ದೇವನಹಳ್ಳಿ: ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಕರ್ನಾಟಕ ಮಾದಿಗ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ದೇವನಹಳ್ಳಿ ತಾಲ್ಲೂಕಿನ ಜಿಲ್ಲಾಡಳಿತ ಭವನದ ಆವರಣದಲ್ಲಿ ಶುಕ್ರವಾರ ಅರೆ ಬೆತ್ತಲೆಯಾಗಿ ಪ್ರತಿಭಟನೆ ನಡೆಯಿತು.
ಚಪ್ಪರದಕಲ್ಲು ವೃತ್ತದಿಂದ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಮಾದಿಗ ಸಮುದಾಯದ ಮುಖಂಡರು ಅರೆ ಬೆತ್ತಲೆಯಾಗಿ ಪಾದಯಾತ್ರೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಾಮಾಯಿಸಿ ಒಳ ಮೀಸಲಾತಿ ಜಾರಿಗೆ ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಒಳ ಮೀಸಲಾತಿ ಜಾರಿ ವಿಚಾರದಲ್ಲಿ ರಾಜ್ಯ ಸರ್ಕಾರ ಅನುಸರಿಸುತ್ತೀರುವ ವಿಳಂಬ ನೀತಿ ಸಹಿಸಲು ಸಾಧ್ಯವಿಲ್ಲ. ಆಗಸ್ಟ್ 15ಕ್ಕೂ ಮುನ್ನವೇ ಒಳಮೀಸಲಾತಿಯನ್ನು ಜಾರಿಗೊಳಿಸದೇ ಇದ್ದರೇ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದು ಕರ್ನಾಟಕ ಮಾದಿಗ ದಂಡೋರದ ರಾಜ್ಯಾಧ್ಯಕ್ಷ ಶಂಕರಪ್ಪ ಎಚ್ಚರಿಸಿದರು.
ಸುಪ್ರೀಂ ಕೋರ್ಟ್ ಒಳಮೀಸಲಾತಿ ಜಾರಿ ಮಾಡುವಂತೆ ತೀರ್ಪು ನೀಡಿ ಒಂದು ವರ್ಷ ಕಳೆದರೂ ಅದನ್ನು ಜಾರಿ ಮಾಡುವ ಉತ್ಸಹ ರಾಜ್ಯ ಸರ್ಕಾರದಲ್ಲಿ ಇದ್ದಂತೆ ಕಾಣುತ್ತಿಲ್ಲ. ನೀಡಿರುವ ಗಡುವಿನ ಒಳಗೆ ಮೀಸಲಾತಿ ಜಾರಿ ಆಗದಿದ್ದರೆ ರಾಜ್ಯದಾದ್ಯಂತ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು, ಕಾರ್ಮಿಕರು, ವಕೀಲರು, ಮಹಿಳೆಯರು ಬೀದಿಗಿಳಿದು ಪ್ರತಿಭಟಿಸುತ್ತೇವೆ ಎಂದರು.
ದಶಕದಿಂದ ಪರಿಶಿಷ್ಟ ಸಮುದಾಯದದ ಕೆಲ ಪಂಗಡಗಳು ಸರಿಯಾದ ಮೀಸಲಾತಿ ಸಿಗದೆ ತೀರಾ ಹಿಂದುಳಿದಿವೆ. ಒಳ ಮೀಸಲಾತಿಗಾಗಿ ಕಳೆದ 35 ವರ್ಷಗಳಿಂದ ನಿರಂತರ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಸರ್ಕಾರದ ವಿಳಂಬ ಧೋರಣೆಯೂ ಸಮುದಾಯದಲ್ಲಿ ತೀವು ಅಸಮಾಧಾನ ಮತ್ತು ಆತಂಕಕ್ಕೆ ಕಾರಣವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಾದಿಗ ಸಮುದಾಯದ ಮುಖಂಡರಾದ ಟಿ.ಭರತ್, ರಮೇಶ್ ಚಕ್ರವರ್ತಿ, ಮಲ್ಲೇಪುರ ಕದೀರಪ್ಪ, ಮುದುಗುರ್ಕಿ ಮೂರ್ತಿ, ಕಾರಹಳ್ಳಿ ಕೇಶವ, ವೆಂಕಟೇಶ್ ಪ್ರಭು ಇದ್ದರು.
ಸುಪ್ರೀಂ ಕೋರ್ಟ್ ಒಳ ಮೀಸಲಾತಿ ಜಾರಿಗೆ ತೀರ್ಪು ನೀಡಿದ ಕೆಲವೇ ದಿನದಲ್ಲಿ ದೇಶದ ಬಹಳಷ್ಟು ರಾಜ್ಯಗಳು ಒಳ ಮೀಸಲಾತಿ ಜಾರಿಗೆ ತಂದಿವೆ. ರಾಜ್ಯ ಸರ್ಕಾರ ನ್ಯಾಯಾಲಯದ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೊಳ್ಳಿಸಲು ಮೀನಾಮೇಷ ಎಣಿಸುತ್ತಿದೆ ಎಂದು ಪ್ರತಿಭಟನಕಾರರು ದೂರಿದರು. ಸರ್ಕಾರಕ್ಕೆ ಎಚ್ಚರಿಕೆ ನೀಡಲು ಅರೆ ಬೆತ್ತಲೆಯಾಗಿ ಎಲ್ಲರು ಪ್ರತಿಭಟನೆ ಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಉಗ್ರವಾಗಿ ಪ್ರತಿಭಟಿಸಿ ಪರಿಶಿಷ್ಟ ಸಮುದಾಯದವರ ಶಕ್ತಿ ಪ್ರದರ್ಶನ ಮಾಡುವ ಮೂಲಕ ಸರ್ಕಾರವನ್ನು ಕೆಳೆಗಿಳಿಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.