ಆನೇಕಲ್: ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಬಿ.ಇಡಿ ಪದವಿಯಲ್ಲಿ ಎರಡು ಮಕ್ಕಳ ತಾಯಿಯಾಗಿರುವ ಎಂ.ಎಲ್.ಪವಿತ್ರ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ಚಿನ್ನದ ಪದಕ
ಪಡೆದಿದ್ದಾರೆ.
ತಾಲ್ಲೂಕಿನ ಸರ್ಜಾಪುರ ಸಮೀಪದ ಸುಲ್ತಾನ್ಪಾಳ್ಯದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹಶಿಕ್ಷಕಿಯಾಗಿರುವ ಪವಿತ್ರ ಅವರು ಭಾನುವಾರ ನಡೆದ ವಿಶ್ವವಿದ್ಯಾಲಯದ 18ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಪದವಿ ಮತ್ತು ಪದಕ ಸ್ವೀಕರಿಸಿದರು.
‘ಓದಬೇಕು ಎಂಬ ಛಲವಿದ್ದರೆ ಸಾಧಿಸಲು ಅವಕಾಶಗಳಿವೆ. ಗೃಹಿಣಿಯಾಗಿ, ಎರಡು ಮಕ್ಕಳ ತಾಯಿಯಾಗಿರುವ ನಾನು ಸತತ ಅಧ್ಯಯನ ಮಾಡಿ ಬಿ.ಇಡ್‌ನಲ್ಲಿ ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿರುವುದು ಸಂತಸ ತಂದಿದೆ’ ಎಂ.ಎಲ್.ಪವಿತ್ರ ಹೇಳಿದರು.
‘ನನ್ನ ಪತಿ ಸಂತೋಷ್ ಪೊಲೀಸ್ ಇನ್‌ಸ್ಪೆಕ್ಟರ್ ಆಗಿದ್ದಾರೆ. ಅವರ ಪ್ರೋತ್ಸಾಹ ಮತ್ತು ವಿಶ್ವವಿದ್ಯಾಲಯವು ನೀಡಿದ ಉತ್ತಮ ಮಾರ್ಗದರ್ಶನದಿಂದ ಸಾಧನೆ ಸಾಧ್ಯವಾಗಿದೆ. ಸೇವಾ ನಿರತರಾಗಿರುವವರಿಗೆ ಮುಕ್ತ ವಿಶ್ವವಿದ್ಯಾಲಯದಲ್ಲಿ ವಿವಿಧ ಪದವಿಗಳನ್ನು ಪಡೆಯಲು ಉತ್ತಮ ವೇದಿಕೆಯಾಗಿದೆ’ ಎಂದರು.
ಟಾಪ್‌ಟೆನ್‌ನಲ್ಲಿ ತಾಲ್ಲೂಕಿನ ಇಬ್ಬರು ತಾಲ್ಲೂಕಿನ ಅತ್ತಿಬೆಲೆ ಹಿರಿಯ ಪ್ರಾಥಮಿಕ ಶಾಲೆಯ ಬಿ.ಉಷಾ ಅವರು ಬಿ.ಇಡಿ ಪದವಿಯಲ್ಲಿ 9ನೇ ರ‍್ಯಾಂಕ್ ಪಡೆದಿದ್ದು 10 ರ‍್ಯಾಂಕ್ ಪೈಕಿ ಆನೇಕಲ್ ತಾಲ್ಲೂಕಿನ ಇಬ್ಬರು ಶಿಕ್ಷಕರು ಉನ್ನತ ಸಾಧನೆ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.