ADVERTISEMENT

ಆನೇಕಲ್‌ನಲ್ಲಿ ಭೂಸ್ವಾಧೀನ: ಸಿಡಿದೆದ್ದ ರೈತರು

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 2:59 IST
Last Updated 14 ಜುಲೈ 2025, 2:59 IST
<div class="paragraphs"><p><strong>ಆನೇಕಲ್ ತಾಲ್ಲೂಕಿನ ಬಿಕ್ಕನಹಳ್ಳಿಯಲ್ಲಿ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರು</strong></p></div>

ಆನೇಕಲ್ ತಾಲ್ಲೂಕಿನ ಬಿಕ್ಕನಹಳ್ಳಿಯಲ್ಲಿ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಪಾಲ್ಗೊಂಡಿದ್ದ ರೈತರು

   

ಆನೇಕಲ್: ಕೈಗಾರಿಕೆಗಳ ಸ್ಥಾಪನೆಗೆ ತಾಲ್ಲೂಕಿನ ಫಲವತ್ತಾದ ಕೃಷಿ ಭೂಮಿ ಸ್ವಾಧೀನಕ್ಕೆ ಕೆಐಎಡಿಬಿ ಹೊರಡಿಸಿರುವ ಆದೇಶ ವಿರೋಧಿಸಿ ಭಾನುವಾರ ಬಿಕ್ಕನಹಳ್ಳಿಯಲ್ಲಿ ರೈತ ಚಳವಳಿ ಸಮಾವೇಶ ನಡೆಯಿತು. 

ಆನೇಕಲ್‌ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಆಯೋಜಿಸಿದ್ದ ಸಮಾವೇಶದಲ್ಲಿ ಸರ್ಜಾಪುರ ಹೋಬಳಿಯ ನೂರಾರು  ರೈತರು ಪಾಲ್ಗೊಂಡಿದ್ದರು.

ADVERTISEMENT

‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆ ಅಡಿ ತಾಲ್ಲೂಕಿನ ರೈತರು ಮತ್ತು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು  ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಮೆರವಣಿಗೆ ನಡೆಸಿದರು. 

ಭೂಸ್ವಾಧೀನ ವಿರೋಧಿಸಿ ತಾಲ್ಲೂಕಿನ ಕೊಮ್ಮಸಂದ್ರ ಬಯಲು ಬಸವೇಶ್ವರ ದೇವಾಲಯದಿಂದ ಬೆಂಗಳೂರು ಫ್ರೀಡಂ ಪಾರ್ಕ್‌ವರೆಗೂ ಜುಲೈ 15ರಂದು ಬೈಕ್‌ ರ‍್ಯಾಲಿ ಆಯೋಜಿಸಲಾಗಿದೆ. 500ಕ್ಕೂ ಹೆಚ್ಚು ಬೈಕ್‌ಗಳಲ್ಲಿ ರೈತರು ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಘೋಷಿಸಲಾಯಿತು.

‘ಬನ್ನಿ ರೈತರೇ ಮನೆಯಿಂದ ಹೊರ ಬನ್ನಿ. ಅಕ್ರಮ ಖಂಡಿಸಿ. ರೈತರ ಭೂಮಿ ಕಬಳಿಸುತ್ತಿರುವ ಸರ್ಕಾರಕ್ಕೆ ಧಿಕ್ಕಾರ’ ಎಂದು ಘೋಷಣೆ ಕೂಗುವ ಮೂಲಕ ರೈತರು ಆಕ್ರೋಶ ಹೊರ ಹಾಕಿದರು. ನೂರಾರು ರೈತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ರಾಜ್ಯ ಸರ್ಕಾರ ಆನೇಕಲ್‌ ತಾಲ್ಲೂಕಿನ ಸಾವಿರಾರು ಎಕರೆ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದೆ. ಆಹಾರದ ಮೂಲವಾದ ರೈತರ ಭೂಮಿಯನ್ನೇ ಕಿತ್ತುಕೊಳ್ಳುವುದು ಯಾವ ನ್ಯಾಯ. ರೈತರು ಭೂಮಿಯ ಮಕ್ಕಳು. ಭೂತಾಯಿಯನ್ನು ಕಸಿದುಕೊಂಡರೆ ಬದುಕು ಕಸಿದುಕೊಂಡಂತೆ ಎಂದು  ಚಂದ್ರಾರೆಡ್ಡಿ ಹರಿಹಾಯ್ದರು. 

