ADVERTISEMENT

68ನೇ ದಿನ ಪೂರೈಸಿದ ಸರ್ಜಾಪುರ ಭೂ ಸ್ವಾಧೀನ ವಿರೋಧಿ ಹೋರಾಟ

ರೈತ ಧರಣಿಯಲ್ಲಿ ಪ್ರತಿಧ್ವನಿಸಿದಿದ ಪ್ರಜಾಪ್ರಭುತ್ವ ದಿನ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 1:36 IST
Last Updated 16 ಸೆಪ್ಟೆಂಬರ್ 2025, 1:36 IST
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಕವಿತಾ ರೆಡ್ಡಿ ಅವರು ಪಾಲ್ಗೊಂಡು ಚರಕದಿಂದ ಹಾರ ಸಿದ್ದಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು
ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ನಡೆಯುತ್ತಿರುವ ರೈತ ಹೋರಾಟದಲ್ಲಿ ಕವಿತಾ ರೆಡ್ಡಿ ಅವರು ಪಾಲ್ಗೊಂಡು ಚರಕದಿಂದ ಹಾರ ಸಿದ್ದಪಡಿಸುವ ಕಾರ್ಯಕ್ಕೆ ಚಾಲನೆ ನೀಡಿದರು   

ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ 68 ದಿನ ಪೂರೈಸಿದ್ದು, ಸೋಮವಾರ ಧರಣಿ ಸ್ಥಳದಲ್ಲಿ ರೈತರು ಪ್ರಜಾಪ್ರಭುತ್ವ ದಿನ ಆಚರಿಸಿದರು.

ಹೋರಾಟಗಾರ್ತಿ ಕವಿತಾ ರೆಡ್ಡಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಚರಕ ಮೂಲಕ ಖಾದಿ ಹಾರ ತಯಾರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವ ಎಂ.ಬಿ.ಪಾಟೀಲ್‌ ಮತ್ತು ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಅವರಿಗೆ ನೀಡಲು ಸಿದ್ಧತೆ ನಡೆಸಲಾಗುತ್ತಿದೆ.

ಸೆ.15ರಂದು ಪ್ರಜಾಪ್ರಭುತ್ವ ದಿನವಾಗಿದೆ. ಆದರೆ ಮುತ್ತಾನಲ್ಲೂರು ಸೇರಿದಂತೆ 10ಗ್ರಾಮಗಳ ರೈತರಿಗೆ ಪ್ರಜಾಪ್ರಭುತ್ವ ದಿನವಾಗಿ ಉಳಿದಿಲ್ಲ. ಯಾವುದೇ ಸೂಚನೆ ಇಲ್ಲದೇ. ರೈತರ ಒಪ್ಪಿಗೆಯಿಲ್ಲದೇ ಭೂಸ್ವಾಧೀನ ಪ್ರಕ್ರಿಯೆ ಮಾಡಲು ಸಿದ್ಧತೆ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿ ಚರಕವನ್ನು ಚಲಾಯಿಸಿ ಪ್ರತಿಭಟಿಸಲಾಗಿದೆ ಎಂದು ಕವಿತಾ ರೆಡ್ಡಿ ತಿಳಿಸಿದರು.

ADVERTISEMENT

ರೈತರ ಕೃಷಿ ಭೂಮಿಯ ಹಕ್ಕು ಕಿತ್ತುಕೊಳ್ಳಲು ಕೆಐಎಡಿಬಿ ನಿಂತಿದೆ. ರೈತರು ಯಾವುದೇ ಕಾರಣಕ್ಕೂ ಒಂದಿಂಚು ಭೂಮಿಯನ್ನು ಸಹ ನೀಡುವುದಿಲ್ಲ. ಈಗಾಗಲೇ ಆನೇಕಲ್‌ ತಾಲ್ಲೂಕಿನಲ್ಲಿ ಐದು ಕೈಗಾರಿಕ ಪ್ರದೇಶಗಳಿವೆ. ಮತ್ತೊಂದು ಕೈಗಾರಿಕಾ ಪ್ರದೇಶ ನಿರ್ಮಾಣ ಆಗಿರುವುದರಿಂದ ಕೆರೆಗಳು ಮತ್ತು ಭೂಮಿ ಕಲುಷಿತ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಮುಖಂಡರಾದ ಚಿನ್ನಪ್ಪ ಚಿಕ್ಕಹಾಗಡೆ, ಉಮಾ ಪರಶುರಾಮ್‌, ಕೇಶವ ಇದ್ದರು.

ರೈತರ ಹೋರಾಟದಲ್ಲಿ ಭಾಗಿಯಾದ ಮಹಾತ್ಮ ಶಾಲೆಯ ವಿದ್ಯಾರ್ಥಿಗಳು

ರೈತನೇ ಭೂಮಿಯ ಒಡೆಯ

ರೈತರು ಕೃಷಿ ನಂಬಿ ಬದುಕುತ್ತಿದ್ದಾರೆ. ಇವರ ಭೂಮಿ ಕಿತ್ತುಕೊಳ್ಳುವುದರಿಂದ ಆಹಾರ ವ್ಯವಸ್ಥೆಗೆ ಸಮಸ್ಯೆಯಾಗಲಿದೆ. ರೈತನೇ ಭೂಮಿಯ ಒಡೆಯ. ಈ ಹೇಳಿಕೆಗಳು ಬೋರ್ಡ್‌ಗೆ ಮಾತ್ರ ಸೀಮಿತವಾಗದೇ ಜೀವನದ ಭಾಗವಾಗಬೇಕು. ರೈತರ ಭೂಮಿ ಕಿತ್ತುಕೊಳ್ಳುವುದರಿಂದ ಭೂಮಿಯ ಒಡೆಯ ಕೆಲಸಗಾರರಾಗುತ್ತಾರೆ ಎಂದು ಮಹಾತ್ಮ ಶಾಲೆಯ ವಿದ್ಯಾರ್ಥಿನಿಯರು ಹೇಳಿದರು.

ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯಲಿ

ರೈತರ ಆಕ್ರೋಶ ದಿನೇ ದಿನೇ ಹೆಚ್ಚಾಗುತ್ತಿದೆ. ಸರ್ಜಾಪುರ ಹೋಬಳಿಯ ಭೂಮಿ ಬರಡು ಭೂಮಿಯಲ್ಲ ಫಲವತ್ತಾದ ಭೂಮಿ. ಇಂತಹ ಭೂಮಿಯನ್ನು ಕೈಗಾರಿಕೆಗೆ ನೀಡಲು ಸರ್ಕಾರ ಸಿದ್ಧತೆ ನಡಸುತ್ತಿರುವುದು ಖಂಡನೀಯ. ರೈತರು 11 ಗ್ರಾಮಗಳಲ್ಲಿಯೂ ಸಂಘಟಿತರಾಗಿದ್ದಾರೆ. ಒಗ್ಗಟ್ಟಾಗಿದ್ದಾರೆ. ಹಾಗಾಗಿ ಈ ಕ್ರಮದಿಂದ ಸರ್ಕಾರ ಹಿಂದೆ ಸರಿಯುವುದೇ ಒಳಿತು ಎಂದು ಹೋರಾಟ ಸಮಿತಿಯ ವಿಶ್ವನಾಥರೆಡ್ಡಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.