ಆನೇಕಲ್: ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ಕಾರ್ತಿಕ ಸೋಮವಾರ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ, ದೀಪೋತ್ಸವ ಕಾರ್ಯಕ್ರಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿದವು. ತಾಲ್ಲೂಕಿನ ಎಲ್ಲಾ ಶಿವ ದೇವಾಲಯಗಳಲ್ಲಿಯೂ ಕಾರ್ತೀಕ ಮಾಸದ ಕಡೆಯ ಸೋಮವಾರದ ಪ್ರಯುಕ್ತ ವಿವಿಧ ಪೂಜೆ, ಹೋಮಗಳನ್ನು ಆಯೋಜಿಸಲಾಗಿತ್ತು. ದೇವಾಲಯಗಳಲ್ಲಿ ಭಕ್ತರ ದಂಡು ಸಾಮಾನ್ಯವಾಗಿತ್ತು.
ಪಟ್ಟಣದ ಬನ್ನೇರುಘಟ್ಟ ರಸ್ತೆಯ ಚಿನ್ನಪ್ಪ ಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತೀಕ ಸೋಮವಾರದ ಪ್ರಯುಕ್ತ ಕಡಲೆಕಾಯಿ ಪರಿಷೆ ನಡೆಯಿತು. ಚಿನ್ನಪ್ಪಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗಿನಿಂದಲೂ ನೂರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಸಂಜೆಯ ವೇಳೆಗೆ ಜಾತ್ರೆಯಲ್ಲಿ ಜನಜಂಗುಳಿ ಜಮಾಯಿಸಿತ್ತು.
ದೇವಾಲಯದ ಆವರಣದಲ್ಲಿ ವಿವಿಧೆಡೆಯಿಂದ ಬಂದಿದ್ದ ವ್ಯಾಪಾರಿಗಳು ಕಡಲೆಕಾಯಿ ರಾಶಿ ಹಾಕಿ ವ್ಯಾಪಾರ ನಡೆಸಿದರು. ಮಕ್ಕಳು ಹಾಗೂ ಭಕ್ತರು ಕಡಲೆಕಾಯಿಗಳನ್ನು ದೇವಾಲಯದತ್ತ ಎಸೆದು ತಮ್ಮ ಭಕ್ತಿ ಸಮರ್ಪಿಸಿದರು. ಭಕ್ತರು ಪ್ರಸಾದವೆಂಬಂತೆ ಕಡಲೆಕಾಯಿಗಳನ್ನು ಆಯ್ದು ತಿನ್ನುತ್ತಿದ್ದರು. ಪುಟಾಣಿ ಮಕ್ಕಳು ಕಡಲೆ ಕಾಯಿಯನ್ನು ಆಯ್ದುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಕಡಲೆಕಾಯಿ ಪ್ರಿಯ ಚಿನ್ನಪಸ್ವಾಮಿ : ಅವಧೂತರಾಗಿದ್ದ ಚಿನ್ನಪ್ಪ ಸ್ವಾಮಿ ಅವರು ಕಡಲೆಕಾಯಿ ಪ್ರಿಯರಾಗಿದ್ದರು. ಹಾಗಾಗಿ ಕಡೆ ಕಾರ್ತೀಕ ಸೋಮವಾರದಂದು ಇಲ್ಲಿ ಕಡಲೆಕಾಯಿ ಪರಿಷೆ ವಿಶೇಷವಾಗಿ ನಡೆಯುತ್ತದೆ. ಭಕ್ತರು ಕಡಲೆಕಾಯಿ ಕೊಂಡು ಚಿನ್ನಪ್ಪಸ್ವಾಮಿ ಅರ್ಪಿಸುವುದು ಇಲ್ಲಿಯ ವಿಶೇಷ. ಭಕ್ತರು ಕಡಲೆಕಾಯಿ ಖರೀದಿಸಿ ದೇವಾಲಯದತ್ತ ಎಸೆದು ತಮ್ಮ ಭಕ್ತಿ ಪ್ರದರ್ಶಿಸಿದರು. ಬೆಳಗಿನಿಂದಲೂ ದೇವಾಲಯದಲ್ಲಿ ಭಕ್ತರ ದಂಡು ಹೆಚ್ಚಾಗಿತ್ತು. ಕಡಲೆಕಾಯಿ ಪರಿಷೆಯ ಪ್ರಯುಕ್ತ ದೇವಾಲಯಕ್ಕೆ ವಿಶೇಷ ಹೂವುಗಳಿಂದ ಅಲಂಕರಿಸಲಾಗಿತ್ತು. ಸಂಜೆ ವಿದ್ಯುತ್ ದೀಪಗಳಿಂದ ದೇವಾಲಯ ಕಂಗೊಳಿಸುತ್ತಿತ್ತು.
ವಿವಿಧೆಡೆ ಶ್ರದ್ಧಾ ಭಕ್ತಿಯ ಪೂಜೆ: ಕಡೆ ಕಾರ್ತೀಕ ಸೋಮವಾರ ಪ್ರಯುಕ್ತ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಅಲಂಕಾರ, ಅನ್ನಸಂತರ್ಪಣೆ ನಡೆದವು. ಪಟ್ಟಣದ ಕಂಬದ ಗಣಪತಿ ದೇವಾಲಯದ ಅಮೃತ ಮಲ್ಲಿಕಾರ್ಜುನ ಸ್ವಾಮಿ ದೇವಾಲಯ, ಥಳೀ ರಸ್ತೆಯ ಬಸವೇಶ್ವರ ದೇವಾಲಯ, ಗೆರಟಿಗನಬೆಲೆ ಪವಾಡ ಬಸವೇಶ್ವರ, ಮಾಸ್ತೇನಹಳ್ಳಿ ವೀರಭದ್ರಸ್ವಾಮಿ, ಚಿಕ್ಕಹೊಸಹಳ್ಳಿಯ ಕಾಶಿ ವಿಶ್ವನಾಥ ಸ್ವಾಮಿ ದೇವಾಲಯ, ಬಯಲು ಬಸವೇಶ್ವರ ಸ್ವಾಮಿ ದೇವಾಲಯ, ಹಳೇಹಳ್ಳಿಯ ಮುನೇಶ್ವರ ಸ್ವಾಮಿ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಗಳು ಶ್ರದ್ಧಾ ಭಕ್ತಿಯಿಂದ ನಡೆದವು.
ತಮ್ಮನಾಯಕನಹಳ್ಳಿಯ ದಬ್ಬಗೂಳೇಶ್ವರ ಸ್ವಾಮಿ ದೇವಾಲಯದಲ್ಲಿ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅಲಂಕೃತ ಸ್ವಾಮಿಯ ದರ್ಶನವನ್ನು ಸುತ್ತಮುತ್ತಲ ಗ್ರಾಮಗಳ ಭಕ್ತರು ಪಡೆದರು. ದೇವಾಲಯದಲ್ಲಿ ಕಾರ್ತೀಕ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು. ಮಹಿಳೆಯರು ದೀಪಗಳನ್ನು ಬೆಳಗುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.