ADVERTISEMENT

ಬೀದಿಗೆ ಬಂದ ಜೆಡಿಎಸ್ ಒಳ ಜಗಳ:ದೊಡ್ಡಬಳ್ಳಾಪುರ ಅರಳಿಕಟ್ಟೆಯಲ್ಲಿ ಮುಖಂಡರ ವಾಕ್ ಸಮರ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 4:57 IST
Last Updated 10 ಜನವರಿ 2026, 4:57 IST
ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಆಂಜನೇಯಸ್ವಾಮಿ ದೇವಾಲಯ ಅರಳಿಕಟ್ಟೆಯಲ್ಲಿ ಶುಕ್ರವಾರ ಜೆಡಿಎಸ್‌ ಮುಖಂಡರು ವಾಕ್‌ಸಮರ ನಡೆಸಿದರು
ದೊಡ್ಡಬಳ್ಳಾಪುರ ತಾಲ್ಲೂಕಿನ ರಾಜಘಟ್ಟ ಆಂಜನೇಯಸ್ವಾಮಿ ದೇವಾಲಯ ಅರಳಿಕಟ್ಟೆಯಲ್ಲಿ ಶುಕ್ರವಾರ ಜೆಡಿಎಸ್‌ ಮುಖಂಡರು ವಾಕ್‌ಸಮರ ನಡೆಸಿದರು   

ದೊಡ್ಡಬಳ್ಳಾಪುರ: ಜೆಡಿಎಸ್‌ ಮುಖಂಡರ ಒಳಜಗಳ ರಾಜಘಟ್ಟ ಆಂಜನೇಯಸ್ವಾಮಿ ದೇವಾಲಯ ಅರಳಿಕಟ್ಟೆಯಲ್ಲಿ ಶುಕ್ರವಾರ ಬೀದಿಗೆ ಬಂದಿದೆ.

ತಾಲ್ಲೂಕಿನಲ್ಲಿ ಯಾವುದೇ ರಾಜಕೀಯ ಪಕ್ಷಗಳು ಚುನಾವಣಾ ಪ್ರಚಾರ, ನಾಮಪತ್ರ ಸಲ್ಲಿಕೆಗೂ ಮುನ್ನ ರಾಜಘಟ್ಟದ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆಸಲ್ಲಿಸುವ ಮೂಲಕ ಆರಂಭಿಸಲಾಗುತ್ತದೆ. ಅದೇ ರೀತಿ ಶುಕ್ರವಾರ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಅವರು ದೇವಾಯದಲ್ಲಿ ಪೂಜೆ ಸಲ್ಲಿಸಿ ಬೂತ್‌ ಮಟ್ಟದ ಸದಸ್ಯರ ನೋಂದಣಿ ಆರಂಭಿಸಿದರು.

ಜ.10 ರಂದು ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಕಾರ್ಯಕರ್ತರ ಸಭೆಯ ಕುರಿತು ಹಾಡೋನಹಳ್ಳಿ ನಾಗರಾಜ್ ಅವರು ಮಾತನಾಡಲು ಮುಂದಾಗುತ್ತಿದ್ದಂತೆ ಹುಸ್ಕೂರು ಆನಂದ್ ಅವರು ‘ಈ ದಿನದ ಬೂತ್ ಕಮಿಟಿ ಸದಸ್ಯರ ನೋಂದಣಿಯ ಕುರಿತು ಮಾತ್ರ ಮಾತನಾಡಬೇಕು’ ಎಂದು ಹೇಳುತ್ತಿದ್ದಂತೆ ‘ನಾಗರಾಜ್ ಅವರಿಗೆ ಮಾತನಾಡಲು ಮೈಕ್ ನೀಡಬೇಕು’ ಎಂದು ಹರೀಶ್‌ ಗೌಡ ಅವರು ಜೋರು ಧ್ವನಿಯಲ್ಲಿ ಮಾತನಾಡಲು ಆರಂಭಿಸಿದರು.

