ADVERTISEMENT

ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣ

ದೊಡ್ಡಬಳ್ಳಾಪುರ: 70 ಆಮ್ಲಜನಕ ಬೆಡ್‌ ಸೌಲಭ್ಯ, 20 ತೀವ್ರ ನಿಗಾ ಘಟಕ

​ಪ್ರಜಾವಾಣಿ ವಾರ್ತೆ
Published 18 ಜೂನ್ 2021, 4:41 IST
Last Updated 18 ಜೂನ್ 2021, 4:41 IST
ನಿರ್ಮಾಣ ಹಂತದಲ್ಲಿರುವ ಸುಸಜ್ಜಿತ ಮೇಕ್ ಶಿಫ್ಟ್ ಆಸ್ಪತ್ರೆ
ನಿರ್ಮಾಣ ಹಂತದಲ್ಲಿರುವ ಸುಸಜ್ಜಿತ ಮೇಕ್ ಶಿಫ್ಟ್ ಆಸ್ಪತ್ರೆ   

ದೊಡ್ಡಬಳ್ಳಾಪುರ:ಕೊರೊನಾ ಸೋಂಕಿತರಿಗೆ ತುರ್ತು ಚಿಕಿತ್ಸಾ ಸೌಲಭ್ಯ ಒದಗಿಸಲು ದೇಶದಾದ್ಯಂತ ಮೇಕ್ ಶಿಫ್ಟ್ ಆಸ್ಪತ್ರೆ ತೆರೆಯಲಾಗುತ್ತಿದೆ. ಈ ಯೋಜನೆಯಡಿ ದೊಡ್ಡಬಳ್ಳಾಪುರ ನಗರದ ತಾಯಿ, ಮಗು ಸರ್ಕಾರಿ ಆಸ್ಪತ್ರೆ ಸಮೀಪದಲ್ಲೇ 100 ಆಕ್ಸಿಜನೇಟೆಡ್ ಬೆಡ್‌ಗಳ ಮೇಕ್ ಶಿಫ್ಟ್ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಜಿಲ್ಲೆಗೆ ಹೆಮ್ಮೆಯ ಸಂಗತಿ.

ಮೇ 31ರಂದು ಕಂದಾಯ ಸಚಿವ ಆರ್. ಅಶೋಕ, ಸಂಸದ ಬಿ.ಎನ್. ಬಚ್ಚೇಗೌಡ, ಶಾಸಕ ಟಿ. ವೆಂಕಟರಮಣಯ್ಯ, ಎಸ್‌. ರವಿ ಅವರ ಸಮ್ಮುಖದಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದು, ಈ ತಿಂಗಳ ಅಂತ್ಯದ ವೇಳೆಗೆ ಸಾರ್ವಜನಿಕರ ಸೇವೆಗೆ ಮುಕ್ತವಾಗಲಿದೆ.

ಲೆನೆವೊ, ಗೋಲ್ಡ್ ಮ್ಯಾನ್ ಸ್ಯಾಚಸ್‌ ಕಂಪನಿಗಳು ಸಿ.ಎಸ್.ಆರ್ ನಿಧಿಯಡಿ ಒದಗಿಸಿರುವ ಅನುದಾನದಲ್ಲಿ ಮಾಡ್ಯುಲಸ್ ಸಂಸ್ಥೆ ಸಿದ್ಧಪಡಿಸಿರುವ ವಿನ್ಯಾಸದಂತೆ ಅಂದಾಜು ₹ 4 ಕೋಟಿ ವೆಚ್ಚದಲ್ಲಿ ಈ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ರಾಜ್ಯಗಳಲ್ಲಿ ಕೋವಿಡ್ ವಿಸ್ತರಿತ ಆಸ್ಪತ್ರೆಗಳ ನಿರ್ಮಾಣಕ್ಕಾಗಿ ರಾಜ್ಯಗಳಿಗೆ ಸಹಾಯ ಮಾಡಲು ಐಐಟಿಎಂನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿ ಮೂಲಸೌಕರ್ಯ ಹೆಚ್ಚಿಸುವ ಹಾಗೂ ಪೋಷಿಸುವ ಸಲುವಾಗಿ ಸರ್ಕಾರದ ಪಿಎಸ್‌ಎ ಕಚೇರಿ ಹಾಗೂ ಮಾಡ್ಯುಲಸ್ ಹೌಸಿಂಗ್ ಆರಂಭಿಕ ಹೆಜ್ಜೆಯನ್ನಿಟ್ಟಿದೆ. ಮೆಡಿಕ್ಯಾಬ್ ನಕಾರಾತ್ಮಕ ಒತ್ತಡದ ಸನ್ನಿವೇಶದಲ್ಲಿಯೂ ಕಾರ್ಯ ನಿರ್ವಹಣೆ ಮಾಡಲಿದ್ದು, ಅತಿ ಕಡಿಮೆ ಅವಧಿಯಲ್ಲಿ ನಿರ್ಮಾಣ ಮಾಡಿಕೊಳ್ಳಬಹುದಾಗಿದೆ.

ADVERTISEMENT

‘ಇದು ಪೂರ್ವ ನಿರ್ಮಿತ ಮತ್ತು ಪೂರ್ವ ಪ್ರಾಮಾಣೀಕೃತ ರಚನೆಯಾಗಿದೆ. ಮೆಡಿಕ್ಯಾಬ್‌ನಲ್ಲಿ ಆರೋಗ್ಯ ರಕ್ಷಕ ಕಾರ್ಯಕರ್ತರ ವಲಯ, ಸ್ಕ್ರೀನಿಂಗ್ ಮತ್ತು ವೀಕ್ಷಣಾ ವಲಯ, ಪ್ರತ್ಯೇಕ ವಾರ್ಡ್ ವಲಯ, ಐಸಿಯು ವಾರ್ಡ್ ವಲಯ ಎಂದು ನಾಲ್ಕು ವಲಯಗಳಾಗಿ ವಿಂಗಡಿಸ ಲಾಗಿದೆ’ ಎನ್ನುತ್ತಾರೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್.

ಈ ಆಸ್ಪತ್ರೆಯು 70 ಆಮ್ಲಜನಕ ಬೆಡ್‌ಗಳು, 20 ಐಸಿಯು (ತೀವ್ರ ನಿಗಾ ಘಟಕ) ಬೆಡ್‌ಗಳು, 10 ವೆಂಟಿಲೇಟರ್ ಬೆಡ್‌ಗಳು ಹಾಗೂ 2 ಕೆ.ಎಲ್. ಆಮ್ಲಜನಕ ಜನರೇಟರ್ ವ್ಯವಸ್ಥೆ ಹೊಂದಿರಲಿದೆ. ಈ ಆಸ್ಪತ್ರೆಯ ಲೇಔಟ್ ನಿರ್ಮಾಣ ಕಾಮಗಾರಿಯನ್ನು ದೊಡ್ಡಬಳ್ಳಾಪುರದ ಇಂಡೋ ಎಂಐಎಂ ಪ್ರೈವೇಟ್ ಲಿಮಿಟೆಡ್ ನಿರ್ವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.