ADVERTISEMENT

ವೈದ್ಯರಿಗೆ ಮಾನವೀಯತೆಯೇ ಅಮೂಲ್ಯ: ಡಾ.ಪ್ರತಿಮಾ ಮೂರ್ತಿ

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2022, 4:32 IST
Last Updated 27 ಏಪ್ರಿಲ್ 2022, 4:32 IST
ಹೊಸಕೋಟೆಯ ಎಂವಿಜೆ ಮೆಡಿಕಲ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ವಿದ್ಯಾರ್ಥಿಗಳಿಗೆ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಪದವಿ ಪ್ರದಾನ ಮಾಡಿದರು
ಹೊಸಕೋಟೆಯ ಎಂವಿಜೆ ಮೆಡಿಕಲ್ ಮತ್ತು ರಿಸರ್ಚ್ ಸೆಂಟರ್‌ನಲ್ಲಿ ವಿದ್ಯಾರ್ಥಿಗಳಿಗೆ ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಪದವಿ ಪ್ರದಾನ ಮಾಡಿದರು   

ಹೊಸಕೋಟೆ: ‘ವೃತ್ತಿ ಜೀವನದಲ್ಲಿ ಸಾಧನೆಯ ನಂತರವೂ ವೈದ್ಯಕೀಯ ವಿದ್ಯಾರ್ಥಿಗಳು ಮಾನವೀಯತೆಯನ್ನು ಮರೆಯಬಾರದು’ ಎಂದು ನಿಮ್ಹಾನ್ಸ್ ನಿರ್ದೇಶಕಿ ಡಾ.ಪ್ರತಿಮಾ ಮೂರ್ತಿ ಕಿವಿಮಾತು ಹೇಳಿದರು.

ನಗರದ ಎಂವಿಜೆ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದಲ್ಲಿ ನಡೆದ 13ನೇ ವರ್ಷದ ವೈದ್ಯಕೀಯ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿಕ್ಷಣ ಕೇತ್ರದಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಬೋಧನೆ ಮಾಡಬೇಕಿದೆ. ಅವರ ಮನಸ್ಸಿಗೆ ನಾಟುವಂತೆ ಬೋಧನೆ ಮಾಡಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಜವಾಬ್ದಾರಿ ಪ್ರಾಧ್ಯಾಪಕರ ಮೇಲಿದೆ ಎಂದು ಸಲಹೆ ನೀಡಿದರು.

ADVERTISEMENT

ಮನುಷ್ಯರ ಜೀವ ರಕ್ಷಿಸುವ ವೈದ್ಯಕೀಯ ವೃತ್ತಿಯಲ್ಲಿ ಪ್ರಾಧ್ಯಾಪಕರ ಪಾತ್ರ ಇನ್ನೂ ಹೆಚ್ಚಿರುತ್ತದೆ. ವೈದ್ಯಕೀಯ ವೃತ್ತಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಕೇವಲ ವೈದ್ಯರಾಗಿ ರೋಗಿಗಳಿಗೆ ಔಷಧಿಯಿಂದ ರೋಗ ಗುಣಪಡಿಸದೆ ಅವರಿಗೆ ಮಾನಸಿಕ ಧೈರ್ಯ, ಆತ್ಮವಿಶ್ವಾಸ ತುಂಬಬೇಕಿದೆ ಎಂದು ಹೇಳಿದರು.

ವೈದ್ಯಕೀಯ ಶಿಕ್ಷಣದ ಜೊತೆಗೆ ಹೊಸ ತಂತ್ರಜ್ಞಾನ, ಆವಿಷ್ಕಾರಗಳನ್ನು ವೃತ್ತಿ ಜೀವನದಲ್ಲಿ ಕಾಲಕಾಲಕ್ಕೆ ಅಳವಡಿಸಿಕೊಳ್ಳಬೇಕು. ಕೇವಲ ರೋಗ ಗುಣಪಡಿಸುವುದರ ಜೊತೆಗೆ ರೋಗ ಬಾರದಂತೆ ಸಾರ್ವಜನಿಕರಿಗೆ ಮುಂಜಾಗ್ರತೆಯಾಗಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕಿದೆ ಎಂದರು.

ಮಜುಂದಾರ್ ಮೆಡಿಕಲ್ ಸೆಂಟರ್ ಮುಖ್ಯಸ್ಥ ಡಾ.ಮುರಳಿ ಮೋಹನ್ ಮಾತನಾಡಿ, ವೈದ್ಯಕೀಯ ವಿದ್ಯಾರ್ಥಿಗಳು ಮೊದಲಿಗೆ ವೃತ್ತಿ ಗೌರವ ಕಾಪಾಡಿಕೊಳ್ಳಬೇಕು. ಕೇವಲ ಹಣಗಳಿಸುವ ವೃತ್ತಿಯೆಂದು ತಿಳಿಯದೆ ಜೀವ ಉಳಿಸಿ ಜನರ ಮನ್ನಣೆಗಳಿಸಿದರೆ ಮಾತ್ರ ವೃತ್ತಿ ಬದುಕಿನಲ್ಲಿ ದೊಡ್ಡ ಸಾಧನೆ ಮಾಡಲು ಸಾಧ್ಯ ಎಂದು ಕಿವಿಮಾತು ಹೇಳಿದರು.

ಎಂವಿಜೆ ಕಾಲೇಜಿನ ಮುಖ್ಯಸ್ಥ ಡಾ.ಎಂ.ಜೆ. ಮೋಹನ್ ಮಾತನಾಡಿ, ವೈದ್ಯಕೀಯ ವೃತ್ತಿಯಲ್ಲಿ ಜೀವನ ಶುರು ಮಾಡಿದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸುಗಳಿಸಿ ಎಲ್ಲಾ ರಂಗದಲ್ಲೂ ವೈದ್ಯಕೀಯ ಸೇವೆ ಸಲ್ಲಿಸಬಹುದಾಗಿದೆ. ದೇಶಕ್ಕೆ ಉತ್ತಮ ಹೆಸರು ತರುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು.

ಕಾಲೇಜಿನ ಸಿಇಒ ಡಾ.ಧರಣಿ ಮೋಹನ್, ಪ್ರಾಂಶುಪಾಲ ರವಿಚಂದರ್, ಆಡಳಿತ ಮಂಡಳಿ ಮುಖ್ಯಸ್ಥ ಡಾ.ಪ್ರಮೋದ್, ಅಂಜನ್ ರೆಡ್ಡಿ, ಅಶ್ವಿನ್ ಮೋಹನ್, ದಯಾನಂದ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.