ಹೊಸಕೋಟೆ: ಸಿದ್ದರಾಮಯ್ಯ ಅವಧಿಯಲ್ಲಿ ಮಾತ್ರ ಕುರುಬ ಸಮಾಜದ ಅಭಿವೃದ್ಧಿ ಸಾಧ್ಯ. ಈ ಹಿಂದೆಯೇ ಮೆಡಿಕಲ್ ಕಾಲೇಜು, ಎಂಜಿನಿಯರ್ ಕಾಲೇಜು ಸ್ಥಾಪನೆಗೆ ಚಾಲನೆ ನೀಡಲಾಗಿತ್ತು. ಆದರೆ ಅವೆರಡು ನೆನೆಗುದಿಗೆ ಬಿದ್ದಿವೆ. ಇದಕ್ಕೆ ಸಿದ್ದರಾಮಯ್ಯ ಕಾರಣ ಅಲ್ಲ ಎಂದು ವಿಧಾನಪರಿಷತ್ ಸದಸ್ಯ ಎಂಟಿಬಿ ನಾಗರಾಜ್ ತಿಳಿಸಿದರು.
ನಗರದ ಹೊರವಲಯದ ದಂಡುಪಾಳ್ಯ ದಿನ್ನೆಯಲ್ಲಿ ತಾಲ್ಲೂಕು ಕುರುಬರ ಸಂಘ ನಿರ್ಮಿಸುತ್ತಿರುವ ಕನಕ ವಿದ್ಯಾಮಂದಿರ ಉದ್ಘಾಟನೆ ಹಾಗೂ ಕನಕದಾಸ ಜಯಂತಿಯಲ್ಲಿ ಮಾತನಾಡಿದರು.
‘ನಮ್ಮ ಸಮುದಾಯ ಅಭಿವೃದ್ಧಿ ಹೊಂದಬೇಕಾದರೆ ಸಿದ್ದರಾಮಯ್ಯ ಅವರು ಅಧಿಕಾರದಲ್ಲಿದ್ದಾಗ ಮಾತ್ರ ಸಾಧ್ಯ. ಇಲ್ಲದಿದ್ದಲ್ಲಿ ಸಾಧ್ಯವೇ ಇಲ್ಲ. ಆದ್ದರಿಂದ ಸಿದ್ದರಾಮಯ್ಯ ಅಧಿಕಾರಾವಧಿಯಲೇ ಸಮುದಾಯ ಅಭಿವೃದ್ಧಿಗೆ ನಾವೆಲ್ಲರೂ ಮುಂದಾಗಬೇಕು’ ಎಂದು ಹೇಳಿದರು.
‘ನಾನು ಮೂರು ಬಾರಿ ಶಾಸಕನಾಗಿ ಕೆಲಸ ಮಾಡಿದ್ದೇನೆ. ಆ ಸಂದರ್ಭದಲ್ಲಿ ನನ್ನ ಸಮುದಾಯದ ಋಣ ತೀರಿಸಿದ್ದೇನೆ ಎಂಬ ಧನ್ಯತಾಭಾನ ನನಗಿದೆ’ ಎಂದರು.
‘ತಾಲ್ಲೂಕಿನಲ್ಲಿ ಕುರುಬ ಸಮುದಾಯಕ್ಕಿಂತಲೂ ದೊಡ್ಡ ಸಮುದಾಯ ಪ್ರತಿನಿಧಿಸುವ ರಾಜಕಾರಣಿಗಳು ಹೆಚ್ಚು ಅವಧಿಯಲ್ಲಿ ತಾಲ್ಲೂಕನ್ನು ಆಳ್ವಿಕೆ ಮಾಡಿದ್ದಾರೆ. ನಾಲ್ಕೈದು ಬಾರಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಆದರೆ ಅವರ ಸಮುದಾಯಕ್ಕೆ ಏನು ಮಾಡಿದ್ದಾರೆ ಎಂಬುದನ್ನು ತಿಳಿಸಬೇಕು. ಆದರೆ ನನ್ನ ಅವಧಿಯನ್ನು ಮತ್ತು ಪ್ರಸ್ತತ ಸಂದರ್ಭದಲ್ಲಿಯೂ ಸಮುದಾಯಕ್ಕೆ ಕೆಲಸ ಮಾಡುತ್ತಿದ್ದೇನೆ’ ಎಂದು ಪರೋಕ್ಷವಾಗಿ ಬಚ್ಚೇಗೌಡ ಕುಟುಂಬವನ್ನು ಕುಟುಕಿದರು.
