ADVERTISEMENT

ದೇವನಹಳ್ಳಿ: ಸರ್ಕಾರಿ ಶಾಲೆಯಲ್ಲಿ ಸುಗ್ಗಿ ಹಬ್ಬದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 12 ಜನವರಿ 2024, 15:19 IST
Last Updated 12 ಜನವರಿ 2024, 15:19 IST
 ವಿಜಯಪುರ ಹೋಬಳಿ ನಾರಾಯಣಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು
 ವಿಜಯಪುರ ಹೋಬಳಿ ನಾರಾಯಣಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಗ್ಗಿ ಹಬ್ಬ ಸಂಕ್ರಾಂತಿಯನ್ನು ಸಾಂಪ್ರದಾಯಿಕವಾಗಿ ಆಚರಿಸಲಾಯಿತು   

ವಿಜಯಪುರ(ದೇವನಹಳ್ಳಿ): ಹೋಬಳಿಯ ನಾರಾಯಣಪುರ ಸರ್ಕಾರಿ ಶಾಲೆಯ ಆವರಣದಲ್ಲಿ ಶುಕ್ರವಾರ ಸಾಂಪ್ರದಾಯಿಕ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.

ಶಾಲೆಯ ಆವರಣದಲ್ಲಿ ರಂಗೋಲಿ ಬಿಡಿಸಿ, ಕಬ್ಬಿನ ಜಲ್ಲೆ ಜೋಡಿಸಿ, ದವಸಧಾನ್ಯ ರಾಶಿ ಹಾಕಿ ಪೂಜೆ ಸಲ್ಲಿಸಿದ ವಿದ್ಯಾರ್ಥಿಗಳು ಶಿಕ್ಷಕರಿಂದ ಸಂಕ್ರಾಂತಿ ಹಬ್ಬದ ಮಹತ್ವದ ಕುರಿತು ತಿಳಿದುಕೊಂಡರು.

ಮುಖ್ಯಶಿಕ್ಷಕ ಚಂದ್ರಶೇಖರ ಹಡಪದ್ ಮಾತನಾಡಿ, ಸಂಕ್ರಾಂತಿಯ ಸೊಗಸೇ ಬೇರೆ ಇದು ಜನರು ವರ್ಷವಿಡೀ ದುಡಿದ ಜಾನುವಾರುಗಳನ್ನು ಸಿಂಗರಿಸುವ ಕೃತಜ್ಞ ಭಾವ ಮೂಡಿಸುವ ಹಬ್ಬ. ಅವುಗಳ ಮೈತೊಳೆದು ಕೊರಳಿಗೆ ಗೆಜ್ಜೆ ಕಟ್ಟಿ, ಕೊಂಬಿಗೆ ಬಣ್ಣ ಬಳಿದು, ಟೇಪು ಕಟ್ಟಿ ಕಿಚ್ಚು ಹಾಯಿಸಿ, ಸಂಪ್ರದಾಯದಲ್ಲಿ ಖುಷಿ ಕಾಣುತ್ತಾರೆ. ಅಪ್ಪಟ ಗ್ರಾಮೀಣ ಹಬ್ಬವಾಗಿದೆ ಎಂದು ತಿಳಿಸಿದರು.

ADVERTISEMENT

ಈಗ ಕೃಷಿಕರ ಮನೆಯಲ್ಲಿ ದನಕರುಗಳು ಮಾಯವಾಗಿವೆ. ಅವುಗಳ ಜಾಗಕ್ಕೆ ಟ್ರಾಕ್ಟರ್ ಬಂದಿದೆ. ಸಂಪ್ರದಾಯ ಸಂಭ್ರಮ ಕಡಿಮೆಯಾಗಿದೆ. ಈ ಕಾರಣ ವಿದ್ಯಾರ್ಥಿಗಳಿಂದ ಆಚರಿಸುವ ಮೂಲಕ ಸಂಸ್ಕೃತಿಯ ಸಂಕೇತ ಮರುಕಳಿಸಬೇಕು ಸಂಸ್ಕಾರ, ವಿಶ್ವಾಸ, ಕೃತಜ್ಞತೆ ಜೊತೆಗಿನ ಹಬ್ಬದ ಖುಷಿ, ರಂಗು, ಆರೋಗ್ಯ, ನಲಿವು, ತೃಪ್ತಿ, ಹುಮ್ಮಸ್ಸು, ಸೊಬಗು, ಸಮೃದ್ಧಿ ಎಲ್ಲೆಲ್ಲೂ ಕಾಣ ಸಿಗಬೇಕು ಎಂದರು.

ಮಕ್ಕಳ ಜಾಗೃತಿ ಸಂಸ್ಥೆಯ ಪ್ರಕಾಶ್, ಶಿಕ್ಷಕರಾದ ಹನುಮಂತರಾಜು, ರಜನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.