ADVERTISEMENT

ರಾಜಕೀಯ ಇಚ್ಛಾಶಕ್ತಿಯಿಂದ ಕನ್ನಡದ ಕಾರ್ಯಗಳಿಗೆ ಸೋಲು: ಜಾಣಗೆರೆ ವೆಂಕಟರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2025, 4:53 IST
Last Updated 26 ನವೆಂಬರ್ 2025, 4:53 IST
ಆನೇಕಲ್ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು
ಆನೇಕಲ್ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಮೆರವಣಿಗೆ ಮೂಲಕ ಬರಮಾಡಿಕೊಳ್ಳಲಾಯಿತು   

ಆನೇಕಲ್ : ಪಟ್ಟಣದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಮಂಗಳವಾರ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರಿಗೆ ಕರ್ನಾಟಕ ಚೂಡಾಮಣಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ವೇದಿಕೆ ಬರಮಾಡಿಕೊಳ್ಳಲಾಗಿದೆ. ತಮಟೆ, ಕನ್ನಡ ಗೀತೆಗಳ ಗಾಯನ, ಅಲಂಕೃತ ಬಸ್‌ಗಳ ಮೆರವಣಿಗೆ ನಡೆಸಲಾಯಿತು.

ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಮಾತನಾಡಿ ಅಧಿಕಾರದ ಮದ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ಸ್ವಾರ್ಥ, ಕಪಟತನದ ರಾಜಕೀಯ ವ್ಯವಸ್ಥೆಯಿಂದಾಗಿ ಕನ್ನಡ ನೆಲ, ಜಲ, ನಾಡು, ನುಡಿಯ ವಿಚಾರಗಳಲ್ಲಿ ಸೋಲಾಗುತ್ತಿದೆ. ಕಾವೇರಿ ವಿವಾದ, ಬೆಳಗಾವಿ ಗಡಿ ವಿವಾದ, ಕೃಷ್ಣೆ ಜಲವಿವಾದಗಳು ಮುಂದುವರೆಯುತ್ತಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕನ್ನಡ ರಾಮಯ್ಯ ಎಂದು ಭಾವಿಸಿದ್ದೆವು ಆದರೆ ದ್ವಿಭಾಷಾ ಸೂತ್ರ, ಆಡಳಿತ ಕನ್ನಡ ಬಳಕೆ, ಸರೋಜಿನಿ ಮಹಿಷಿ ವರದಿ ಜಾರಿ ಸೇರಿದಂತೆ ವಿವಿಧ ಕನ್ನಡದ ನಿಯಮಗಳನ್ನು ರೂಪಿಸುವಲ್ಲಿ ಸಿದ್ದರಾಮಯ್ಯ ಅವರು ಸೇರಿದಂತೆ ರಾಜ್ಯವನ್ನಾಳಿದ ಎಲ್ಲಾ ಸರ್ಕಾರಗಳು ವಿಫಲವಾಗವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ತಮಿಳುನಾಡಿನ ಮೆಟ್ಟೂರು ಅಣೆಕಟ್ಟು ಒಮ್ಮೆ ತುಂಬಿದರೆ ಅಂದಾಜು 100ಟಿಎಂಸಿ ನೀರು ತುಂಬುತ್ತದೆ. ಆದರೆ ಕರ್ನಾಟಕದಲ್ಲಿನ ಕೆಆರ್‌ಎಸ್‌ 40 ಟಿಎಂಸಿ, ಕಬಿನಿ 18ಟಿಂಸಿ ಮತ್ತು ಹಾರಂಗಿ 8 ಟಿಎಂಸಿ ನೀರು ತುಂಬುತ್ತದೆ. ಕಾವೇರಿ ವಿಷಯದಲ್ಲಿ ಕೇಂದ್ರ, ರಾಜ್ಯ, ನ್ಯಾಯ ಮಂಡಳಿ, ಸುಪ್ರೀಂ ಕೋರ್ಟ್‌ನಿಂದಲೂ ಸಹ ಕರ್ನಾಟಕಕ್ಕೆ ನ್ಯಾಯ ದೊರೆತಿಲ್ಲ. ಕಾವೇರಿ ಜಲವಿವಾದಲ್ಲಿ 100ಕೋಟಿಗೂ ಹೆಚ್ಚು ಹಣವನ್ನು ವಕೀಲರಿಗೆ ನೀಡಿದ್ದೆ ಸಾಧನೆಯಾಗಿದೆ. ಆಲಮಟ್ಟಿ ಅಣೆಕಟ್ಟಿನ ಎತ್ತರ ಎಚ್ಚಿಸಲು ಮುಂದಾದರೆ ಆಂಧ್ರದ ಚಂದ್ರಬಾಬು ನಾಯ್ಡು ಸುಪ್ರೀಂ ಕೋರ್ಟ್‌ಮೆಟ್ಟಿಲೇರುತ್ತಾರೆ. ಆಂಧ್ರಪ್ರದೇಶದ ಶ್ರೀಶೈಲದ ಜುರಾಲ ಅಣೆಕಟ್ಟು ತುಂಬಿದರೆ ನಮ್ಮ ರಾಜ್ಯ ಗಡಿ ಗ್ರಾಮಗಳು ಮುಳುಗುತ್ತವೆ. ಅಕ್ಕ ಪಕ್ಕದ ರಾಜ್ಯಗಳು ಪ್ರೀತಿ ವಿಶ್ವಾಸ ಮತ್ತು ನಂಬಿಕೆಯಿಂದ ಮುಂದುವರೆದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರು.

