
ಜಿಗಣಿ(ಆನೇಕಲ್): ಇಲ್ಲಿಗೆ ಸಮೀಪದ ಹಾರಗದ್ದೆಯ ಸ್ಟ್ರೈಡ್ಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿವಾನಿ ಕೇರ್ಸ್ ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ವಿಜ್ಞಾನ ಮೇಳ ನಡೆಯಿತು.
ವಿಜ್ಞಾನ ಮೇಳದಲ್ಲಿ 25ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ತಮ್ಮ ವಿಜ್ಞಾನ ಮಾದರಿಗಳನ್ನು ಪ್ರದರ್ಶಿಸಿದರು. ಅರಣ್ಯನಾಶದಿಂದಾಗುವ ಸಮಸ್ಯೆ, ಗ್ರಹಣ, ರೇಬೋಟ್, ಭೂಕಂಪದ ಸೂಚನೆ, ಸ್ಮಾರ್ಟ್ ಪಾರ್ಕಿಂಗ್, ಮಾನವ ದೇಹದ ಅಂಗಗಳು, ಹೃದಯದ ಕಾರ್ಯ ವಿಧಾನ, ಕಾರ್ಯಗಳು, ಸೋಲಾರ್ ಬಳಕೆ, ಸಮುದ್ರದ ಉಪ್ಪು ನೀರಿನಿಂದ ವಿದ್ಯುತ್ ಉತ್ಪಾದನೆ, ಆಧುನಿಕ ಸ್ವಚ್ಛತಾ ವಿಧಾನ ಸೇರಿದಂತೆ ವಿವಿಧ ವಿಜ್ಞಾನ ಮಾದರಿಗಳು ನೋಡುಗರ ಗಮನ ಸೆಳೆಯಿತು.
ಸಮುದ್ರದ ಉಪ್ಪು ನೀರಿನಿಂದ ವಿದ್ಯುತ್ ಉತ್ಪಾದನೆಯ ಮಾದರಿಯನ್ನು ಹೆಚ್ಚು ಮಂದಿ ಉತ್ಸಾಹದಿಂದ ವೀಕ್ಷಿಸಿದರು. ಉಪ್ಪು ನೀರು, ಅಲೆಗಳ ಮಾದರಿ ವಿದ್ಯಾರ್ಥಿಗಳ ಗಮನ ಸೆಳೆಯಿತು.
ಮೇಳ ಉದ್ಘಾಟಿಸಿದ ಇಸ್ರೊ ನಿವೃತ್ತ ನಿರ್ದೇಶಕ ಎಸ್.ರಂಗರಾಜನ್, ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ ಹೊರಬರಲು ವಿಜ್ಞಾನ ಮೇಳಗಳು ವೇದಿಕೆಯಾಗಿದೆ. ಥಿಯೆರಿಯನ್ನು ಪ್ರಾಯೋಗಿಕವಾಗಿ ತಿಳಿದುಕೊಳ್ಳಲು ವಿಜ್ಞಾನ ಮೇಳಗಳಲ್ಲಿ ಪಾಲ್ಗೊಳ್ಳಬೇಕು. ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸಬೇಕಾದ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳದ್ದು ಎಂದರು.
ಸ್ಟ್ರೈಡ್ಸ್ ಕಂಪನಿಯ ಟ್ರಸ್ಟಿ ಸತ್ಯನಾರಾಯಣ, ಎಲ್ಲಾ ಸರ್ಕಾರಿ ಶಾಲೆಗಳಲ್ಲಿಯೂ ವಿಜ್ಞಾನ ಪ್ರಯೋಗಾಲಯ ಮತ್ತು ಗ್ರಂಥಾಲಯಗಳು ಕಡ್ಡಾಯವಾಗಿ ಇರಬೇಕು. ಇದರಿಂದ ವಿದ್ಯಾರ್ಥಿಗಳ ಸುಸ್ಥಿರ ಅಭಿವೃದ್ಧಿಗೆ ಉಪಯುಕ್ತವಾಗುತ್ತದೆ. ಸ್ಟೆಮ್(ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಮ್ಯಾಥ್ಸ್,) ಪ್ರಯೋಗಾಲಯಗಳು ಸರ್ಕಾರಿ ಶಾಲೆಗಳಿಗೆ ಅನಿವಾರ್ಯವಾಗಿದೆ ಎಂದರು.
ಕಿವಾನಿ ಇಂಟರ್‌ನ್ಯಾಷನಲ್ ಗ್ರೂಪ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಬಿ.ಸತ್ಯಮೂರ್ತಿ, ಒರಿಗೆನೆ ಫಾರ್ಮ ಸರ್ವೀಸಸ್ ಉಪಾಧ್ಯಕ್ಷ ಡಾ.ಸಂಗಮೇಶ್ ಬಡಿಗೇರ್, ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಗುರುಮೂರ್ತಿ, ಎರಿನ್ ಸಂಸ್ಥೆಯ ಸಾಯಿಪ್ರಕಾಶ್, ಕಿವಾನಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ರಾಜಣ್ಣ, ಹಾರಗದ್ದೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್.ನಟರಾಜ್, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜು, ವಿಜ್ಞಾನ ಸಂಪನ್ಮೂಲ ವ್ಯಕ್ತಿಗಳಾದ ರಮ್ಯ, ಯಾಸ್ಮೀನ್, ಸ್ನೇಹ ಇದ್ದರು.
ಕಂಪನಿಯ ಸಿಎಸ್‌ಆರ್ ನಿಧಿಯಡಿ ಹಂತ ಹಂತವಾಗಿ ಸರ್ಕಾರಿ ಶಾಲೆಗಳಲ್ಲಿ ಸ್ಟೆಮ್ ಲ್ಯಾಬ್‌ಗಳನ್ನು ನಿರ್ಮಿಸಲಾಗುವುದು. ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಬೇಕು ಎಂಬುದು ನಮ್ಮ ಗುರಿಬಿ.ಸತ್ಯಮೂರ್ತಿ ವ್ಯವಸ್ಥಾಪಕ ನಿರ್ದೇಶಕ ಕಿವಾಸ್ ಸಂಸ್ಥೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.