ADVERTISEMENT

ಗೋ ಬ್ಯಾಕ್‌ | ಗೆಲುವು ಹೇಗೆ ಸಾಧ್ಯ- ಡಾ.ಕೆ. ಸುಧಾಕರ್‌ಗೆ ಕುಟುಕಿದ ರಕ್ಷಾ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 18:55 IST
Last Updated 2 ಏಪ್ರಿಲ್ 2024, 18:55 IST
ದೊಡ್ಡಬಳ್ಳಾಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾರಾಮಯ್ಯ ಗೆಲುವಿಗಾಗಿ ಕಾರ್ಯಕರ್ತರಲ್ಲಿ  ಮನವಿ ಮಾಡಿದರು
ದೊಡ್ಡಬಳ್ಳಾಪುರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಮುಖಂಡರ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಕ್ಷಾರಾಮಯ್ಯ ಗೆಲುವಿಗಾಗಿ ಕಾರ್ಯಕರ್ತರಲ್ಲಿ  ಮನವಿ ಮಾಡಿದರು   

ದೊಡ್ಡಬಳ್ಳಾಪುರ:  ‘ರಾಜ್ಯದಲ್ಲಿ ಸಚಿವರಾಗಿ ಇವರು ಮಾಡಿರುವ ಕೆಲಸಗಳನ್ನು ನೋಡಿ ಯಲಹಂಕ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೇ ಗೋ ಬ್ಯಾಕ್‌ ಚಳವಳಿ ನಡೆಸುತ್ತಿರುವಾಗ ಇವರ ಗೆಲುವು ಹೇಗೆ ಸಾಧ್ಯ’  ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರ ಹೆಸರು ಹೇಳದೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ರಕ್ಷಾರಾಮಯ್ಯ ಕುಟುಕಿದರು.

ನಗರದಲ್ಲಿ ಮಂಗಳವಾರ ನಡೆದ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ‘ಸ್ವಪಕ್ಷದವರೇ ಇವರ ಕೆಲಸಗಳನ್ನು ಮೆಚ್ಚಿಕೊಳ್ಳುತ್ತಿಲ್ಲ ಅಂದ ಮೇಲೆ ಬೇರೆ ಪಕ್ಷದವರಿಗೆ ಯಾವ ರೀತಿ ಉತ್ತರಿಸಲು ಸಾಧ್ಯ’ ಎಂದೂ ಪ್ರಶ್ನಿಸಿದರು.

‘ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದ ನಂತರ ತಾನು ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯನ್ನು ಈಡೇರಿಸುವ ಮೂಲಕ ಮತದಾರರಿಗೆ ನೀಡಿದ್ದ ಮಾತು ಉಳಿಸಿಕೊಂಡಿದೆ. ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಹತ್ತು ವರ್ಷಗಳು ಕಳೆದಿದ್ದರೂ ದೇಶದ ಜನರಿಗೆ ನೀಡಿದ್ದ ಯಾವುದೇ ಭರವಸೆಗಳನ್ನು ಈಡೇರಿಸದೆ ಕಾಂಗ್ರೆಸ್‌ ಗ್ಯಾರಂಟಿಗಳನ್ನು ನಕಲು ಮಾಡಿಕೊಂಡು ಚುನಾವಣೆಗೆ ಮತದಾರರ ಮುಂದೆ ಬಂದಿದೆ’ ಎಂದು ಆರೋಪಿಸಿದರು.

ADVERTISEMENT

‘ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಹತ್ತು ವರ್ಷಗಳಿಂದಲೂ ಡಾ.ಕೆ.ಸುಧಾಕರ್‌ ಅವರ ದ್ವೇಷ ರಾಜಕಾರಣದಲ್ಲಿ ಸಿಲುಕಿ ಅಲ್ಲಿನ ಹಲವಾರು ಜನರ ಮೇಲೆ ಪೊಲೀಸ್‌ ಠಾಣೆಗಳಲ್ಲಿ ವಿನಾಕಾರಣ ದೂರುಗಳು ದಾಖಲಾಗಿವೆ. ಉದ್ಯೋಗಕ್ಕಾಗಿ ಪ್ರಶ್ನಿಸಿದ ಯುವಕರ ಮೇಲೆ ಕೇಸ್‌ಗಳನ್ನು ಹಾಕಿಸಿ ನ್ಯಾಯಾಲಯಗಳಿಗೆ ಅಲೆಯುವಂತೆ ಮಾಡಿದ್ದಾರೆ. ಆದರೆ ಹತ್ತು ತಿಂಗಳಲ್ಲಿ ಯಾರೊಬ್ಬರ ಮೇಲೂ ರಾಜಕೀಯ ದ್ವೇಷಕ್ಕಾಗಿ ಯಾವುದೇ ದೂರುಗಳು ದಾಖಲಾಗಿಲ್ಲ. ಜನರು ನೆಮ್ಮದಿಯ ಜೀವನ ಮಾಡುತ್ತಿದ್ದಾರೆ. ದೊಡ್ಡಬಳ್ಳಾಪುರಕ್ಕೆ ಮೆಟ್ರೊ ರೈಲು ಯೋಜನೆ ಜಾರಿಗೆ ಒತ್ತಾಯಿಸಲಾಗುವುದು. ಎತ್ತಿನಹೊಳೆ ಯೋಜನೆ ಕಾಂಗ್ರೆಸ್ ಸರ್ಕಾರದ ಅವಧಿಯ ಪ್ರಾರಂಭವಾಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿಯೇ ಪೂರ್ಣವಾಗಲಿದೆ’ ಎಂದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಜಿಲ್ಲೆ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ‘ಇಡೀ ದೇಶದಲ್ಲಿ ದೊಡ್ಡ ಯೋಜನೆಗಳನ್ನು ಜಾರಿಗೊಳಿಸಿರುವುದು ಕಾಂಗ್ರೆಸ್ ಪಕ್ಷ ಎನ್ನುವುದು ಮತದಾರರು ಸದಾ ನೆನಪಿಟ್ಟುಕೊಳ್ಳಬೇಕು. ನಮ್ಮ ಗ್ಯಾರಂಟಿ ಯೋಜನೆಗಳು ರಾಜ್ಯದ 4.5 ಕೋಟಿ ಜನತೆಗೆ ಒಂದಲ್ಲ ಒಂದು ರೀತಿಯಲ್ಲಿ ತಲುಪುತ್ತಿವೆ. ಈ ಬಾರಿ ಪಕ್ಷದ ಪ್ರತಿ ಮುಖಂಡರು ಹಾಗೂ ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ಕಾಂಗ್ರೆಸ್ ಪಕ್ಷಕ್ಕೆ ಹೆಮ್ಮೆಯಿಂದ ಮತ ಕೇಳಿ’ ಎಂದರು.

