ADVERTISEMENT

ಹೊಸಕೋಟೆ ಕ್ಷೇತ್ರ ಸ್ಥಿತಿ–ಗತಿ: ಪಕ್ಷಕ್ಕಿಂತ ಪ್ರತಿಷ್ಠೆ ಮುಖ್ಯ

‘ಮಿನಿ ಬಿಹಾರ’ದಲ್ಲಿ 2ನೇ ತಲೆಮಾರಿನ ರಾಜಕೀಯ ಜಿದ್ದಾಜಿದ್ದಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2023, 5:41 IST
Last Updated 4 ಫೆಬ್ರುವರಿ 2023, 5:41 IST
ಎಂಟಿಬಿ ನಾಗರಾಜ್‌ ಮತ್ತು ಶರತ್‌ ಬಚ್ಚೇಗೌಡ
ಎಂಟಿಬಿ ನಾಗರಾಜ್‌ ಮತ್ತು ಶರತ್‌ ಬಚ್ಚೇಗೌಡ    

ಹೊಸಕೋಟೆ: ರಾಜ್ಯ ರಾಜಕೀಯದಲ್ಲಿಯೇ ಅತ್ಯಂತ ಸ್ವಾರಸ್ಯಕರ ರಾಜಕೀಯ ಇತಿಹಾಸ ಹೊಂದಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಪಕ್ಷಕ್ಕಿಂತ ಕುಟುಂಬ, ವ್ಯಕ್ತಿ ಹಾಗೂ ಜಾತಿ ಸಮೀಕರಣಗಳೇ ಅತೀ ಹೆಚ್ಚು ಕೆಲಸ ಮಾಡುವಂತಿದೆ. ರಾಜಕೀಯ ವಿಮರ್ಶೆಯಂತೆ ‘ಮಿನಿ ಬಿಹಾರ’ ಎಂದು ಖ್ಯಾತಿ ಹೊಂದಿರುವ ಕ್ಷೇತ್ರದಲ್ಲಿ ಈಗಾಗಲೇ 2ನೇ ತಲೆ ಮಾರಿನ ರಾಜಕೀಯ ಅಲೆ ಪ್ರಾರಂಭವಾಗಿದೆ.

ಬಿ.ಎನ್‌. ಬಚ್ಚೇಗೌಡ ಹಾಗೂ ಎಂ.ಟಿ.ಬಿ ನಾಗರಾಜ್‌ ಅವರ ಹಿಡಿತಕ್ಕೆ ಒಳಪಟ್ಟಿರುವ ಹೊಸಕೋಟೆ ಕ್ಷೇತ್ರದಲ್ಲಿ ಪ್ರತಿ ಬಾರಿ ಚುನಾವಣೆಯಲ್ಲಿಯೂ ತೀವ್ರ ಜಿದ್ದಾಜಿದ್ದಿಯ ಪೈಪೋಟಿ ನಡೆಯುತ್ತಲೇ ಇದೆ. ಕಳೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿದ ಎಂ.ಟಿ.ಬಿ ನಾಗರಾಜ್‌ ಅವರನ್ನು ಕಾಂಗ್ರೆಸ್ಸಿಗರು ಬೈರತಿ ಸುರೇಶ್‌ ಪತ್ನಿ ಪದ್ಮಾವತಿ ಅವರನ್ನು ಅಖಾಡಕ್ಕೆ ಇಳಿಸಿ ಕುರುಬ ಮತಗಳ ಇಬ್ಭಾಗ ಮಾಡುವ ಮೂಲಕ ಸೇಡು ತೀರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಬಿಜೆಪಿ ಟಿಕೆಟ್‌ ಸಿಗದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದ ಶರತ್‌ ಬಚ್ಚೇಗೌಡ ಅವರು ಕುಟುಂಬ ಪ್ರತಿಷ್ಠೆಯ ರಾಜಕಾರಣದಿಂದ ವಿಜಯ ಸಾಧಿಸಿದ್ದರು. ನಂತರದ ಬೆಳವಣಿಗೆಯಲ್ಲಿ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದಾರೆ. ಅವರು ಯುವ ಸಮೂಹದ ಅಪಾರ ಬೆಂಬಲ, ಪಕ್ಷ ನಿಷ್ಠರ ಸಹನುಭೂತಿಯ ಅಲೆಯ ಪರಿಣಾಮ ಅಧಿಕಾರ ಹಿಡಿದರು.

