ADVERTISEMENT

ಗೆಲುವು ನಮ್ಮದೇ: ದೇವನಹಳ್ಳಿ ಭೂ ಸ್ವಾಧೀನ ವಿರುದ್ಧದ ಹೋರಾಟಗಾರರ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 15 ಜುಲೈ 2025, 17:19 IST
Last Updated 15 ಜುಲೈ 2025, 17:19 IST
   

ಬೆಂಗಳೂರು: ‘ದೇವನಹಳ್ಳಿ ತಾಲ್ಲೂಕು ಚನ್ನರಾಯಪಟ್ಟಣ ಹಾಗೂ ಇತರ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಕೈಬಿಟ್ಟಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸುತ್ತಿದ್ದಂತೆ, ಇತ್ತ ಭೂಸ್ವಾಧೀನ ವಿರೋಧಿ ಹೋರಾಟಗಾರರು ಕುಣಿದು, ಕುಪ್ಪಳಿಸಿದರು.

ಮುಖ್ಯಮಂತ್ರಿಯೊಂದಿಗಿನ ಸಭೆಯ ನಂತರ ಗಾಂಧಿ ಭವನದಲ್ಲಿ ಜಮಾಯಿಸಿದ ಹೋರಾಟಗಾರರು, ಗೆಲುವು ನಮ್ಮದೇ.. ಗೆಲುವು ನಮ್ಮದೇ ಎಂದಿಗೂ ಎಂದೆಂದಿಗೂ ಗೆಲುವು ನಮ್ಮದೇ.. ಎಂದು ಹಾಡುತ್ತಾ ಕುಣಿಯುತ್ತಾ, ಹಸಿರು ಟವಲ್ ಬೀಸುತ್ತಾ ಸಂಭ್ರಮಿಸಿದರು.

ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಟ ಪ್ರಕಾಶ್ ರಾಜ್, ‘13 ಹಳ್ಳಿಗಳಲ್ಲಿನ ಭೂ ಸ್ವಾಧೀನ ಕೈಬಿಡಲು ಸರ್ಕಾರ ಒಪ್ಪಿದ್ದು, ಜನರ ಹೋರಾಟದ ಶಕ್ತಿಯಿಂದ. ಅದನ್ನು ನಾವು ಉಳಿಸಿಕೊಳ್ಳಬೇಕಿದೆ. ರೈತರ ಈ ಗೆಲುವು ಮುಂದಿನ ಚಳವಳಿಗಳಿಗೆ ದಾರಿಯಾಗಬೇಕು. ಹೋರಾಟ ಶಕ್ತಿಯುತವಾಗಿ ನಿಂತಿದ್ದು ಯಾವುದೇ ಆಮಿಷಗಳಿಗೆ ಮಾರುಹೋಗದ ಅಲ್ಲಿನ ರೈತರ ಹಟದಿಂದ’ ಎಂದು ವಿಶ್ಲೇಷಿಸಿದರು.

ADVERTISEMENT

‘ಹೋರಾಟಗಾರರೊಂದಿಗೆ ಜನ ಧ್ವನಿಗೂಡಿಸಿದರೆ ಯಾವ ಸರ್ಕಾರವಾದರೂ ಮಾತು ಕೇಳಬೇಕು ಎಂದು ಈ ಹೋರಾಟ ಸಾಬೀತುಪಡಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ‌ಅವರು ಜನಪರ ನಾಯಕ ಎಂಬುದನ್ನು ಸಾಬೀತು ಮಾಡಿದ್ದಾರೆ. ಆದರೆ. ರೈತರ ಕೂಗು ಕೇಳಿಸಿಕೊಳ್ಳಲು ಮೂರು ವರ್ಷ ತೆಗೆದುಕೊಂಡರು’ ಎಂದರು.

ಸಂಯುಕ್ತ ಹೋರಾಟ-ಕರ್ನಾಟಕದ ಮುಖಂಡ ಬಡಗಲಪುರ ನಾಗೇಂದ್ರ ಮಾತನಾಡಿ, ‘ಇದೊಂದು ಐತಿಹಾಸಿಕ, ದಾಖಲೆಯ ಹೋರಾಟ. ಸರ್ಕಾರ ಭೂಸ್ವಾಧೀನ ಕೈಬಿಟ್ಟಿರುವುದು ಜನಚಳವಳಿಗೆ ಸಂದ ಜಯ’ ಎಂದು ಹೇಳಿದರು.

