ADVERTISEMENT

ದೇವನಹಳ್ಳಿ| ಸಚಿವ ಸಂಪುಟದಲ್ಲಿ ಭೂ ಸ್ವಾಧೀನ ರದ್ದುಗೊಳಿಸಿ: ಹೋರಾಟಗಾರರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2025, 2:06 IST
Last Updated 25 ನವೆಂಬರ್ 2025, 2:06 IST
ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡರು ಭೂ ಸ್ವಾಧೀನ ರದ್ದು ಪಡಿಸಿರುವ ಆದೇಶ ಜಾರಿಗೆ ಒತ್ತಾಯಿಸಿದರು
ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಮುಖಂಡರು ಭೂ ಸ್ವಾಧೀನ ರದ್ದು ಪಡಿಸಿರುವ ಆದೇಶ ಜಾರಿಗೆ ಒತ್ತಾಯಿಸಿದರು   

ದೇವನಹಳ್ಳಿ: ಸರ್ಕಾರ ಭರವಸೆ ನೀಡಿದಂತೆ ನ.27ರಂದು ಸಚಿವ ಸಂಪುಟ ಸಭೆಯಲ್ಲಿ ಚನ್ನರಾಯಪಟ್ಟಣ ಹೋಬಳಿಯ ಭೂ ಸ್ವಾಧೀನ ಪ್ರಕ್ರಿಯೆಯನ್ನು ರದ್ದು ಪಡಿಸಬೇಕು. ಇಲ್ಲದಿದ್ದರೇ ಸರ್ಕಾರವೇ ರೈತರಿಗೆ ದ್ರೋಹ ಬಗೆದಂತೆ ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿ ಮುಖಂಡ ಕಾರಹಳ್ಳಿ ಶ್ರೀನಿವಾಸ್‌ ಹೇಳಿದರು.

ರೈತರ ಹೋರಾಟ 1,331ನೇ ದಿನಕ್ಕೆ ತಲುಪಿದೆ. ರಾಜ್ಯ ಸರ್ಕಾರವೂ ಭೂ ಸ್ವಾಧೀನ ಪ್ರಕ್ರಿಯೆ ರದ್ದುಪಡಿಸುವುದಾಗಿ ನಾಲ್ಕು ತಿಂಗಳ ಹಿಂದೆ ಘೋಷಿಸಿದ್ದರೂ ಅದು ಆದೇಶವಾಗಿ ಹೊರಬಂದಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಎಂದು ಆಕ್ರೋಶ ಹೊರಹಾಕಿದರು.

ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಂಯುಕ್ತ ಕರ್ನಾಟಕದ ವಿವಿಧ ಸಂಘಟನೆಗಳ ಜೊತೆಗೂಡಿ ನ.26ರಂದು ಪ್ರತಿಭಟನೆ ಹಮ್ಮಿಕೊಂಡಿದ್ದು, ರಾಜ್ಯ ಸರ್ಕಾರ ನ.27ರ ಸಚಿವ ಸಂಪುಟದಲ್ಲಿ ರೈತರ ಪರ ನಿರ್ಧಾರ ಕೈಗೊಳ್ಳದಿದ್ದಾರೆ ಅಹೋರಾತ್ರಿ ಧರಣಿ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ADVERTISEMENT

ವಿಧಾನಸೌಧದಲ್ಲಿ ರೈತರೊಂದಿಗೆ 1,198ನೇ ಹೋರಾಟದ ದಿನದಂದು ನಡೆದ ಸಭೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ರದ್ದು ಮಾಡುವುದಾಗಿ ಘೋಷಣೆ ಮಾಡಿ 133 ದಿನಗಳು ಕಳೆದರೂ ರೈತಪರ ನಿಲುವು ಹೊರಬಂದಿಲ್ಲ. ಈ ಧೋರಣೆ ಸಹಿಸಲು ಸಾಧ್ಯವಿಲ್ಲ ಎಂದರು.

ರಾಜ್ಯ ಸರ್ಕಾರವೂ ನುಡಿದಂತೆ ನಡೆಯಬೇಕು. ಮಾಧ್ಯಮಗಳಲ್ಲಿ ರೈತಪರವಾಗಿ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಪ್ರಚಾರ ಮಾಡಿರುವುದನ್ನು ಸರ್ಕಾರ ಆದೇಶದ ರೂಪದಲ್ಲಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.

ವೇಳೆ ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಗೋಪಿ, ನಲ್ಲಪನಹಳ್ಳಿ ನಂಜಪ್ಪ, ತಿಮ್ಮರಾಯಪ್ಪ ಸೇರಿದಂತೆ ಮುಖಂಡರು, ರೈತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.