ADVERTISEMENT

ದೊಡ್ಡಬಳ್ಳಾಪುರ | ನೇಕಾರಿಕೆ ಅಸಂಘಟಿತ ವಲಯವೇ ?

ನೇಕಾರರು ಮತ್ತು ಕಾರ್ಮಿಕರಿಗೆ ಪ್ರತ್ಯೇಕ ಪರಿಹಾರ ಘೋಷಣೆಗೆ ಹಕ್ಕೋತ್ತಾಯ

ನಟರಾಜ ನಾಗಸಂದ್ರ
Published 20 ಮೇ 2020, 8:26 IST
Last Updated 20 ಮೇ 2020, 8:26 IST
ವೈಡಿಂಗ್‌ ಹಾಕುವಲ್ಲಿ ನಿರತ ಮಹಿಳೆ
ವೈಡಿಂಗ್‌ ಹಾಕುವಲ್ಲಿ ನಿರತ ಮಹಿಳೆ   

ದೊಡ್ಡಬಳ್ಳಾಪುರ: ನೇಕಾರಿಕೆಯಲ್ಲಿ ಯಾವುದೇ ರೀತಿ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ಮಾತ್ರ ನೇಕಾರರ ಸಮಸ್ಯೆಗಳ ಬಗ್ಗೆ ಮಾತ್ರ ಹೋರಾಟ ನಡೆಸುತ್ತಾರೆ. ಆದರೆ, ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರ ಕುರಿತು ಯಾರೂ ಮಾತನಾಡುವುದಿಲ್ಲ. ನಾವೇಕೆ ಹೋರಾಟಕ್ಕೆ ಬರಬೇಕು ಎನ್ನುವ ಪ್ರಶ್ನೆ ಮುನ್ನೆಲೆಗೆ ಬರುತ್ತದೆ. ಸಮಸ್ಯೆಗೆ ಅಲ್ಪಸ್ವಲ್ಪ ಪರಿಹಾರ ಸಿಗುತ್ತಿದ್ದಂತೆಯೇ ನೇಕಾರರು, ಕಾರ್ಮಿಕರು ಬೇರೆ ಎನ್ನುವ ಕಂದಕ ಹಾಗೆಯೇ ಉಳಿಯುತ್ತದೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಈ ಎರಡೂ ಬೇರೆಯೇ. ಇಬ್ಬರಿಗೂ ಪ್ರತ್ಯೇಕವಾಗಿ ಸರ್ಕಾರ ಪರಿಹಾರ ಘೋಷಣೆ ಮಾಡಬೇಕು. ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರಿಗೂ ಪರಿಹಾರ ಸಿಗಬಹುದು ಎನ್ನುವ ವಾದ ಮುನ್ನೆಲೆಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರ ವಿದ್ಯುತ್‌ ಮಗ್ಗಗಳ ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರಿಗೂ ₹2,000 ಪರಿಹಾರ ನೀಡುವುದಾಗಿ ತಿಳಿಸಿದೆ.

25 ಸಾವಿರ ವಿದ್ಯುತ್‌ ಮಗ್ಗ:ವಿವಿಧ ಸಂಘಟನೆಗಳ ಅಂಕಿ ಅಂಶದ ಪ್ರಕಾರ ನಗರದಲ್ಲಿ ಸದ್ಯಕ್ಕೆ 25ಸಾವಿರ ವಿದ್ಯುತ್‌ ಮಗ್ಗಗಳಿವೆ ಎಂದು ಅಂದಾಜಿಸಲಾಗಿದೆ. ಒಂದು ವಿದ್ಯುತ್‌ ಮಗ್ಗದಿಂದ ಒಂದು ಸೀರೆ ಸಿದ್ಧವಾಗಿ ಹೊರಬರಲು ಬಣ್ಣ ಮಾಡುವುದು, ಹುರಿ ಮಿಷನ್‌ನಲ್ಲಿ ರೇಷ್ಮೆ ಧಾರ ಮಾಡುವುದು, ವೈಡಿಂಗ್‌, ಕಂಡಿಗೆ ಹಾಕುವುದು, ವಾರ್ಪು ಹಾಕುವುದು, ವಾರ್ಪು ಕೆಚ್ಚುವುದು, ಅಚ್ಚು ರೀಡ್‌ ತುಂಬುವವರು, ಕುಚ್ಚು ಕಟ್ಟುವುದು, ಕಾರ್ಡ್‌ಪಂಚಿಂಗ್‌, ಮಗ್ಗ ರೀಪೇರಿ ಮಾಡುವವರು, ಸೀರೆ ನೇಯುವವರು, ಸೀರೆ ಮಡುಚುವವರು, ಬುಟ್ಟಾಕಟ್ಟಿಂಗ್, ಪಾಲಿಷ್‌ ಮಾಡುವುದು ಹೀಗೆ ಹತ್ತಾರು ಕೆಲಸಗಳನ್ನು ಮಾಡುವ ಒಟ್ಟು ಸಮೂಹ ಸೀರೆ ಎಂಬ ಪರದೆ ಹಿಂದೆ ನಿಂತು ಕೆಲಸ ಮಾಡಿದರೆ ಮಾತ್ರ ಗುಣಮಟ್ಟದ ಸೀರೆ ಗ್ರಾಹಕರ ಕೈ ಸೇರಲು ಸಾಧ್ಯ.

