲಕ್ಷ ಪಾಲು ಬಂಡವಾಳ ಹೊಂದಿದೆ. 2024-25ನೇ ಸಾಲಿನಲ್ಲಿ ₹5691.52 ಲಕ್ಷ ವ್ಯಾಪಾರ ವಹಿವಾಟು ನಡೆಸಿದ್ದು, ₹326.02 ಲಕ್ಷ ವ್ಯಾಪಾರ ಲಾಭ ಗಳಿಸಿದ್ದು ಒಟ್ಟು ₹133.83 ಲಕ್ಷ ನಿವ್ವಳ ಲಾಭ ಹೊಂದಿದೆ ಎಂದರು.

ಇದೇ ಸಂದರ್ಭದಲ್ಲಿ 10ನೇ ತರಗತಿ ಹಾಗೂ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಷೇರುದಾರರ 57 ಮಕ್ಕಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಕೋಡಿಹಳ್ಳಿ ಸೊಣ್ಣಪ್ಪ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ವಿ.ಸತೀಶ್‌ಗೌಡ, ಟಿಎಪಿಸಿಎಂಎಸ್ ಉಪಾಧ್ಯಕ್ಷ ಆರ್.ರವೀಂದ್ರ, ನಿರ್ದೇಶಕ ಎಚ್.ಕೆ.ರಮೇಶ್, ಕೆ.ಎಸ್.ಸುರೇಶ್, ಸಿ.ಮುನಿಯಪ್ಪ, ಸೇರಿದಂತೆ ಸಂಘದ ನಿರ್ದೇಶಕರು, ಷೇರುದಾರರು ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.