ಇನ್ನು ಶಿಕ್ಷಣ ಅತ್ಯಂತ ಪ್ರಬಲ ಅಸ್ತ್ರ. ಕುರುಬ ಸಮುದಾಯದಲ್ಲಿ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚತರಾಗಬಾರದು. ಆ ನಿಟ್ಟಿನಲ್ಲಿ ತಾಲ್ಲೂಕು ಕುರುಬರ ಸಂಘ ವಿದ್ಯಾಮಂದಿರ ನಿರ್ಮಿಸುತ್ತಿದೆ ಎಂದರು.
‘ಸಮುದಾಯದಲ್ಲಿ ಯಾರೂ ಶಿಕ್ಷಣದಿಂದ ವಂಚಿತರಾಗಬಾರದೆಂದು ಸಮುದಾಯದ ಮುಖಂಡರನ್ನು ಜೊತೆಗೂಡಿಸಿಕೊಂಡು ಹೋರಾಡಿ ಇಂದು ನಾಲ್ಕು ಎಕರೆಯಲ್ಲಿ ವಿದ್ಯಾಮಂದಿರವನ್ನು ಪ್ರಾರಂಭಿಸುತ್ತಿದ್ದೇವೆ’ ಎಂದು ಕುರುಬರ ಸಂಘದ ತಾಲ್ಲೂಕು ಅಧ್ಯಕ್ಷ ಅತ್ತಿಬೆಲೆ ರಘುವೀರ್ ತಿಳಿಸಿದರು.
ಕಾಗಿನೆಲೆ ಮಹಾಸಂಸ್ಥಾನದ ಕನಕ ಗುರು ಪೀಠದ ನಿರಂಜನಾನಂದಪುರಿ ಸ್ವಾಮಿ, ಕನಕಗುರು ಪೀಠ ನಂದಗುಡ ಶಾಖಾ ಮಠದ ಸಿದ್ದರಾಮಾನಂದಪುರಿ ಸ್ವಾಮಿಜಿ, ಹನೂರು ವಿಧಾನ ಸಭಾ ಕ್ಷೇತ್ರದ ವಿಧಾನ ಸಭಾ ಸದಸ್ಯ ಎಂ.ಆರ್.ಮಂಜುನಾಥ್, ಗರುಡಾಚಾರ್ ಪಾಳ್ಯದ ಮಾಜಿ ನಗರಸಭೆ ಸದಸ್ಯ ಎಂ.ಅನಂತರಾಮಯ್ಯ, ಕುರುಬರ ಸಂಘದ ಮಾಜಿ ಅಧ್ಯಕ್ಷ ಮುನಿನಾರಾಯಣಪ್ಪ, ಸಿ.ಶ್ರೀನಿವಾಸಯ್ಯ, ಚೌಡಪ್ಪ, ಹಾಲಿ ಅಧ್ಯಕ್ಷ ರಘುವೀರ್, ಕಾರ್ಯದರ್ಶಿ ಮಂಜುನಾಥ್, ಪದಾಧಿಕಾರಿಗಳಾದ ಎಂ.ಆರ್.ರಾಜಣ್ಣ, ಕೆಂಪಣ್ಣ, ಟಿ.ನಾಗರಾಜ್, ದಶರತ್, ಡಿ.ಕೆ.ನಾಗರಾಜ್, ಮುನಿಶಾಮಪ್ಪ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.