ಕೆಎಸ್‌ಆರ್‌ಟಿಸಿಯು ಆಡಳಿತದ ಎಲ್ಲಾ ಹಂತಗಳಲ್ಲಿಯೂ ಶೇ.100ರಷ್ಟು ಕನ್ನಡ ಬಳಸುವ ಇಲಾಖೆಯಾಗಿದೆ. ನ್ಯಾಯಾಲಯಗಳಲ್ಲಿಯೂ ಹಲವು ಬಾರಿ ಕನ್ನಡದಲ್ಲಿಯೇ ತೀರ್ಪು ನೀಡಿದ್ದಾರೆ. ಆದರೆ ಪೊಲೀಸರು ಮಾತ್ರ ಎಫ್‌ಐಆರ್‌, ಚಾರ್ಜ್‌ಶೀಟ್‌ಗಳಲ್ಲಿ ಕನ್ನಡ ಬಳಸಬೇಕು ಎಂದರು.

ಕನ್ನಡ ಕ್ರಿಯಾ ಸಮಿತಿ ರಾಜ್ಯ ಗೌರವ ಅಧ್ಯಕ್ಷ ವ.ಚ.ಚನ್ನೇಗೌಡ ಮಾತನಾಡಿ ಕನ್ನಡ ಪರ ಹೋರಾಟಗಳು ಕನ್ನಡಿಗರಲ್ಲಿ ಹೊಸ ಚೈತನ್ಯವನ್ನು ಮೂಡಿಸಿದೆ. ಗೋಕಾಕ್‌ ಚಳವಳಿ, ಮಹಿಷಿ ವರದಿ ಜಾರಿಗೆ ಹೋರಾಟಗಳು, ಕಾವೇರಿ ಹೋರಾಟ, ಬೆಳಗಾವಿ ಗಡಿ ಹೋರಾಟಗಳಲ್ಲಿ ಕನ್ನಡ ಹೋರಾಟಗಾರರು ತಮ್ಮ ಮನೆಯ ಕೆಲಸದಂತೆ ಹೋರಾಟಕ್ಕೆ ಧುಮುಕುತ್ತಿದ್ದರು. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯುವಲ್ಲಿಯೂ ಕನ್ನಡ ಹೋರಾಟಗಾರರ ಪಾತ್ರವಿದೆ. ಚಿದಾನಂದ ಮೂರ್ತಿ, ದೇ.ಜವರೇಗೌಡ ಅವರ ಸಂಶೋಧನೆಗಳು ಶಾಸ್ತ್ರೀಯ ಸ್ಥಾನಮಾನ ಕಲ್ಪಿಸಿದೆ. ತಮಿಳುನಾಡಿನ ಕೃಷ್ಣಗಿರಿ, ತಾಳಗಿರಿ, ಊಟಿ, ಥಳೀ, ಸೊಲ್ಲಾಪುರ, ಧರ್ಮಪುರಿ, ಅನಂತಪುರ, ಕರ್ನೂಲುಗಳಲ್ಲಿ ಹೆಚ್ಚು ಕನ್ನಡಿಗರಿದ್ದರು. ಆದರೆ ಅಂದಿನ ಕೆಲ ನಿಯಮಗಳಿಂದಾಗಿ ಅಖಂಡ ಕರ್ನಾಟಕವು ನಿರ್ಮಾಣವಾಗಿದ್ದರೆ ಕರ್ನಾಟಕದ ಶಕ್ತಿ ಮತ್ತು ವ್ಯಾಪ್ತಿ ಮತ್ತಷ್ಟು ಪಸರಿಸುತ್ತಿತ್ತು ಎಂದರು.

ಕೆಎಸ್‌ಆರ್‌ಟಿಸಿಯ ವಿಭಾಗೀಯ ನಿಯಂತ್ರಣಾಧಿಕಾರಿ ಪರುಷೋತ್ತಮ, ಸಾಹಿತಿ ರಾ.ನಂ.ಚಂದ್ರಶೇಖರ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ್‌ ಹಾನಗಲ್‌, ಕನ್ನಡ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ಕೆ.ಎಸ್‌.ಪ್ರಭುಸ್ವಾಮಿ, ರಾಜ್ಯ ಕಾರ್ಯಾಧ್ಯಕ್ಷ ಹುಸೇನ್‌, ಪ್ರಧಾನ ಕಾರ್ಯದರ್ಶಿ ಸುರೇಶ್‌, ಆನೇಕಲ್‌ ಘಟಕ ವ್ಯವಸ್ಥಾಪಕಿ ಬೇಬಿಬಾಯಿ, ಆನೇಕಲ್‌ ಘಟಕದ ನಂಜಪ್ಪ, ಅಳ್ಳಾಳಪ್ಪ, ರಮೇಶ್‌ ಬೆಳ್ಳಿಕಟ್ಟಿ, ಉಜ್ವಲ.ಎಸ್‌.ತಳವಾರ, ರಾಜಶೇಖರ್‌, ಬಿರಾದರ್‌, ಶ್ರೀನಿವಾಸ್, ಶಿವಕುಮಾರ್, ವೆಂಕಟೇಶ್‌ ಇದ್ದರು.

ಆನೇಕಲ್ನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೇಂದ್ರ ಕನ್ನಡ ಕ್ರಿಯಾ ಸಮಿತಿ ವತಿಯಿಂದ ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ಅವರಿಗೆ ಕರ್ನಾಟಕ ಚೂಡಾಮಣಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.