
ದೇವನಹಳ್ಳಿ: ‘ಗಣಿಗಾರಿಕೆಯಿಂದ ರೇಷ್ಮೆ ಬೆಳೆ ಬೆಳೆಯೋಕೆ ಆಗ್ತಿಲ್ಲ ಸಾರ್. ಗಣಿ ಧೂಳಿಂದ ಉಸಿರಾಡೋದೇ ಕಷ್ಟ. ರಾತ್ರಿ ಮನೆಯಲ್ಲಿ ನೆಮ್ಮದಿಯಾಗಿ ಮಲಗೋಕೂ ಆಗ್ತಿಲ್ಲ. ಗಣಿ ಧೂಳಲ್ಲಿ ಬೆಳೆ ಮಾತ್ರವಲ್ಲ, ಬದುಕೂ ನಾಶವಾಗ್ತಿದೆ...’
ಹಿಂಗೇಂದು ರೈತರು ಹೀಗೆ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಎದುರು ಕಣ್ಣೀರು ಹಾಕಿದರು.
ರೈತರ ಅಹವಾಲು ಆಲಿಸಲು ಜಿಲ್ಲಾಧಿಕಾರಿ ಬುಧವಾರ ಕರೆದಿದ್ದ ಸಭೆಯಲ್ಲಿ ರೈತರು ಸಮಸ್ಯೆಗಳ ಸರೆಮಾಲೆಯನ್ನು ಬಿಚ್ಚಿಟ್ಟರು. ಗಣಿಗಾರಿಕೆಯಿಂದ ಕೃಷಿ ಮೇಲೆ ಆಗುತ್ತಿರುವ ದುಷ್ಪರಿಣಾಮ ಕುರಿತು ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದನೆ ದೊರೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಡಿಸಿದರು.
ಅಕ್ರಮ ಗಣಿಗಾರಿಕೆಯ ವಿಷಯ ಪ್ರಸ್ತಾಪಿಸುತ್ತಿದ್ದಂತೆ ವಾತಾವರಣವೇ ಗಂಭೀರವಾಯಿತು. ಕೊಯಿರಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೈಲಗೆರೆಯಲ್ಲಿ ನಿಯಮ ಮೀರಿ ಸುಮಾರು 350 ಅಡಿ ಆಳಕ್ಕೆ ಗಣಿಗಾರಿಕೆ ನಡೆಸುತ್ತಿರುವುದನ್ನು ರೈತರು ವಿವರಿಸಿದರು.
‘ಬಿತ್ತಿದ ಬೆಳೆ ಉಳಿಯುತ್ತಾ, ಮನೆ ಉಳಿಯುತ್ತಾ ಅನ್ನೋ ಆತಂಕದಲ್ಲೇ ನಾವು ಬದುಕ್ತಿದ್ದೀವಿ ಸಾರ್’ ಈ ಮಾತುಗಳೊಂದಿಗೆ ರೈತರ ಕಂಠಗಳು ಭಾರವಾದವು. ಜಿಲ್ಲಾಡಳಿತ ಆಯೋಜಿಸಿದ್ದ ರೈತರ ಕುಂದುಕೊರತೆಗಳ ಸಭೆ, ಕೇವಲ ಅರ್ಜಿಗಳ ಸ್ವೀಕಾರಕ್ಕೆ ಸೀಮಿತವಾಗದೇ, ರೈತರ ಬದುಕಿನ ಸಂಕಷ್ಟಗಳಿಗೆ ಸಾಕ್ಷಿಯಾಗಿ ಪರಿಣಮಿಸಿತು.
ಜಿಲ್ಲೆಯ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ ರೈತರು, ಕೈಯಲ್ಲಿ ಅರ್ಜಿಗಳ ಗುಚ್ಛ ಹಿಡಿದು, ಮನಸ್ಸಿನಲ್ಲಿ ನೋವಿನ ಹೊರೆ ಹೊತ್ತು ಸಭಾಂಗಣದಲ್ಲಿ ಕೂತಿದ್ದರು.
ಫವತಿ ಖಾತೆ, ಪೋಡಿ ದುರಸ್ತಿ, ಪಹಣಿ ಹೆಸರು ಬದಲಾವಣೆ, ಜಮೀನಿಗೆ ರಸ್ತೆ ಇಲ್ಲದ ಸಂಕಷ್ಟ, ಸ್ಮಶಾನ ಜಾಗದ ಒತ್ತುವರಿ, ಸರ್ಕಾರಿ ಜಾಗಗಳ ಅತಿಕ್ರಮಣ ಇವೆಲ್ಲ ಕಾಗದದ ಸಮಸ್ಯೆಗಳಂತೆ ಕಂಡರೂ, ರೈತರ ಬದುಕಿಗೆ ಅವು ಜೀವ–ಮರಣದ ಪ್ರಶ್ನೆಗಳಾಗಿದ್ದವು.
