ADVERTISEMENT

ದೇವನಹಳ್ಳಿ| ವಿದೇಶಿ ಮಹಿಳೆಗೆ ಲೈಂಗಿಕ ಕಿರುಕುಳ: ವಿಮಾನ ನಿಲ್ದಾಣದ ಸಿಬ್ಬಂದಿ ಬಂಧನ

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 5:37 IST
Last Updated 23 ಜನವರಿ 2026, 5:37 IST
ಅಫಾನ್ ಅಹಮ್ಮದ್
ಅಫಾನ್ ಅಹಮ್ಮದ್   

ದೇವನಹಳ್ಳಿ: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೊರಿಯಾ ಮಹಿಳೆ
ಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ವಿಮಾಣ ನಿಲ್ದಾಣದ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್‌ ಅಫಾನ್ ಅಹಮ್ಮದ್ (25) ಬಂಧಿತ. ಈತ ವಿಮಾನ ನಿಲ್ದಾಣದ ಗ್ರೌಂಡ್‌ ಸ್ಟಾಫ್‌ ವಿಭಾಗದ ಖಾಸಗಿ ವಿಮಾನಯಾನ ಸಂಸ್ಥೆಯ ಗುತ್ತಿಗೆ ನೌಕರ.

ಬೆಂಗಳೂರಿನಿಂದ ಸೋಮವಾರ (ಜ.19) ಕೊರಿಯಾಗೆ ತೆರಳಲು ಟರ್ಮಿನಲ್‌–2ಕ್ಕೆ ಬಂದಿದ್ದ ಕೊರಿಯಾದ ಮಹಿಳೆ ಇಮಿಗ್ರೇಷನ್ ತಪಾಸಣೆ ಮುಗಿಸಿ ವಿಮಾನ ಹತ್ತಲು ಹೊರಟಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಮಹಿಳೆಯನ್ನು ಅಡ್ಡಗಟ್ಟಿದ ಆರೋಪಿ, ‘ನಿಮ್ಮ ಲಗೇಜ್‌ನಲ್ಲಿ ಸಮಸ್ಯೆ ಇದೆ. ಬೀಪ್‌ ಸೌಂಡ್ ಬರ್ತಾ
ಇದೆ’ ಎಂದು ಮರು ತಪಾಸಣೆ ನೆಪದಲ್ಲಿ ಪುರುಷರ ಶೌಚಾಲಯದ ಸಮೀಪ ಕರೆದೊಯ್ದಿದ್ದಾನೆ. ಸೂಟ್‌ಕೇಸ್ ಬದಲು ತಪಾಸಣೆ ನೆಪದಲ್ಲಿ ಮಹಿಳೆಯ ಖಾಸಗಿ ಅಂಗಗಳನ್ನು ಹಲವಾರು ಬಾರಿ ಸ್ಪರ್ಶಿಸಿದ್ದಾನೆ. ಕೊನೆಗೆ ಗಟ್ಟಿಯಾಗಿ ತಬ್ಬಿಕೊಂಡಿದ್ದಾನೆ. ಇದಕ್ಕೆ ವಿದೇಶಿ ಮಹಿಳೆ ಬಲವಾಗಿ ಪ್ರತಿರೋಧ ಒಡ್ಡಿದಾಗ ‘ಥ‍್ಯಾಂಕ್ಸ್‌’ ಎಂದು ಹೇಳಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ತಕ್ಷಣ ಮಹಿಳೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಅವರ ಸಲಹೆ ಮೇರೆಗೆ ವಿಮಾನ ನಿಲ್ದಾಣದ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಅಫಾನ್ ಅಹಮ್ಮದ್‌ನನ್ನು ಬಂಧಿಸಿದ್ದಾರೆ. ಘಟನೆ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.