
ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಸರ್ಜಾಪುರ ಹೋಬಳಿಯ ರೈತರು ಬೆಂಗಳೂರಿನ ಖನಿಜ ಭನವದ ಕೆಐಎಡಿಬಿ ಕಚೇರಿ ಮುಂಭಾಗದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನೂರಾರು ರೈತರು ನಮ್ಮ ಭೂಮಿ ನಮ್ಮ ಹಕ್ಕು ಘೋಷಣೆ ಕೂಗುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕೆಐಎಡಿಬಿ ಕಚೇರಿ ಮುಂಭಾಗದಲ್ಲಿ ಹಸಿರು ಶಾಲುಗಳು ರಾರಾಜಿಸಿದವು.
ಆನೇಕಲ್ ತಾಲ್ಲೂಕಿನ ಕೊಮ್ಮಸಂದ್ರ, ಚಿಕ್ಕತಿಮ್ಮಸಂದ್ರ, ಮುತ್ತಾನಲ್ಲೂರು, ಸಮನಹಳ್ಳಿ, ಬಿ.ಹೊಸಹಳ್ಳಿ, ಬಿಕ್ಕನಹಳ್ಳಿ, ಎಸ್.ಮೇಡಹಳ್ಳಿ, ಕಾಡು ಅಗ್ರಹಾರ, ಹಂದೇನಹಳ್ಳಿ, ಗೋಪಸಂದ್ರ ರೈತರು ಬೆಂಗಳೂರಿನ ಕೆಐಎಡಿಬಿಯ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಗೌರವ ಅಧ್ಯಕ್ಷರ ಜಯಪ್ರಕಾಶ್ ಮಾತನಾಡಿ, ರೈತರ ಭೂಮಿಯನ್ನು ಕೈಗಾರಿಕೆಗೆ ನೀಡುವುದರಿಂದ ರೈತರ ಅಸ್ಮಿತೆಯೇ ಕಳೆದು ಹೋಗುತ್ತದೆ. ಫಲವತ್ತಾದ ಭೂಮಿಯನ್ನು ಕೈಗಾರಿಕೆಗೆ ನೀಡಲು ಸಿದ್ಧತೆ ನಡೆಸುತ್ತಿರುವುದು ಖಂಡನೀಯ. ರೈತರ ಭೂಸ್ವಾಧೀನ ಖಂಡಿಸಿ ರೈತರು 110 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಎಲ್ಲ ಗ್ರಾಮಗಳ ರೈತರು ಒಗ್ಗೂಡಿ ಕೆಐಎಡಿಬಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ವಿಧಾನಸೌಧ ಚಲೊ ಮಾಡಲು ಸಿದ್ಧತೆ ನಡೆಸಲಾಗಿದೆ. ರೈತರ ಹಿತಾಸಕ್ತಿ ಕಾಯಬೇಕಾದದ್ದು ಸರ್ಕಾರದ ಜವಾಬ್ದಾರಿ ಎಂದರು.
ಮುಖಂಡ ಚಿನ್ನಪ್ಪ ಚಿಕ್ಕಹಾಗಡೆ, ಕೇಶವರೆಡ್ಡಿ, ಪರಶುರಾಮ್, ರಘು, ಪುಷ್ಪಮ್ಮ, ರಮೇಶ್ ರೆಡ್ಡಿ, ಅಮರೇಶ್ ರೆಡ್ಡಿ, ವೇಣು, ಪ್ರಶಾಂತ್, ವೀಣಾ, ಉಮಾ ಇದ್ದರು.
ಹೆಚ್ಚಾಗುತ್ತಿದೆ ರೈತರ ಆಕ್ರೋಶ: ಆನೇಕಲ್ ತಾಲ್ಲೂಕಿನ ಸರ್ಜಾಪುರ ಹೋಬಳಿಯ 10ಕ್ಕೂ ಹೆಚ್ಚು ಗ್ರಾಮಗಳ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳಲು ಕೆಐಎಡಿಬಿ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರೈತರು 100ಕ್ಕೂ ಹೆಚ್ಚು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಭೂಸ್ವಾಧೀನ ವಿರೋಧಿಸಿ ರೈತರು ರಸ್ತೆ ತಡೆ, ಬೈಕ್ ರ‍್ಯಾಲಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಮಂಗಳವಾರ ವಿವಿಧ ಗ್ರಾಮಗಳ ರೈತರು ಬೆಂಗಳೂರಿನ ಖನಿಜ ಭವನದ ಕೆಐಎಡಿಬಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.