ADVERTISEMENT

ದೊಡ್ಡಬಳ್ಳಾಪುರ | ಮೇಕೆ ಹಿಂಡಿನ ಮೇಲೆ ಚಿರತೆ ದಾಳಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 11:12 IST
Last Updated 18 ಜನವರಿ 2023, 11:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದೊಡ್ಡಬೆಳವಂಗಲ (ದೊಡ್ಡಬಳ್ಳಾಪುರ): ತಾಲ್ಲೂಕಿನ ನರಸಯ್ಯನ ಅಗ್ರಹಾರ ಗ್ರಾಮ ಹೊರವಲಯದ ಬಯಲಿನಲ್ಲಿ ಮೇಯುತ್ತಿದ್ದ ಮೇಕೆಗಳ ಹಿಂಡಿನ ಮೇಲೆ ಎರಡು ಚಿರತೆಗಳು ಮಂಗಳವಾರ ದಾಳಿ ನಡೆಸಿದ್ದು, ಎರಡು ಮೇಕೆಗಳನ್ನು ಎಳೆದೊಯ್ದಿವೆ.

ಗ್ರಾಮದ ಕಮಲ ಅವರು ಬಯಲಿನಲ್ಲಿ ಮೇಕೆಗಳನ್ನು ಮೇಯಿಸುವ ವೇಳೆ ದಾಳಿ ನಡೆಸಿರುವ ಚಿರತೆಗಳು ತಲಾ ಒಂದೊಂದು ಮೇಕೆಯನ್ನು ಎಳೆದೊಯ್ದಿವೆ. ಇದರಿಂದ ಆತಂಕಕ್ಕೆ ಒಳಗಾದ ಅವರು ಗ್ರಾಮಕ್ಕೆ ಓಡಿ ಬಂದು ಮಾಹಿತಿ ನೀಡಿದ್ದಾರೆ. ಜನರು ಸ್ಥಳಕ್ಕೆ ತೆರಳುವ ವೇಳೆಗೆ ಅವುಗಳು ಮೇಕೆಗಳು ಮೇಯುತ್ತಿದ್ದ ಸ್ಥಳದಿಂದ ಪರಾರಿಯಾಗಿವೆ.

ಈ ವ್ಯಾಪ್ತಿಯಲ್ಲಿ ಎರಡು ಚಿರತೆಗಳು ಗ್ರಾಮಸ್ಥರಿಗೆ ಕಂಡುಬಂದಿದ್ದ ಹಿನ್ನೆಲೆಯಲ್ಲಿ ಅವುಗಳ ಸೆರೆಗೆ ಆಲೇನಹಳ್ಳಿ ಬಳಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನ್ ಅಳವಡಿಸಿದ್ದಾರೆ. ಆದರೆ, ಚಿರತೆಗಳು ಬೋನ್ ಅಳವಡಿಸಿರುವ ಗ್ರಾಮ ಸಮೀಪದ ನರಸಯ್ಯನ ಅಗ್ರಹಾರ ಬಳಿ ಓಡಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತ‌ಂಕ ಸೃಷ್ಟಿಯಾಗಿದೆ.

ADVERTISEMENT

‘ಚಿರತೆಗಳ ಹಾವಳಿಯಿಂದ ಗ್ರಾಮಸ್ಥರಲ್ಲಿ ಆತಂಕ ಹೆಚ್ಚಾಗಿದೆ. ಈ ವ್ಯಾಪ್ತಿಯಲ್ಲಿ ಇವುಗಳ ಹಾವಳಿ ಮಿತಿ ಮೀರಿದೆ. ಅವುಗಳ ಸೆರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ತ್ವರಿತ ಕ್ರಮಕೈಗೊಳ್ಳಬೇಕು’ ಎಂದು ಮುಖಂಡ ಮನು ಮನವಿ
ಮಾಡಿದ್ದಾರೆ.

ಒಂದು ತಿಂಗಳ ಹಿಂದೆ ಕೊನಘಟ್ಟ, ಘಾಟಿ ಸುಬ್ರಹ್ಮಣ್ಯ ರಸ್ತೆ, ಕುರುಬರಹಳ್ಳಿ ರಸ್ತೆಯಲ್ಲಿ ಸಂಚರಿಸಿ ಆತಂಕ ಸೃಷ್ಟಿಸಿದ್ದ ಚಿರತೆಗಳು ನರಸಯ್ಯನ ಅಗ್ರಹಾರದಲ್ಲಿ ಮೇಕೆ ಹಿಂಡಿನ ಮೇಲೆ ದಾಳಿ ನಡೆಸಿರುವುದು ಜನರಲ್ಲಿ ಮತ್ತೆ ಆತಂಕ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.