ADVERTISEMENT

ದೇವನಹಳ್ಳಿ: ಭೂಸ್ವಾಧೀನಕ್ಕೆ ರೈತರ ಸಮಿತಿ ಬೆಂಬಲ

ಸರ್ಕಾರಿ ಪ್ರಾಯೋಜಿತ ಷಡ್ಯಂತ್ರ: ಭೂಸ್ವಾಧೀನ ವಿರೋಧಿ ಸಮಿತಿ ಟೀಕೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 1:51 IST
Last Updated 11 ಜುಲೈ 2025, 1:51 IST
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಳ್ಯ, ಚೀಮಾಚನಹಳ್ಳಿ ಗ್ರಾಮದಲ್ಲಿ ಭೂ ಸ್ವಾಧೀನ ವಿರೋಧ ಗ್ರಾಮ ಆಂದೋಲನ ಸಭೆ ನಡೆಯಿತು 
ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ಹೋಬಳಿಯ ಪಾಳ್ಯ, ಚೀಮಾಚನಹಳ್ಳಿ ಗ್ರಾಮದಲ್ಲಿ ಭೂ ಸ್ವಾಧೀನ ವಿರೋಧ ಗ್ರಾಮ ಆಂದೋಲನ ಸಭೆ ನಡೆಯಿತು    

ದೇವನಹಳ್ಳಿ: ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಚನ್ನರಾಯಪಟ್ಟಣ ಹೋಬಳಿಯ 13 ಹಳ್ಳಿಗಳ ಕೃಷಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಮುಂದಾಗಿರುವುದನ್ನು ದೇವನಹಳ್ಳಿ ಚನ್ನರಾಯಪಟ್ಟಣ ರೈತರ ಸಮಿತಿ ಬೆಂಬಲಿಸಿದೆ. 

ಗುರುವಾರ ಸುದ್ದಿಗೋಷ್ಠಿ ನಡೆಸಿದ ಸಮಿತಿಯ ಸದಸ್ಯ, ಕಾಂಗ್ರೆಸ್‌ ಮುಖಂಡ ಲಕ್ಷ್ಮೀನಾರಾಯಣಪ್ಪ ಹಾಗೂ ಇತರರು ‘ನಾವು ಭೂ ಸ್ವಾಧೀನದ ಪರ ಇದ್ದೇವೆ. ನಾವು ಭೂಮಿ ನೀಡಲು ಸಿದ್ಧ’ ಎಂದು ಘೋಷಿಸಿದರು. 

ಭೂಸ್ವಾಧೀನ ಕುರಿತು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜುಲೈ 15ರಂದು ಸಭೆ ಕರೆದಿದ್ದಾರೆ. ಈ ಹಂತದಲ್ಲಿ ವಿರೋಧಾಭಾಸದ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳು ಖಂಡಿಸಿವೆ. 

ADVERTISEMENT

ಮುಖ್ಯಮಂತ್ರಿ ಸಭೆಗೆ ಇನ್ನೂ ನಾಲ್ಕು ದಿನ ಬಾಕಿ ಇರುವಾಗ ಬೆಂಗಳೂರಿನಲ್ಲಿ ರೈತರ ಹೆಸರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಗುಂಪೊಂದು  ಶೇ.80ರಷ್ಟು ರೈತರು ಭೂಮಿ ಕೊಡಲು ಒಪ್ಪಿದ್ದಾರೆ ಎಂದು ತಿಳಿಸಿದ್ದಾರೆ. ಇದು ಸರ್ಕಾರಿ ಪ್ರಾಯೋಜಿತ ಹೇಳಿಕೆ. ಸುದ್ದಿಗೋಷ್ಠಿಯಲ್ಲಿ ಇದ್ದವರೆಲ್ಲ ಕಾಂಗ್ರೆಸ್‌ ಮುಖಂಡರು ಎಂದು ಚನ್ನರಾಯಪಟ್ಟಣ ಭೂ ಸ್ವಾಧೀನ ವಿರೋಧಿ ಸಮಿತಿ ದೂರಿದೆ.

ಭೂಸ್ವಾಧೀನ ವಿರೋಧಿಸಿ ಪೋಲನಹಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ರೈತರ ಸಭೆಯಲ್ಲಿ ಮಾತನಾಡಿದ ಕಾರಳ್ಳಿ ಶ್ರೀನಿವಾಸ್, ಸುದ್ದಿಗೋಷ್ಠಿ ನಡೆಸಿದವರಲ್ಲಿ ಹೆಚ್ಚಿನವರಿಗೆ ಭೂಮಿಯೇ ಇಲ್ಲ. ಅವರಲ್ಲಿ ಬಹುತೇಕರು ಭೂ ದಲ್ಲಾಳಿಗಳು ಎಂದು ಆರೋಪ ಮಾಡಿದರು.

‘ಇದರಿಂದ ನಾವು ಯಾವುದೇ ಕಾರಣಕ್ಕೂ ಎದೆಗುಂದಲ್ಲ. 13 ಹಳ್ಳಿಗಳ ಶೇ.80ರಷ್ಟು ರೈತರು ನಮ್ಮೊಂದಿಗೆ ದೃಢವಾಗಿ ನಿಂತಿದ್ದಾರೆ. ಅವರ ಯಾವ ಹುನ್ನಾರಗಳೂ ಫಲ ಕೊಡುವುದಿಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.