ADVERTISEMENT

ಆನೇಕಲ್: ಮಹಿಳೆಯರಿಗೆ ಧ್ವನಿಯಾದ ಮಮತಾ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2023, 6:13 IST
Last Updated 8 ಮಾರ್ಚ್ 2023, 6:13 IST
ಮಮತಾ ಯಜಮಾನ್
ಮಮತಾ ಯಜಮಾನ್   

ಆನೇಕಲ್: ಪಟ್ಟಣದ ಮಮತಾ ಯಜಮಾನ್‌ ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಮಹಿಳಾ ಹಕ್ಕುಗಳು ಮತ್ತು ಸ್ತ್ರೀಯರ ಸಬಲೀಕರಣಕ್ಕಾಗಿ ನಡೆದ ಹೋರಾಟಗಳಲ್ಲಿ ಪಾಲ್ಗೊಂಡ ಹೆಗ್ಗಳಿಕೆ ಹೊಂದಿದ್ದಾರೆ.

ಡಿಪ್ಲೊಮಾ ಇನ್‌ ಕಮರ್ಷಿಯಲ್‌ ಪ್ರಾಕ್ಟಿಸ್‌ ಶಿಕ್ಷಣ ಮುಗಿಸಿದ ನಂತರ ಅವರು ಮಹಿಳಾ ಸಾಮಖ್ಯ ಎಂಬ ಸಂಸ್ಥೆ ಸೇರಿಕೊಂಡರು. ಇಲ್ಲಿ ಮಹಿಳೆಯರ ಹಕ್ಕುಗಳು, ಸಬಲೀಕರಣ, ಮಹಿಳೆಯರ ಮೇಲೆ ನಡೆಯುವ ಕೌಟುಂಬಿಕ ದೌರ್ಜನ್ಯಗಳ ಬಗ್ಗೆ ಹೆಚ್ಚಿನ ಅರಿವು ಬೆಳೆಸಿಕೊಂಡರು. ಗ್ರಾಮೀಣ ಪ್ರದೇಶದಲ್ಲಿ ಸಾಮಾಜಿಕ ಮತ್ತು ಆರ್ಥಿಕವಾಗಿ ಹಿಂದುಳಿದ ಗುಂಪುಗಳನ್ನು ಗುರುತಿಸಿ ಮಹಿಳೆಯರ ಶಿಕ್ಷಣ ಮತ್ತು ಸಬಲೀಕರಣಕ್ಕಾಗಿ ಶ್ರಮಿಸುತ್ತಿದ್ದಾರೆ.

ಮಹಿಳಾ ಹಕ್ಕುಗಳ ಸಂಘಟನೆಯಾದ ವಿಮೋಚನಾ ಸಂಸ್ಥೆಯೊಂದಿಗೆ ಕೆಲಸ ಮಾಡಿ ವರದಕ್ಷಿಣೆ, ವಿವಾಹಿತ ಮಹಿಳೆಯರ ಅಸಹಜ ಸಾವುಗಳನ್ನು ತಡೆಯುವ ಬಗ್ಗೆ ಅಭಿಯಾನ ನಡೆಸಿದ್ದು ಅವರ ಹಿರಿಮೆ.

ADVERTISEMENT

ರಂಗಭೂಮಿ ಬಗ್ಗೆ ವಿವಿಧ ರಾಜ್ಯಗಳಲ್ಲಿ ತರಬೇತಿ ಪಡೆದು ಮಹಿಳೆಯರ ನಿತ್ಯ ಜೀವನದ ಸಮಸ್ಯೆಗಳ ಬಗ್ಗೆ ಬೀದಿನಾಟಕ ಪ್ರದರ್ಶನ ಮಾಡುವ ಮೂಲಕ ಮಹಿಳೆಯರ ಸಮಸ್ಯೆಗಳಿಗೆ ದನಿಯಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

ಗಮನ ಮಹಿಳಾ ಸಮೂಹ ಪ್ರಾರಂಭಿಸಿ ರೈತರು, ಜನಪ್ರತಿನಿಧಿಗಳು, ಆದಿವಾಸಿಗಳು, ಲೈಂಗಿಕ ಅಲ್ಪಸಂಖ್ಯಾತರು, ಗ್ರಾಮೀಣ ಮಹಿಳೆಯರು, ಯುವಕರು ಸೇರಿದಂತೆ ವಿವಿಧ ಸಮುದಾಯಗಳೊಂದಿಗೆ ನ್ಯಾಯ, ಶಾಂತಿ, ಪರಿಸರ ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುವಲ್ಲಿ ಶ್ರಮಿಸಿದ್ದಾರೆ.

ನೊಂದ ಮಹಿಳೆಯರು ಸಮಸ್ಯೆಗಳ ಬಗ್ಗೆ ಪೊಲೀಸ್‌ ಠಾಣೆಗೆ ದೂರು ನೀಡಲು ಭಯಪಡುವ ಪರಿಸ್ಥಿತಿ ಹಲವೆಡೆಯಿದೆ. ಈ ನಿಟ್ಟಿನಲ್ಲಿ ಮಹಿಳೆಯರು ಧೈರ್ಯದಿಂದ ತಮ್ಮ ಸಮಸ್ಯೆಗಳ ಬಗ್ಗೆ ಪೊಲೀಸ್‌ ಠಾಣೆ, ನ್ಯಾಯಾಲಯ, ಮಹಿಳಾ ಹಕ್ಕುಗಳ ಆಯೋಗ ಸೇರಿದಂತೆ ಎಲ್ಲೆಡೆ ತಮ್ಮ ಅಹವಾಲು ಸಲ್ಲಿಸುವಂತೆ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಶ್ರಮಿಸುತ್ತಿರುವ ಮಮತಾ ಯಜಮಾನ್‌ ಅವರು ಮಹಿಳೆಯರ ಧ್ವನಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.