ಸಭೆ ಮುಗಿದಾಗಲೂ ರೈತರ ಮುಖಗಳಲ್ಲಿ ಸಂಪೂರ್ಣ ನೆಮ್ಮದಿ ಕಾಣಿಸಲಿಲ್ಲ. ಆದರೆ, ‘ಇಂದು ನಮ್ಮ ದನಿ ಅವರಿಗೆ ಕೇಳಿಸಿದೆ’ ಎಂಬ ಸ್ವಲ್ಪ ನಂಬಿಕೆ ಮಾತ್ರ ಅವರ ಹೆಜ್ಜೆಗಳಲ್ಲಿ ಉಳಿದಿತ್ತು.
ಸಭೆಯಲ್ಲಿ ಜಿ.ಪಂ ಸಿಇಒ ಡಾ.ಕೆ.ಎನ್ ಅನುರಾಧ, ಜಿಲ್ಲಾ ಪೋಲಿಸ್ ವರಿಷ್ಠಧಿಕಾರಿ ಎಂ.ವಿ. ಚಂದ್ರಕಾಂತ್, ಎಎಸ್‌ಪಿ ನಾಗರಾಜ್, ಡಿವೈಎಸ್ಪಿ ಪಾಂಡುರಂಗ, ಜಿಲ್ಲಾ ಮಟ್ಟದ ಅಧಿಕಾರಿಗಳು, ರೈತ ಸಂಘನೆಗಳ ಅಧ್ಯಕ್ಷರು, ಸದಸ್ಯರು, ಮುಖಂಡರು ಉಪಸ್ಥಿತರಿದ್ದರು.
ಟಿಸಿ ಕೆಡಿದ್ರೆ ಬೆಳೆ ಕೈ ತಪ್ಪುತ್ತೆ: ‘ವಿದ್ಯುತ್ ಸಮಸ್ಯೆಯೂ ರೈತರ ಬೇಸರಕ್ಕೆ ಕಾರಣವಾಯಿತು. ಕೃಷಿ ಜಮೀನಿನ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪರಿವರ್ತಕ (ಟಿಸಿ) ಕೆಡಿದರೆ ದಿನಗಟ್ಟಲೆ ಕಾಯಬೇಕಾದ ಸ್ಥಿತಿ ಇದೆ. ಒಂದು ದಿನ ನೀರು ಸಿಗದ್ರೆ ಬೆಳೆ ಹಾಳಾಗುತ್ತೆ. ದಿನದ ಬೆಳಕಿನಲ್ಲಿ ಕರೆಂಟ್ ಕೊಟ್ಟರೆ ನಾವು ಕೆಲಸ ಮಾಡ್ಕೊಳ್ತೀವಿ’ ಎಂದು ರೈತರು ಮನವಿ ಮಾಡಿದರು.
ಕೃಷಿ ವಲಯ ಆತಂಕ ಬೇಡ: ರೈತರ ಮಾತು ಆಲಿಸಿದ ಜಿಲ್ಲಾಧಿಕಾರಿ ಎ.ಬಿ. ಬಸವರಾಜು, ಜಿಲ್ಲೆಯಲ್ಲಿ ಹಿಂದೆ ಸುಮಾರು 1.25 ಲಕ್ಷ ಹೆಕ್ಟೇರ್ ಇದ್ದ ಕೃಷಿ ವಲಯ ಇಂದು 65 ಸಾವಿರ ಹೆಕ್ಟೇರ್‌ಗೆ ಇಳಿಕೆಯಾಗಿರುವುದು ಆತಂಕಕಾರಿ ವಿಷಯ. ಚನ್ನರಾಯಪಟ್ಟಣ ಕೃಷಿ ವಲಯ ಕುರಿತು ಆತಂಕ ಬೇಡ. ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯೆ
*ಕಾನೂನು ವ್ಯಾಪ್ತಿಗೆ ಬಾರದ ಅರ್ಜಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಹವಾಲುಗಳಿಗೆ ಮೂರು ತಿಂಗಳೊಳಗೆ ತ್ವರಿತ ಪರಿಹಾರ
*ಕಾಡು ಪ್ರಾಣಿಗಳ ಹಾವಳಿ ಹೆಚ್ಚಿರುವ ಕುರಿತು ಅರಣ್ಯ ಇಲಾಖೆಯೊಂದಿಗೆ ಚರ್ಚಿಸಿ ವರದಿ ಸರ್ಕಾರಕ್ಕೆ ಕಳುಹಿಸಲಾಗುವುದು.
