
ಆನೇಕಲ್ ತಾಲ್ಲೂಕಿನ ಕಾಚನಾಯಕನಹಳ್ಳಿ ಮತ್ತು ಹೊಸಹಳ್ಳಿ ಗ್ರಾಮದ ಕೊಂಡಾರೆಡ್ಡಿ ಕೆರೆ ಅಭಿವೃದ್ಧಿ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನಯ್ ರೆಡ್ಡಿ ಭೂಮಿ ಪೂಜೆ ನೆರವೇರಿಸಿದರು
ಆನೇಕಲ್: ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಚನಾಯಕನಹಳ್ಳಿ ಮತ್ತು ಹೊಸಹಳ್ಳಿ ಗ್ರಾಮದ ಕೊಂಡಾರೆಡ್ಡಿ ಕೆರೆಯನ್ನು ಹೆನ್ನಾಗರ ಗ್ರಾಮ ಪಂಚಾಯಿತಿ ಮತ್ತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲು ಬುಧವಾರ ಭೂಮಿ ಪೂಜೆ ನೆರವೇರಿಸಲಾಯಿತು.
ಕೆರೆಯನ್ನು ಅಭಿವೃದ್ಧಿ ದೇವಾಲಯ ಅಭಿವೃದ್ಧಿ ಮಾಡಿದಷ್ಟೇ ಪುಣ್ಯ ದೊರೆಯುತ್ತದೆ. ಜಲಮೂಲ ರಕ್ಷಿಸಬೇಕಾದುದ್ದು ನಮ್ಮೆಲ್ಲರ ಜವಾಬ್ದಾರಿ. ಕೆರೆಗಳನ್ನು ಅಭಿವೃದ್ಧಿ ಪಡಿಸುವುದರಿಂದ ಗ್ರಾಮಗಳಲ್ಲಿ ಅಂತರ್ಜಲ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮತ್ತಷ್ಟು ಕೆರೆಗಳನ್ನು ಅಭಿವೃದ್ಧಿ ಪಡಿಸಲು ಆದ್ಯತೆ ನೀಡಲಾಗುವುದು. ಕಂಪನಿಗಳ ನೆರವು ಪಡೆದು ಕೆರೆಗಳ ಅಭಿವೃದ್ಧಿ ಕೈಜೋಡಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ವಿನಯ್ ರೆಡ್ಡಿ ತಿಳಿಸಿದರು.
ಕೊಂಡಾರೆಡ್ಡಿ ಕೆರೆಯು ಕಸ ಸುರಿಯುವ ಜಾಗವಾಗಿತ್ತು. ಹಾಳಾಗಿದ್ದು ಕೆರೆಗೆ ಮರುರೂಪ ನೀಡಲು ಗ್ರಾಮ ಪಂಚಾಯಿತಿಯು ಕ್ರಮ ವಹಿಸಿರುವುದು ಶ್ಲಾಘನೀಯ ಎಂದು ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ಹೇಳಿದರು.
ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ಭಾರ್ಗವ್ ಶ್ರೀನಾಥರೆಡ್ಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಉಮರಬ್ಬ, ಪಂಚಾಯಿತಿ ಉಪಾಧ್ಯಕ್ಷೆ ಭವಾನಿ ಅಂಬರೀಷ್, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್, ಸದಸ್ಯರಾದ ಮುನಿರತ್ನಮ್ಮ ಮುನಿರಾಜು, ರಾಮಸ್ವಾಮಿರೆಡ್ಡಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.