ADVERTISEMENT

25ಸಾವಿರ ವಿದ್ಯುತ್‌ ಮಗ್ಗಗಳು ನಗರದಲ್ಲಿ ಇವೆ. ಕನಿಷ್ಠ 50ರಿಂದ 60ಸಾವಿರ ಜನ ಕಾರ್ಮಿಕರು ನೇಕಾರಿಕೆಯಲ್ಲಿ ತೊಡಗಿದ್ದಾರೆ. ಇದರಲ್ಲಿ ಒಂದಿಷ್ಟು ಪುರುಷರಷ್ಟೇ ಸರಿಸಮಾನವಾಗಿ ಮಹಿಳಾ ಕಾರ್ಮಿಕರೂ ಇದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರೂ ಇಲ್ಲಿವರೆಗೂ ಎಲ್ಲೂ ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರ ಬಗ್ಗೆ ಅಂಕಿ ಅಂಶವಾಗಲಿ, ದಾಖಲಾತಿಯಾಗಲಿ ಇಲ್ಲ. ಸರ್ಕಾರದ ಅಸಂಘಟಿತ ಕಾರ್ಮಿಕ ನಿಗಮದಲ್ಲೂ ನೇಕಾರಿಕೆಯಲ್ಲಿ ತೊಡಗಿರುವ ಕಾರ್ಮಿಕರನ್ನು ಅಸಂಘಟಿತರು ಎಂದು ಗುರುತಿಸಿಲ್ಲ.

ಸರ್ಕಾರದ ಪರಿಹಾರ: ಸರ್ಕಾರದ ಬಳಿ ಎಷ್ಟು ಜನ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ರೈತರು, ಕಟ್ಟಡ ಕೂಲಿ ಕಾರ್ಮಿಕರು (ಕಾರ್ಮಿಕ ಇಲಾಖೆಯಲ್ಲಿ ನೋಂದಾಯಿಸಿದ್ದರೆ) ಇದ್ದಾರೆ ಎಂಬ ಮಾಹಿತಿ ಇದೆ. ಆ ಪ್ರಕಾರ ಸುಲಭವಾಗಿ ಪ್ಯಾಕೇಜ್ ಅಥವಾ ನಿಯಮಗಳನ್ನು ಸರ್ಕಾರ ರೂಪಿಸುತ್ತದೆ. ಪ್ರಸ್ತುತ ಎಷ್ಟು ಜನ ನೇಕಾರರು ಇದ್ದಾರೆ ಎಂಬ ಮಾಹಿತಿಯೇ ಇಲ್ಲದಾಗಿದೆ. ಹೀಗಾಗಿಯೇ 1.25 ಲಕ್ಷ ನೇಕಾರರಿಗೆ ಮಾತ್ರ ಪರಿಹಾರ ಘೋಷಣೆ ಮಾಡಿದೆ. ಸರ್ಕಾರ ವಿಶೇಷ ಪ್ಯಾಕೇಜ್ ಅಥವಾ ಹಣಕಾಸಿನ ನೆರವನ್ನು ಅಂದಾಜು ಮಾಡುವುದಾದರೂ ಹೇಗೆ? ಇಷ್ಟು ದಿನಗಳ ಕಾಲ ನೇಕಾರರ ಪರವಾಗಿ ಹೋರಾಟ ಮಾಡಿರುವ ಯಾವುದೇ ಸಂಘಟನೆಗಳು ಕಾರ್ಮಿಕರು, ನೇಕಾರಿಕೆ ಮಾಲೀಕರ ಬಗ್ಗೆ ಒಂದು ಪಟ್ಟಿ ಮಾಡುವ ಅಥವಾ ಜವಳಿ ಇಲಾಖೆ ವತಿಯಿಂದ ಮಾಡಿಸುವ ಕೆಲಸವನ್ನೇ ಮಾಡಿಸಿಲ್ಲ. ಈಗ ಪರಿಹಾರ ನೀಡಿ ಅಂದರೆ ಸರ್ಕಾರ ನೇಕಾರಿಕೆಯಲ್ಲಿನ ಕಾರ್ಮಿಕರು ಯಾರು ಎಂದು ಗುರುತಿಸುವುದಾದರು ಹೇಗೆ ಎನ್ನುತ್ತಾರೆ ಐಟಿ ಎಂಜಿನಿಯರ್‌ ರಾಜಶೇಖರ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.