ದೇವನಹಳ್ಳಿ: ರಾಜ್ಯದ ಐದು ಪ್ರಮುಖ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ (ಐಟಿ) ಸೇವೆ ಒದಗಿಸುತ್ತಿರುವ ಕಂಪನಿಗಳಿಗೆ ಸುಸಜ್ಜಿತ ವಿಶ್ವದರ್ಜೆ ಮೂಲ ಸೌಕರ್ಯ ಹೊಂದಿರುವ ಕಚೇರಿ ಸ್ಥಳಾವಕಾಶ ಅಭಿವೃದ್ಧಿಪಡಿಸಲು ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಯೋಜನೆ ರೂಪಿಸಿದೆ.
ಈಗಾಗಲೇ ದೇವನಹಳ್ಳಿ ವಿಮಾನ ನಿಲ್ದಾಣ ಬಳಿ ಡಿಫೆನ್ಸ್ ಏರೋ ಸ್ಪೇಸ್ ಪಾರ್ಕ್‌ನಲ್ಲಿ ಕಿಯೋನಿಕ್ಸ್ ಸಂಸ್ಥೆಗೆ 12 ಎಕರೆ ಭೂಮಿಯನ್ನು ಸರ್ಕಾರ 99 ವರ್ಷಗಳ ಗುತ್ತಿಗೆಗೆ ನೀಡಿದ್ದು, ಇಲ್ಲಿ ವಾಣಿಜ್ಯ ಉದ್ದೇಶಕ್ಕಾಗಿ ಐಟಿ ಪಾರ್ಕ್ ನಿರ್ಮಾಣಕ್ಕೆ ಕಿಯೋನಿಕ್ಸ್ ಮುಂದಾಗಿದೆ.
ಬೆಂಗಳೂರು ಮಹಾನಗರಕ್ಕೆ ಹೊಂದಿಕೊಂಡಿರುವ ದೇವನಹಳ್ಳಿ ಹೊರತಾಗಿ ಅಭಿವೃದ್ಧಿ ವಿಕೇಂದ್ರಿಕರಣ ಸಲುವಾಗಿ ಮೈಸೂರು, ಕಲ್ಬುರ್ಗಿ, ಹುಬ್ಬಳ್ಳಿ, ಮಂಗಳೂರು ನಗರಗಳಲ್ಲಿಯೂ ಕಿಯೋನಿಕ್ಸ್ ವಿಶ್ವದರ್ಜೆ ಮೂಲ ಸೌಕರ್ಯ ಹೊಂದಿರುವ ಕಚೇರಿ ಸ್ಥಳಾವಕಾಶ ನಿರ್ಮಿಸಿ ಐಟಿ ಕಂಪನಿಗಳಿಗೆ ನೀಡುವ ಉದ್ದೇಶ ಹೊಂದಿದೆ.
ದೇವನಹಳ್ಳಿ ಏರೋ ಸ್ಪೇಸ್ ಪಾರ್ಕ್‌ನಲ್ಲಿ ನಿರ್ಮಾಣವಾಗುವ ಐಟಿ ಪಾರ್ಕ್‌ನಂತೆಯೇ ಮೈಸೂರಿನ ಹೆಬ್ಬಾಳ ಕೈಗಾರಿಕಾ ವಲಯ, ಹುಬ್ಬಳ್ಳಿ ವಿಮಾನ ನಿಲ್ದಾಣ ಸಮೀಪದ ಗೋಕುಲ ರಸ್ತೆ, ಮಂಗಳೂರಿನ ಯೆಯ್ಯಾಡಿ, ಕಲ್ಬುರ್ಗಿ ಹೊರವಲಯದಲ್ಲಿ ಐಟಿ ಪಾರ್ಕ್ ನಿರ್ಮಾಣವಾಗಿದೆ.
ಇದರಿಂಗಾಗಿ ಮಹಾನಗರದ ಹೊರತಾಗಿಯೂ, ಟೈರ್ 2 ಮತ್ತು ಟೈರ್ 3 ನಂತರ ಅಭಿವೃದ್ಧಿ ಹೊಂದುತ್ತಿರುವ ನಗರಗಳ ಬೆಳವಣಿಗೆ ಸೇರಿದಂತೆ ಅಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ಕೌಶಲ್ಯಧಾರತ ಉದ್ಯೋಗ ಸೃಷ್ಟಿಯೂ ಸಾಧ್ಯವಾಗಲಿದೆ ಎಂದು ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ತಿಳಿಸಿದ್ದಾರೆ.
ಭಾರತೀಯ ಮಾಹಿತಿ ತಂತ್ರಜ್ಞಾನ ಪಾರ್ಕ್ (ಎಸ್‌ಟಿಪಿಐ) ಈಗಾಗಲೇ ಸಣ್ಣ ಸಣ್ಣ ನಗರಗಳಲ್ಲಿಯೂ ಐಟಿ ಪಾರ್ಕ್‌ಗಳ ಸ್ಥಾಪನೆಗೆ ಮುಂದಾಗಿದೆ. ಇದರೊಂದಿಗೆ ಕಿಯೋನಿಕ್ಸ್ ಬಳಿ ಇರುವ ಜಾಗವನ್ನು ಐಟಿ ಉದ್ಯಮಕ್ಕೆ ಅನುಕೂಲವಾಗುವಂತೆ ಬದಲಾಯಿಸುವ ಇನ್ನಷ್ಟು ಐಟಿ ಸೇವೆಯನ್ನು ವಿಶ್ವಕ್ಕೆ ರಾಜ್ಯದಿಂದ ರಫ್ತು ಮಾಡಲು ಉತ್ತೇಜನ ನೀಡಲು ಸಂಸ್ಥೆ ಚಿಂತಿಸಿದೆ ಎಂದು ಮಾಹಿತಿ ನೀಡಿದರು.
ಈ ಐಟಿ ಪಾರ್ಕ್‌ಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಣ್ಣ ಜಾಗತೀಕ ಕೇಂದ್ರಗಳಾಗಿ ಬದಲಾಗಲಿದೆ. ಸಾರ್ವನಿಕ - ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲಾಗಲಿದೆ. ಗುಣಮಟ್ಟದ ಕಚೇರಿಗಳನ್ನು ಐಟಿ ಕಂಪನಿಗಳಿಗೆ ನೀಡಲಾಗುತ್ತದೆ. ಇದರಿಂದ ಸರ್ಕಾರ ಖಾಸಗಿ ಕಂಪನಿಗಳ ಬೆಳವಣಿಗೆಗೆ ಸಹಕರಿಸಿ ರಾಜ್ಯದ ಅಭಿವೃದ್ಧಿಗೆ ಐಟಿ ಕ್ಷೇತ್ರದ ಕೊಡುಗೆ ಹೆಚ್ಚಿಸಲು ಕಾರಣವಾಗಲಿದೆ.
ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿನ ಐಟಿ ವಹಿವಾಟು ಹೆಚ್ಚಿಸಿ ಸ್ಥಳೀಯರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಕಿಯೋನಿಕ್ಸ್ ಬಳಿ ಇರುವ ಜಾಗದಲ್ಲಿ ಐಟಿ ಪಾರ್ಕ್ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆಶರತ್ ಬಚ್ಚೇಗೌಡ ಕಿಯೋನಿಕ್ಸ್ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.