ADVERTISEMENT

ಈ ಬಾರಿ ಬಿಜೆಪಿ ಹೈಕಮಾಂಡ್‌ ಅಸ್ತು ಎಂದಲ್ಲಿ ಎಂ.ಟಿ.ಬಿ. ನಾಗರಾಜ್‌ ಅವರ ಪುತ್ರ ಎಂ.ಟಿ.ಬಿ ರಾಜೇಶ್‌ (ನಿತೀಶ್ ಪುರುಷೋತ್ತಮ್‌) ವಿಧಾನಸಭಾ ಚುನಾವಣೆಯಲ್ಲಿ ಶರತ್‌ ಬಚ್ಚೇಗೌಡ ಅವರ ವಿರುದ್ಧ ಪೈಪೋಟಿ ನಡೆಸುವ ಸಾಧ್ಯತೆ ಇದೆ.

ಚುನಾವಣೆಯಲ್ಲಿ ಸೋತ ನಂತರವೂ ವಿಧಾನ ಪರಿಷತ್‌ ಸದಸ್ಯರಾಗಿ ಸಚಿವ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿರುವ ಎಂ.ಟಿ.ಬಿ ನಾಗರಾಜ್‌ ಈ ಮೂಲಕ ಕ್ಷೇತ್ರದ ಜನರ ಒಡನಾಟದಲ್ಲಿದ್ದಾರೆ.

ನಿರಂತರವಾಗಿ ಒಂದಲ್ಲಾ ಒಂದು ವಿಷಯಗಳಲ್ಲಿ ಈ ಇಬ್ಬರು ಸುದ್ದಿಯಲ್ಲಿದ್ದರು. ಶಿಷ್ಟಾಚಾರ, ಸರ್ಕಾರಿ ಕಾರ್ಯಕ್ರಮಗಳ ಉದ್ಘಾಟನೆ ಸೇರಿದಂತೆ ಅಧಿಕೃತ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರ ಶಕ್ತಿ ಪ್ರದರ್ಶನದ ವೇದಿಕೆ ಮಾಡಿಕೊಂಡಿದ್ದಾರೆ.

ಶಾಸಕರ ಅನುದಾನದಲ್ಲಿ ಶರತ್‌, ಸಚಿವರ ಅನುದಾನದಲ್ಲಿ ಎಂಟಿಬಿ ನಾಗರಾಜ್‌ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಇನ್ನು ಜನ ಮಾನಸದಲ್ಲಿ ಶಾಶ್ವತವಾಗಿ ಉಳಿಯಲು ಇಬ್ಬರೂ ನಾಯಕರು ವೈಯಕ್ತಿಕವಾಗಿ ಸಾಕಷ್ಟು ದುಡ್ಡು ಖರ್ಚು ಮಾಡುತ್ತಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದ ಶರತ್‌ ಕಾಂಗ್ರೆಸ್ ಸೇರ್ಪಡೆ ಬಳಿಕ ಮೂಲ ಕಾಂಗ್ರೆಸ್ಸಿಗರಲ್ಲಿ ಭಿನ್ನಾಭಿಪ್ರಾಯ ಮೂಡಿದೆ. ಅವರೆಲ್ಲರನ್ನು ಬಿಜೆಪಿಗೆ ಎಳೆದು ತರುವ ಯತ್ನಗಳನ್ನು ಎಂಟಿಬಿ ನಾಗರಾಜ್‌ ತೆರೆಮರೆಯಲ್ಲಿ ಮಾಡುತ್ತಲೇ ಇದ್ದಾರೆ.

ಬಚ್ಚೇಗೌಡ ತಟಸ್ಥ ನಿಲುವು

ಇನ್ನೊಂದೆಡೆ ಸಂಸದ ಬಿ.ಎನ್‌.ಬಚ್ಚೇಗೌಡರು ಬಿಜೆಪಿ ಪಕ್ಷದಲ್ಲಿಯೇ ಇದ್ದು ತಟಸ್ಥ ನಿಲುವು ಹೊಂದಿದ್ದಾರೆ. ಈ ಬಾರಿ ಬಿಜೆಪಿಯ ಪರ ಪಕ್ಷ ನಿಷ್ಠರಾಗುತ್ತಾರೊ ಅಥವಾ ಪುತ್ರ ವಾತ್ಸಲ್ಯದಲ್ಲಿ ಮಗನ ಪರ ನಿಲ್ಲುತ್ತಾರೊ ಎನ್ನುವುದು ಕುತೂಹಲ ಮೂಡಿಸಿದೆ. ವಯಸ್ಸಿನ ಕಾರಣ ಹೇಳಿ ಎಂಟಿಬಿ ನಾಗರಾಜ್‌ ಅವರು ತಮ್ಮ ಮಗ ಎಂಟಿಬಿ ರಾಜೇಶ್‌ (ನಿತೀಶ್‌ ಪುರುಷೋತ್ತಮ್‌) ಅವರಿಗೆ ರಾಜಕೀಯ ವೇದಿಕೆ ಸಿದ್ಧಪಡಿಸಿ ಎರಡನೇ ತಲೆಮಾರಿಗೆ ಪೈಪೋಟಿ ಮುಂದುವರೆಸುವ ಇರಾದೆಯಲ್ಲಿದ್ದಾರೆ.