ಆನೇಕಲ್‌ ತಾಲ್ಲೂಕಿನ ಯಾವ ರೈತರೂ ಕೈಗಾರಿಕೆಗೆ ಭೂಮಿ ನೀಡಲು ಒಪ್ಪುತ್ತಿಲ್ಲ. ಸರ್ಕಾರ ಬೇಕಾದರೆ ಬರಡು ಭೂಮಿಯಲ್ಲಿ ಕೈಗಾರಿಕೆ ಸ್ಥಾಪಿಸಲಿ.  ಭೂಮಿ ಉಳಿಸಿಕೊಳ್ಳಲು ತಾಲ್ಲೂಕಿನಾದ್ಯಂತ ಶಾಂತಿಯುತ ಹೋರಾಟ, ಪ್ರತಿಭಟನೆ ಮತ್ತು ಜಾಗೃತಿ ಶಿಬಿರ  ನಡೆಸಲಾಗುತ್ತಿದೆ
ಎಂದರು.

ರೈತರ ಮೇಲಿನ ಶೋಷಣೆ ಹೆಚ್ಚಾಗಿದೆ. ಸರ್ಜಾಪುರ ಹೋಬಳಿಯ 1,450 ಎಕರೆ ಸ್ವಾಧೀನಕ್ಕೆ ನೋಟಿಸ್‌ ನೀಡಲಾಗಿದೆ. ಯಾವುದೇ ಕಾರಣಕ್ಕೂ ರೈತರ ಭೂಮಿ ನೀಡುವುದಿಲ್ಲ. ರಕ್ತ ಕೊಟ್ಟೇವು. ಭೂಮಿ ಕೊಡುವುದಿಲ್ಲ ಎಂದು ಆನೇಕಲ್‌ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಕಾಡುಅಗ್ರಹಾರ ಜಯಪ್ರಕಾಶ್‌ ಘೋಷಿಸಿದರು.

ಬಿ.ಸಿ.ಕುಸುಮಾಧರ್‌, ಬಿ.ಎನ್.ಮಂಜುನಾಥ್‌, ನವೀನ್‌ ಕುಮಾರ್‌, ಬಿ.ಆರ್‌.ಮಂಜುನಾಥ್‌, ನಾಗೇಶ್‌ ರೆಡ್ಡಿ, ಕೇಶವರೆಡ್ಡಿ, ರಘು, ಕೃಷ್ಣಾರೆಡ್ಡಿ, ವಿಶ್ವನಾಥ್‌, ಗೋಪಾಲರೆಡ್ಡಿ, ಮಧು, ಕುಮಾರ್‌, ಲೋಕೇಶ್‌ ಇದ್ದರು.

ಮತ್ತಷ್ಟು ಭೂಸ್ವಾಧೀನ?

ಮುತ್ತಾನಲ್ಲೂರು, ಹಂದೇನಹಳ್ಳಿ, ಸಮನಹಳ್ಳಿ, ಸೊಳ್ಳೆಪುರ, ಬಿಕ್ಕನಹಳ್ಳಿ, ಎಸ್‌.ಮೇಡಹಳ್ಳಿ, ಬಿ.ಹೊಸಹಳ್ಳಿ, ಚಿಕ್ಕತಿಮ್ಮಸಂದ್ರ, ಕೊಮ್ಮಸಂದ್ರ ಗ್ರಾಮಗಳ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ನೋಟಿಸ್‌ ನೀಡಲಾಗಿದೆ.ಸೂಲಿಕುಂಟೆ, ಅರೋಹಳ್ಳಿ, ಚೊಕ್ಕಸಂದ್ರ, ಗೋಪಸಂದ್ರ, ದೊಮ್ಮಸಂದ್ರ, ಯಮರೆ, ಕಾಡ ಅಗ್ರಹಾರದಲ್ಲಿ ಭೂಸ್ವಾಧೀನಕ್ಕೆ ಕೆಐಎಡಿಬಿ ಚಿಂತನೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ ಎಂದು ಹೋರಾಟಗಾರರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.