
ಬನ್ನೇರುಘಟ್ಟ ಉದ್ಯಾನದ ಸಫಾರಿ ವಾಹನಗಳಿಗೆ ಜಾಲರಿ ಅಳವಡಿಸುತ್ತಿರುವುದು
ಆನೇಕಲ್: ಬನ್ನೇರುಘಟ್ಟ ಜೈವಿಕ ಉದ್ಯಾನದ ಸಫಾರಿ ವಾಹನದ ಮೇಲೆ ಚಿರತೆ ದಾಳಿ ನಡೆಸಿ ಮಹಿಳಾ ಪ್ರವಾಸಿಯೊಬ್ಬರನ್ನು ಗಾಯಗೊಳಿಸಿದ ಘಟನೆ ನಂತರ ಸಫಾರಿ ಬಸ್‌ಗಳಿಗೆ ಸುರಕ್ಷಿತ ಜಾಲರಿ ಅಳವಡಿಸಲಾಗಿದೆ.
ಸಫಾರಿ ವಾಹನಗಳಿಗೆ ಅಳವಡಿಸಿದ್ದ ಹಳೆಯ ಜಾಲರಿಗಳನ್ನು ತೆರವುಗೊಳಿಸಿ ಕಿಟಕಿಗಳಿಗೆ ಹೊಸ ಜಾಲರಿಗಳನ್ನು ಅಳವಡಿಸಿದ್ದಾರೆ. ಕಿಟಕಿಗೆ ಅಂಟಿಕೊಂಡಂತೆ ಈ ಜಾಲರಿ ಅಳವಡಿಸಲಾಗಿದ್ದು, ಯಾವುದೇ ಪ್ರಾಣಿ ಮುಖ ಇಲ್ಲವೇ ಕಾಲು ತೂರಿ ಸಾಧ್ಯವಿಲ್ಲದಂತೆ ಎಚ್ಚರಿಕೆ ವಹಿಸಲಾಗಿದೆ. ಸ್ಥಗಿತಗೊಂಡಿದ್ದ ಸಫಾರಿಯನ್ನು ಸೋಮವಾರದಿಂದ ಆರಂಭಿಸಲಾಗಿದೆ.
ನ.13ರಂದು ಬನ್ನೇರುಘಟ್ಟ ಉದ್ಯಾನಕ್ಕೆ ಕುಟುಂಬದೊಂದಿಗೆ ಬಂದಿದ್ದ ಚೆನ್ನೈನ ವಹೀದಾ ಬಾನು ಅವರು ಉದ್ಯಾನದ ವಾಹನದಲ್ಲಿ ಸಫಾರಿ ವೀಕ್ಷಿಸಲು ತೆರಳಿದ್ದರು. ಕಿಟಕಿ ಪಕ್ಕ ಕುಳಿತಿದ್ದ ಅವರ ಮೇಲೆ ಚಿರತೆ ದಾಳಿ ನಡೆಸಿತ್ತು.
ವಾಹನಕ್ಕೆ ಅಳವಡಿಸಿದ್ದ ಜಾಲರಿ ಹಾಗೂ ಕಿಟಕಿಯ ನಡುವಿನ ಒಂದು ಅಡಿ ಅಂತರದ ಜಾಗದಿಂದ ಚಿರತೆ ಮುಂದಿನ ಎರಡೂ ಕಾಲು ಹಾಗೂ ಮುಖ ತೂರಿಸಿತ್ತು. ಮಹಿಳೆಯ ಕೈಯನ್ನು ಮುಂಗಾಲುಗಳಿಂದ ಬಲವಾಗಿ ಹಿಡಿದು ಬಾಯಿ ಹಾಕಿತ್ತು. ಮಹಿಳೆಯ ಪಕ್ಕ ಕುಳಿತವರು ತಕ್ಷಣ ಆಕೆಯನ್ನು ಚಿರತೆಯ ಹಿಡಿತದಿಂದ ಬಿಡಿಸಿಕೊಂಡಿದ್ದರು. ಚಿರತೆ ಬಾಯಿಯೊಳಗೆ ಮಹಿಳೆಯ ದುಪ್ಪಟ್ಟಾ (ವೇಲ್) ಮಾತ್ರ ಸಿಕ್ಕಿತ್ತು.
ಈ ಘಟನೆ ನಂತರ ಎಚ್ಚೆತ್ತಕೊಂಡಿದ್ದ ಉದ್ಯಾನದ ಅಧಿಕಾರಿಗಳು ಹವಾನಿಯಂತ್ರಣ ವ್ಯವಸ್ಥೆ ಇಲ್ಲದ ವಾಹನಗಳ ಸಫಾರಿಯನ್ನು ಸ್ಥಗಿತಗೊಳಿಸಿದ್ದರು.
ಚಿರತೆ ಹಾಗೂ ಇನ್ನಿತರ ವನ್ಯಮೃಗಗಳ ಸಫಾರಿಯೊಳಗೆ ಹೇಗೆ ಎಚ್ಚರಿಕೆಯಿಂದ ಚಾಲನೆ ಮಾಡಬೇಕು ಹಾಗೂ ಯಾವ ಸುರಕ್ಷಿತ ಕ್ರಮಗಳನ್ನು ಅನುಸರಿಸಬೇಕು ಎಂಬ ಬಗ್ಗೆ ಸಫಾರಿ ವಾಹನ ಚಾಲಕರಿಗೆ ತರಬೇತಿ ನೀಡಲಾಗಿದೆ ಎಂದು ಉದ್ಯಾನದ ಕಾರ್ಯನಿರ್ವಹಣಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.