ಸಮುದಾಯಗಳ ಸೆಳೆತಕ್ಕೆ ಭರವಸೆಗಳ ಮಹಾಪೂರ

ಎಲ್ಲ ಸಮುದಾಯಗಳ ಮತದಾರರನ್ನು ಸೆಳೆಯಲು ಪಕ್ಷಾತೀತವಾಗಿ ಸರ್ವ ಧರ್ಮಗಳ ಸಂಘಟನೆಗಳು ಕೆಲಸ ಮಾಡುತ್ತಿದೆ. ಪ್ರತಿಯೊಂದು ಸಮುದಾಯಕ್ಕೂ ಸರ್ಕಾರಿ ಜಮೀನು ಮಂಜೂರಾತಿ, ಭವನಗಳ ನಿರ್ಮಾಣಕ್ಕೆ ನಿವೇಶನ, ಅನುದಾನ ನೀಡುವ ಭರವಸೆಗಳು ಜೋರಾಗಿ ನಡೆಯುತ್ತಿದೆ. ಸಾಕಷ್ಟು ಬಲಿಷ್ಠ ಜಾತಿಯ ಸಬಲೀಕರಣಕ್ಕೆ, ಸಂಘಟನೆಯ ವೆಚ್ಚಗಳಿಗೆ ವೈಯಕ್ತಿಕ ಹಣ ನೀಡುವಲ್ಲಿ ಇಬ್ಬರೂ ನಾಯಕರು ಮುಂದಾಗಿದ್ದಾರೆ.

ಒಟ್ಟಾರೆಯಾಗಿ ಜಾತಿವಾರು ರಚನೆಯಾಗಿರುವ ಸಂಘ ಸಂಸ್ಥೆಗಳು, ಸಂಘಟನೆಗಳ ಸಮಾರಂಭಗಳು ನಾಯಕರ ಕೃಪಕಟಾಕ್ಷದಿಂದ ಅದ್ಧೂರಿ ಕಾರ್ಯಕ್ರಮಗಳನ್ನು ಆಚರಣೆ ಮಾಡುತ್ತಿದ್ದಾರೆ. ಈಗಿನಿಂದಲೇ ಮತದಾರ ಪ್ರಭುವಿನ ಒಲೈಕೆಗೆ ಸೀರೆ, ರಗ್ಗು, ಬಾಟೂಟದಂತಹ ಪ್ರಚಾರ ಯೋಜನೆಗಳು ಜಾರಿಯಾಗಿದೆ.

ಪಕ್ಷಕ್ಕಿಂತ ರಾಜಕೀಯ ಪ್ರತಿಷ್ಠೆ ಹೆಚ್ಚು

ಹೊಸಕೋಟೆಯ ರಾಜಕಾರಣದ ಇತಿಹಾಸ ನೋಡಿದರೇ ಇಲ್ಲಿ ಪಕ್ಷಕ್ಕಿಂತ ವ್ಯಕ್ತಿ ಪ್ರತಿಷ್ಠೆಗೆ ಹೆಚ್ಚಿನ ಪ್ರಾಧಾನ್ಯತೆ ದೊರೆತಿದೆ. ಅವರ ರಾಜಕೀಯ ಲಾಭಕ್ಕಾಗಿಯೆ ಪಕ್ಷಾಂತರಗೊಂಡಿರುವುದು ಸ್ಪಷ್ಟವಾಗಿ ಕಾಣುತ್ತದೆ. ರಾಜ್ಯ ಸರ್ಕಾರಗಳ ಅಸ್ತಿತ್ವಕ್ಕೆ ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರುವ ನಾಯಕರನ್ನು ಹೊಂದಿರುವ ಕ್ಷೇತ್ರ ಇದಾಗಿದೆ. ಶರತ್‌ ಬಚ್ಚೇಗೌಡರ ಪರ ಒಕ್ಕಲಿಗರು, ದಲಿತರು ಸೇರಿದಂತೆ ಇತರ ಸಮುದಾಯದವರು ಬೆಂಬಲ ನೀಡುತ್ತಿದ್ದಾರೆ. ಎಂಟಿಬಿ ನಾಗರಾಜ್‌ ಬೆನ್ನಿಗೆ ಕುರುಬರು ನಿಂತಿದ್ದಾರೆ. ಬ್ರಾಹ್ಮಣರು, ಹಿಂದುಳಿದವರ್ಗಗಳ ಮತಗಳು ಬಿಜೆಪಿ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಪೈಪೋಟಿಯಲ್ಲಿ ಇಬ್ಬರು ಮಾತ್ರ ಅಖಾಡಲ್ಲಿರುವುದರಿಂದ ಯಾರೇ ಗೆದ್ದರೂ ಅತಿ ಕಡಿಮೆ ಅಂತರದಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.