‘ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳಲ್ಲಿ ಯುವಕರಿಗೆ ಮನ್ನಣೆ ನೀಡಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲುತ್ತಾರೆ ಎನ್ನುವ ವಿಶ್ವಾಸವಿದೆ. ಯುವ ಮುಖಂಡ ರಕ್ಷಾ ರಾಮಯ್ಯ, ರಾಜಕೀಯ ಹಾಗೂ ಸಮಾಜ ಸೇವೆಯ ಹಿನ್ನೆಲೆಯಿಂದ ಬಂದವರಾಗಿದ್ದು,ಅವರನ್ನು ಯುವ ಸಮುದಾಯ ಬೆಂಬಲಿಸಬೇಕಿದೆ’ ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಟಿ.ವೆಂಕಟರಮಣಯ್ಯ ಮಾತನಾಡಿ, ತಾಲ್ಲೂಕಿನಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿಯೇ ಅಭಿವೃದ್ಧಿ ಕೆಲಸಗಳಾಗಿದ್ದು. ಎತ್ತಿನಹೊಳೆ ಯೋಜನೆ, ಕೆ.ಸಿ.ವ್ಯಾಲಿ ಅಲ್ಲದೇ ವೃಷಭಾವತಿ ಯೋಜನೆಗಳು ಜಾರಿಯಾಗಿವೆ. ಜಿಲ್ಲಾಸ್ಪತ್ರೆಗಾಗಿ ನಾನು ಸತತ ಹೋರಾಟ ನಡೆಸಿದ್ದೆ. ಆದರೆ ಈ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡಿದೆ ಎಂದು ಈಗಿನ ಶಾಸಕರು ಹೇಳುತ್ತಿದ್ದಾರೆ. ಜಿಲ್ಲಾಸ್ಪತ್ರೆ ಮಂಜೂರು ಮಾಡಲು ಕೆ.ಎಚ್.ಮುನಿಯಪ್ಪ ಅವರು ಕಾರಣರಾಗಿದ್ದಾರೆ ಎಂದರು.

ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ರವಿ,ದೊಡ್ಡಬಳ್ಳಾಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಿ.ಚುಂಚೇಗೌಡ, ಕೆಪಿಸಿಸಿ ಸದಸ್ಯರಾದ ಜಿ.ಲಕ್ಷ್ಮೀಪತಿ, ಬಿ.ಜಿ.ಹೇಮಂತರಾಜು, ಕಾಂಗ್ರೆಸ್ ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಬೈರೇಗೌಡ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಪಿ.ಜಗನಾಥ್, ಕಸಬಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪಿವೆಂಕಟೇಶ್, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೇವತಿ ಅನಂತ ರಾಮ್, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಕಾಂತರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ವಿಶ್ವನಾಥರೆಡ್ಡಿ, ಮುಖಂಡರಾದ ಡಾ.ರಾಮೋಜಿ ಗೌಡ, ಸಿ.ಡಿ.ಸತ್ಯನಾರಾಯಣ ಗೌಡ, ಬಿ.ಎಚ್‌. ಕೆಂಪಣ್ಣ, ಕೆ.ಎಂ.ಕೃಷ್ಣಮೂರ್ತಿ, ಜಗದೀಶ್‌ರೆಡ್ಡಿ, ಡಿ.ಸಿದ್ದರಾಮಯ್ಯ, ಆದಿತ್ಯ ನಾಗೇಶ್, ರಾಮಕೃಷ್ಣ, ಬಿ.ಮುನಿರಾಜು, ಆಂಜನಮೂರ್ತಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.