ADVERTISEMENT

ಕನ್ನಡ ಬಾವುಟಕ್ಕೆ ಅಪಮಾನ ಸಹಿಸೆವು: ಅತ್ತಿಬೆಲೆ ಗಡಿಯಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 5:22 IST
Last Updated 19 ಜನವರಿ 2026, 5:22 IST
ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು
ಆನೇಕಲ್‌ ತಾಲ್ಲೂಕಿನ ಅತ್ತಿಬೆಲೆ ಗಡಿಯಲ್ಲಿ ಕನ್ನಡ ಜಾಗೃತಿ ವೇದಿಕೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು   

ಆನೇಕಲ್: ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದ ಬಾವುಟಕ್ಕೆ ಅಪಮಾನ ಖಂಡಿಸಿ ಹಾಗೂ ಕರ್ನಾಟಕದಿಂದ ಶಬರಿಮಲೆಗೆ ತೆರಳುವ ಅಯ್ಯಪ್ಪ ಮಾಲಾಧಾರಿಗಳಿಗೆ ನಿರಂತರವಾಗಿ ಕಿರುಕುಳ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕನ್ನಡ ಜಾಗೃತಿ ವೇದಿಕೆಯ ಕಾರ್ಯಕರ್ತರು ಅತ್ತಿಬೆಲೆ ಗಡಿಯಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.

ಅತ್ತಿಬೆಲೆ ವೃತದಿಂದ ಅತ್ತಿಬೆಲೆ ಗಡಿವರೆಗೂ ನೂರಾರು ಕಾರ್ಯಕರ್ತರು ಕನ್ನಡ ಧ್ವಜಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಆಟೊಗಳಿಗೆ ಕನ್ನಡ ಬಾವುಟ ಕಟ್ಟಿ ಆಟೊ ಚಾಲಕರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಶಬರಿಮಲೆಗೆ ತೆರಳುವ ಮಾರ್ಗದಲ್ಲಿ ತಮಿಳುನಾಡಿನ ಈರೋಡ್ ಬಳಿ ಕರ್ನಾಟಕದಿಂದ ತೆರಳುವ ಮಾಲಾಧಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಕರ್ನಾಟಕದ ಬಾವುಟ ಹೊಂದಿರುವ ವಾಹನಗಳನ್ನು ಅಡ್ಡಗಟ್ಟಿ ಬಾವುಟಗಳನ್ನು ಕಿತ್ತು ಎಸೆಯುವ ಕೃತ್ಯ ನಡೆಸುತ್ತಿದ್ದಾರೆ. ಈ ಬಗ್ಗೆ ತಮಿಳುನಾಡು ಪೊಲೀಸ್ ಇಲಾಖೆ ತಕ್ಷಣ ಕ್ರಮವಹಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರ ಗೊಳಿಸಲಾಗುವುದು ಎಂದು ಕನ್ನಡ ಜಾಗೃತಿ ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಮಂಜುನಾಥ್ ದೇವ ಎಚ್ಚರಿಕೆ ನೀಡಿದರು.

ADVERTISEMENT

ಕನ್ನಡ ಬಾವುಟಕ್ಕೆ ಅವಮಾನ ಮಾಡುವುದನ್ನು ಎಂದಿಗೂ ಸಹಿಸುವುದಿಲ್ಲ. ಕಳೆದ ಮೂರು ವರ್ಷಗಳಿಂದ ನಿರಂತರವಾಗಿ ಈರೋಡ್ ಬಳಿಯಲ್ಲಿ ಸಿಲಂಬರಸನ್ ಎಂಬ ವ್ಯಕ್ತಿಯು ಕರ್ನಾಟಕದ ಬಾವುಟ ಇರುವ ವಾಹನಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಶಬರಿಮಲೆ ಮಾಲಾಧಾರಿಗಳಿಗೆ ಹಲ್ಲೆ ಮಾಡಿದ್ದಾರೆ. ಇವರ ವಿರುದ್ಧ ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಕನ್ನಡಿಗರು ವಿಶಾಲ ಹೃದಯದವರು ಮತ್ತು ಸಹೃದಯರು ಕರ್ನಾಟಕಕ್ಕೆ ಯಾವುದೇ ಬಾವುಟ ಹಾಕಿಕೊಂಡು ಬಂದರೂ ಯಾವುದೇ ಭಾಷೆಯವರು ಬಂದರೂ ಅತ್ಯಂತ ಗೌರವವಾಗಿ ನಡೆಸಿಕೊಳ್ಳುವ ರಾಜ್ಯವಾಗಿದೆ. ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ಕರ್ನಾಟಕದ ಬಾವುಟಕ್ಕೆ ಅಗೌರವ ನೀಡುತ್ತಿರುವುದನ್ನು ಕನ್ನಡ ಜಾಗೃತಿ ವೇದಿಕೆ ಖಂಡಿಸುತ್ತದೆ. ಅತ್ತಿಬೆಲೆ ಗಡಿಯಲ್ಲಿ ಪ್ರತಿನಿತ್ಯ ನೂರಾರು ವಾಹನಗಳು ತಮಿಳುನಾಡು ವಿವಿಧ ಪಕ್ಷಗಳ ಧ್ವಜಗಳನ್ನು ಹಾಕಿಕೊಂಡು ವಾಹನಗಳು ಓಡಾಡುತ್ತವೆ. ಅವರಿಗೆ ಎಂದಿಗೂ ಕನ್ನಡಿಗರು ತೊಂದರೆ ನೀಡಿಲ್ಲ. ಆದರೆ ಈರೋಡ್‌ನ ಈ ವ್ಯಕ್ತಿಗೆ ಕನ್ನಡಿಗರನ್ನು ಕೆಣಕಿ ನಾಯಕನಾಗುವ ಹುಚ್ಚಾಸೆ ಹೊಂದಿದ್ದಾರೆ. ತಮಿಳುನಾಡು ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ ವಿಷಯದಿಂದ ಸ್ಥಳೀಯ ನಾಯಕನಾಗಬೇಕು ಎಂಬ ಹಿನ್ನೆಲೆಯಲ್ಲಿ ಇಂತ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ಪಟಾಪಟ್ ರವಿ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುವವರ ವಿರುದ್ಧ ತಮಿಳುನಾಡು ಸರ್ಕಾರ ಕ್ರಮ ವಹಿಸಬೇಕು. ಕನ್ನಡ ದ್ವಜಕ್ಕೆ ಅವಮಾನ ಮಾಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಈ ಬಗ್ಗೆ ತಮಿಳುನಾಡು ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದರು.

ಕನ್ನಡ ಜಾಗೃತಿ ವೇದಿಕೆಯ ವೆಂಕಟೇಶ್, ನಾಗರಾಜ್, ಕೋದಂಡರಾಮ, ಮಧುಕುಮಾರ್, ಸತೀಶ್ ರಾಜ್, ವೆಂಕಟಸ್ವಾಮಿ, ನಾಗರತ್ನಮ್ಮ, ಸರಸ್ವತಮ್ಮ, ಜಯಂತಿ, ಬಸವರಾಜ್, ಸಬಾಸ್ಟೀನ್‌, ಸ್ವಾಮಿ, ಸಂಪಂಗಿ, ರವಿ, ಮಂಜು, ಜಾವೇದ್ ಪಾಶ, ವಿಮಲ್, ಮಹಂತ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.