ADVERTISEMENT

ಈ ವಾಗ್ವಾದ ತಾರಕಕ್ಕೆ ಹೋಯಿತು. ವಾಕ್‌ ಸಮರ ಕೈ ಮೀರುತ್ತಿರುವದನ್ನು ಅರಿತ ಮುನೇಗೌಡ ಅವರು ಇಬ್ಬರನ್ನು ಸಮಾಧಾನಪಡಿಸುವ ಮೂಲಕ ಪಕ್ಷದ ಹಿತದೃಷ್ಠಿಯಿಂದ ಬೀದಿ ಜಗಳ ಬಿಟ್ಟು ಎಲ್ಲರು ಒಂದಾಗಿ ಮುನ್ನಡೆಯಬೇಕಿದೆ ಎಂದು ಸಮಾಧಾನಪಡಿಸಿದರು.

ಅರಳಿಕಟ್ಟೆಯಲ್ಲಿ ಮುಖಂಡರು ವಾಕ್ಸಸಮರ ನಡೆಸುತ್ತಿದ್ದ ಅರಳಿಕಟ್ಟೆಯ ಮುಂದೆ ನಿಂತಿದ್ದ ಕಾರ್ಯಕರು ‘ಪಕ್ಷದಲ್ಲಿನ ಮುಖಂಡರ ಕಿತ್ತಾಟವು ನಾಚಿಕೆಗೇಡಿನ ಸಂಗತಿ. ಇದೇ ರೀತಿ ಮುಂದುವರೆದರೆ ಯಾರೊಬ್ಬರು ಪಕ್ಷದಲ್ಲಿ ಉಳಿಯುವುದಿಲ್ಲ. ನಿಮ್ಮ ಸ್ವಪ್ರತಿಷ್ಠೆಗಳನ್ನು ಬದಿಗಟ್ಟು ಬನ್ನಿ, ಇಲ್ಲವೆ ಮನೆಯಲ್ಲಿ ಇದ್ದುಬಿಡಿ’ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ದೇವಾಲಯದಲ್ಲಿ ನಡೆದ ಪೂಜೆಯಲ್ಲಿ  ‘ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಜಯವಾಗಲಿ’ ಎಂದು ದೇವರ ಮುಂದೆ ಚೀಟಿ ಬರೆದಿಟ್ಟು ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ದೇವರು ಬಲಗಡೆ ಹೂವು ಕೊಟ್ಟಿದ್ದರಿಂದ ಪೂಜೆಯಲ್ಲಿ ಭಾಗವಹಿಸಿದ್ದವರು ಸಂತಸಗೊಂಡರು.

ಪಕ್ಷ ಸಂಘಟನೆ ಒಗ್ಗಟ್ಟಿಗೆ ಆದ್ಯತೆ

ಬೂತ್‌ ಮಟ್ಟದಿಂದ ಸದಸ್ಯತ್ವ ನೋಂದಣಿ ಬೂತ್‌ ಕಮಿಟಿಯನ್ನು ರಚಿಸುವ ಮೂಲಕ ಪಕ್ಷ ಸಂಘಟನೆಗೆ ಸಜ್ಜಾಗುವಂತೆ ಜೆಡಿಎಸ್‌ ವರಿಷ್ಠರು ಹಾಗೂ ಯುವ ಘಟಕದ ಅಧ್ಯಕ್ಷ ನಿಖಿಲ್‌ಕುಮಾಸ್ವಾಮಿ ಅವರ ಸೂಚನೆಯಂತೆ ಸ್ಥಳೀಯ ಸಂಸ್ಥೆಗಳ ಚುಣಾವಣೆಗಳು ಸಮೀಪಸುತ್ತಿರುವ ಹಿನ್ನೆಲೆಯಲ್ಲಿ ಪಕ್ಷ ಸಂಘಟೆನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಹೇಳಿದ ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರು ಇದ್ದಾರೆ. ಇವರನ್ನು ಒಗ್ಗೂಡಿಸುವ ಕೆಲಸ ಮಾಡಬೇಕು. ಜ.10 ರಂದು ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ನಡೆಯಲಿರುವ ಸಭೆಯಲ್ಲಿ ಎಲ್ಲರೂ ಒಟ್ಟಾಗಿ ಭಾಗವಹಿಸಬೇಕೆಂದು ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.