‘ರಾಜ್ಯದ ಎಲ್ಲ ಜನ ಚಳವಳಿಗಳು, ಹೋರಾಟಗಾರರು, ಕಾರ್ಮಿಕರು, ಬುದ್ದಿಜೀವಿಗಳು ಸಂಘಟಿತ ಹೋರಾಟ ಮಾಡಿದರು. ಸಾಹಿತಿಗಳು, ಕಲಾವಿದರೂ ಸೇರಿದಂತೆ ಹಲವರು ಪ್ರತ್ಯಕ್ಷ, ಪರೋಕ್ಷವಾಗಿ ದೇವನಹಳ್ಳಿಯ ರೈತರ ಹೋರಾಟದ ಪರವಾಗಿ ಕೆಲಸ ಮಾಡಿದ್ದರಿಂದ ಗೆಲುವು ಸಿಕ್ಕಿತು. ಮುಂದೆ ರಾಜ್ಯದ ಅಭಿವೃದ್ಧಿ ಮಾದರಿಗೆ ಶಿಬಿರವನ್ನು ಮಾಡಬೇಕು. ಈ ಮೂಲಕ ರಾಜ್ಯದ ನೆಲ-ಜಲವನ್ನು ಉಳಿಸುವ ಕೆಲಸವಾಗಬೇಕು’ ಎಂದರು.

ಸುದ್ದಿಗೋಷ್ಠಿಯಲ್ಲಿ ಹೋರಾಟಗಾರರಾದ ಚುಕ್ಕಿ ನಂಜುಂಡಸ್ವಾಮಿ, ನೂರ್ ಶ್ರೀಧರ್, ಕಾರಳ್ಳಿ ಶ್ರೀನಿವಾಸ್, ಎಸ್.ವರಲಕ್ಷ್ಮಿ, ವಿಜಯಮ್ಮ, ಚಿಮಾಚನಹಳ್ಳಿ ರಮೇಶ್, ಅಪ್ಪಣ್ಣ, ಡಿ.ಎಚ್.ಪೂಜಾರ್, ಟಿ.ಯಶವಂತ,  ಜೆ.ಎಂ. ವೀರಸಂಗಯ್ಯ, ಕೆ.ಎಸ್.ವಿಮಲ ಹಾಗೂ ದೇವನಹಳ್ಳಿಯ ರೈತರು ಉಪಸ್ಥಿತರಿದ್ದರು.

‘ನೀಲಿ, ಹಸಿರು, ಕೆಂಪು ಸೇರಿತು’

‘ನಾನು ದಲಿತರ ಹುಡುಗ. ದಲಿತ ಸಂಘರ್ಷ ಸಮಿತಿ ನನ್ನ ಸಂಘಟನೆ. ಚನ್ನರಾಯಪಟ್ಟಣ ಭೂಸ್ವಾಧೀನ ವಿರೋಧಿ ಹೋರಾಟದಲ್ಲಿ ಎಲ್ಲ ಸಮುದಾಯದ ಜನರು ನನ್ನ ನಾಯಕತ್ವವನ್ನು ಒಪ್ಪಿಕೊಂಡರು. ನನ್ನೊಳಗೆ ನೀಲಿ ಮಾತ್ರ ಇತ್ತು, ಈಗ ಕೆಂಪು ನನ್ನ ರಕ್ತವಾಗಿದೆ, ಹಸಿರು ಉಸಿರಾಗಿದೆ. ಈ ಗೆಲುವು ಜನ ಚಳವಳಿಗಳಿಗೆ ಶಕ್ತಿ ತುಂಬಲಿ.
ಕಾರಳ್ಳಿ ಶ್ರೀನಿವಾಸ್, ಸಂಚಾಲಕ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ

ಮಾತು ಉಳಿಸಿ ಕೊಂಡ ಸಿ.ಎಂ

‘ಸಿದ್ದರಾಮಯ್ಯ ಅವರು ಕೊಟ್ಟ ಮಾತು ಉಳಿಸಿ ಕೊಂಡಿದ್ದಾರೆ. ನಾವು ಕೃಷಿಯನ್ನು ಬಿಡುವುದಿಲ್ಲ. ಈಗ ನಮ್ಮ ಭೂಮಿ ನಮ್ಮ ಕೈಲಿದೆ, ಅದರಲ್ಲಿ ಬೆಳೆಯನ್ನು ಬೆಳೆದು ಜೀವನ ನಡೆಸುತ್ತೇವೆ. ಇಡೀ ರಾಜ್ಯದ ಜನ ಸಂಘಟನೆಗಳು, ಜನರು ನಮ್ಮ ಜೊತೆಗೆ ನಿಂತರು. ಅವರಿಗೆ ಧನ್ಯವಾದ ಹೇಳುತ್ತೇವೆ.
ನಾರಾಯಣಮ್ಮ, ರೈತ ಮಹಿಳೆ, ಚನ್ನರಾಯಪಟ್ಟಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.