*ಸರ್ಕಾರಿ ಜಾಗ, ಕೆರೆ, ರಾಜಕಾಲುವೆ, ಸ್ಮಶಾನ ಮತ್ತು ರಸ್ತೆ ಒತ್ತುವರಿ ಸಂಬಂಧ ದಾಖಲೆ ನೀಡಿದರೆ ಪರಿಶೀಲನೆ ನಡೆಸಲಾಗುವುದು
*ರಾಗಿ ನೋಂದಣಿಗೆ ಇನ್ನೂ 2,500 ರೈತರು ಬಾಕಿ ಉಳಿದಿದ್ದು, ಈ ಕುರಿತು ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚೆಯಾಗಿದೆ. ರಾಜ್ಯ ಮಟ್ಟದಲ್ಲಿ ತೀರ್ಮಾನವಾಗಲಿದೆ
ಮದ್ಯ ಮಾರಾಟ; ಕುಟುಂಬ ನೆಮ್ಮದಿಗೆ ಬೆಂಕಿ
ಗ್ರಾಮೀಣ ಭಾಗಗಳಲ್ಲಿ ಅಕ್ರಮವಾಗಿ ನಡೆಯುತ್ತಿರುವ ಮದ್ಯ ಮಾರಾಟದ ವಿರುದ್ಧ ಸಭೆಯಲ್ಲಿ ಆಕ್ರೋಶ ವ್ಯಕ್ತವಾಯಿತು. ‘ಕುಡಿತದಿಂದ ಮನೆಗಳು ಒಡೆದಿವೆ. ಮಹಿಳೆಯರಿಗೆ ನೆಮ್ಮದಿ ಇಲ್ಲ. ಮಕ್ಕಳು ಭಯದಲ್ಲಿ ಬೆಳೆದ್ತಿದ್ದಾರೆ’ ಎಂದು ರೈತರು ಒಕ್ಕೊರಲಿನಿಂದ ಅಕ್ರಮ ಮದ್ಯ ಮಾರಾಟ ನಿಷೇಧಿಸುವಂತೆ ಒತ್ತಾಯಿಸಿದರು. ಪ್ರವಾಸೋದ್ಯಮದ ಹೆಸರಿನಲ್ಲಿ ಸಿಎಲ್-7 ಬಾರ್‌ಗಳನ್ನು ಎಗ್ಗಿಲ್ಲದೇ ನೀಡುತ್ತಿದ್ದಾರೆ ಇದಕ್ಕೆ ಮಿತಿ ಹೇರಬೇಕು ಎಂದ ಆಗ್ರಹಿಸಲಾಯಿತು.
ಯೋಜನೆಗಳಿವೆ ಆದರೆ ಫಲಾನುಭವಿಗಳು ನಾವಲ್ಲ
ಕೃಷಿ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳ ಸರ್ಕಾರಿ ಯೋಜನೆಗಳ ಕುರಿತು ರೈತರು ಅಸಮಾಧಾನ ವ್ಯಕ್ತಪಡಿಸಿದರು. ‘ಯೋಜನೆಗಳ ಹೆಸರು ಗೊತ್ತು ಆದರೆ ಫಲಾನುಭವಿಗಳ ಪಟ್ಟಿಯಲ್ಲಿ ನಮ್ಮ ಹೆಸರು ಬರೋದೇ ಇಲ್ಲ’ ಎಂಬ ರೈತರ ನೋವು ಸಭೆಯಲ್ಲಿ ಪುನಃ ಪುನಃ ಕೇಳಿಬಂತು. ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ದೇವನಹಳ್ಳಿ ಪುರಸಭೆಯ ಅಕ್ರಮಗಳನ್ನು ಬಯಲು ಮಾಡಿದರು. ದೇವನಹಳ್ಳಿ ವಿಶ್ವ ಮಟ್ಟದಲ್ಲಿ ಹೆಸರು ಮಾಡಿರುವ ಪಟ್ಟಣವಾಗಿದ್ದು ಮುಖ್ಯರಸ್ತೆಯಲ್ಲಿರುವ ಅಕ್ರಮ ಫ್ಲಾಕ್ಸ್‌ಗಳು ಬ್ಯಾನರ್‌ಗಳನ್ನು ಹಾಕುವುನ್ನು ನಿಷೇಧ ಮಾಡಬೇಕು. ಕಸವನ್ನು ಸೂಕ್ತವಾಗಿ ವಿಲೆವಾರಿ ಮಾಡಲು ಸೂಚಿಸಬೇಕು. ಪ್ಲಾಸ್ಟಿಕ್ ಬಳಕೆ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.